Odisha Train Accident: ದಿನ ದಿನಕ್ಕೂ ಏರುತ್ತಿದೆ ಪ್ರಯಾಣಿಕರ ಸಾವಿನ ಸಂಖ್ಯೆ!
ಒಡಿಶಾ: ಭೀಕರ ರೈಲು ದುರಂತ ಸಂಭವಿಸಿ 15 ದಿನಗಳೇ ಕಳೆದರೂ ಸಾವಿನ ಆರ್ತನಾದ ನಿಲ್ಲುತ್ತಿಲ್ಲ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಗಾಯಗೊಂಡು ಚಿಕಿತ್ಸೆ ಪೆಡೆಯುತ್ತಿರುವ ಹಲವು ಪ್ರಯಾಣಿಕರ ಪರಿಸ್ಥಿತಿ ಚಿಂತಾಜನಕ. ಹೀಗಾಗಿ ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. 2 ದಿನದ ಅಂತರದಲ್ಲಿ ಮತ್ತಿಬ್ಬರು ಮೃತಪಟ್ಟಿದ್ದಾರೆ.
ಜೂನ್ 2ರಂದು ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ 3 ರೈಲುಗಳ ನಡುವೆ ಸಂಭವಿಸಿದ್ದ ಭೀಕರ ರೈಲು ಅಪಘಾತ ಇನ್ನೂ ಜನರ ಮನಸ್ಸಿಂದ ಮರೆಯಾಗಿಲ್ಲ. ಭಾರತ ಮಾತ್ರವಲ್ಲ ಇಡೀ ಜಗತ್ತೇ ಘಟನೆ ಕಂಡು ಬೆಚ್ಚಿಬಿದ್ದಿತ್ತು, ಸಾವಿನ ಸಂಖ್ಯೆ ನೋಡಿ ಮರುಗಿತ್ತು. ಹೀಗೆ 288 ಜನರ ಜೀವ ಕಸಿದಿದ್ದ ಭೀಕರ ರೈಲು ಅಪಘಾತ, ಮೊನ್ನೆ ಮತ್ತೆ ಒಬ್ಬರ ಜೀವವನ್ನ ತೆಗೆದಿತ್ತು. ಈಗ ಮತ್ತೊಬ್ಬ ಪ್ರಯಾಣಿಕ ಕೂಡ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ 290ಕ್ಕೆ ಏರಿಕೆ ಕಂಡಿದೆ. ಹಾಗೇ ಇನ್ನೂ ನೂರಾರು ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ಪೆಟ್ಟಿಗೆ ಜೀವವೇ ಉಳಿಯಲಿಲ್ಲ
ರೈಲು ಅಪಘಾತ ಸಂಭವಿಸಿದ್ದ ದಿನ ತೀವ್ರವಾಗಿ ಗಾಯಗೊಂಡಿದ್ದ 200 ಪ್ರಯಾಣಿಕರನ್ನು ಕಟಕ್‌ನ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬಿಹಾರ ನಿವಾಸಿ ಪ್ರಕಾಶ್ ರಾಮ್ ಮೃತಪಟ್ಟಿದ್ದಾರೆ. ಗಾಯಾಳು ಸಾವಿನ ಕುರಿತು ಆಸ್ಪತ್ರೆ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹ ಪ್ರಕಾಶ್ ಕುಟುಂಬಕ್ಕೆ ಹಸ್ತಾಂತರವಾಗಲಿದೆ. ಮೊನ್ನೆ ಕೂಡ ವಿಜಯ್ ಪಾಸ್ವಾನ್ ಎಂಬ ಇನ್ನೊಬ್ಬ ಗಾಯಾಳು ಇದೇ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಇನ್ನೂ 3 ಗಾಯಾಳುಗಳ ಪರಿಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪಿದ್ದು, ಇದೇ ಆಸ್ಪತ್ರೆಯಲ್ಲಿ ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆಯಂತೆ.
ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ?
ಭೀಕರ ಅಪಘಾತ ಸಂಭವಿಸಿದ ದಿನ 1000ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು ಎನ್ನಲಾಗಿತ್ತು. ಈ ಪೈಕಿ ಈಗಾಗಲೇ ಬಹುತೇಕರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದರೂ, ಇನ್ನೂ ಹಲವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆ ಆಗುವ ಕುರಿತು ಅಧಿಕಾರಿಗಳಿಗೆ ಆತಂಕ ಇದೆ. ಆದರೂ ಗಾಯಾಳುಗಳ ಜೀವ ಉಳಿಸಲು ವೈದ್ಯರು ಹಗಲು ರಾತ್ರಿ ಎನ್ನದೆ ಚಿಕಿತ್ಸೆ ನೀಡಿ, ಕಾಳಜಿ ವಹಿಸುತ್ತಿದ್ದಾರೆ. ಆದ್ರೂ ಸಾವಿನ ಸಂಖ್ಯೆ ಏರುತ್ತಲೇ ಇರುವುದು ದುರಂತ. ರೇಲ್ವೆ ಇಲಾಖೆ ಕೂಡ ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಗಾಯಾಳುಗಳ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆಯುತ್ತಿದೆ.

₹10 ಲಕ್ಷ ಪರಿಹಾರ ಘೋಷಣೆ
ಮತ್ತೊಬ್ಬ ಪ್ರಯಾಣಿಕನ ಸಾವಿನ ಮೂಲಕ ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 290ಕ್ಕೆ ಏರಿಕೆಯಾಗಿದೆ. ಹಾಗೇ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹10 ಲಕ್ಷ ಮತ್ತು ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರಿಗೆ ₹2 ಲಕ್ಷ ರೂಪಾಯಿ ಸೇರಿದಂತೆ ಸಣ್ಣಪುಟ್ಟ ಗಾಯಗಳೊಂದಿಗೆ ನರಳುತ್ತಿರುವ ಇತರ ಪ್ರಯಾಣಿಕರಿಗೆ 50 ಸಾವಿರ ರೂಪಾಯಿ ಪರಿಹಾರವನ್ನ ಈಗಾಗಲೇ ರೈಲ್ವೆ ಇಲಾಖೆ ಘೋಷಿಸಿದೆ. ಹಾಗೇ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಿ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುತ್ತಿದೆ. ಇಷ್ಟೆಲ್ಲಾ ನೋವಿನ ನಡುವೆಯೇ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ.
ಬಿಹಾರ ಸರ್ಕಾರದಿಂದ ₹2 ಲಕ್ಷ!
ಒಡಿಶಾ ರೈಲು ಅಪಘಾತದ ಬಳಿಕ ಕೇಂದ್ರ ರೈಲ್ವೆ ಇಲಾಖೆ ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಘೋಷಿಸಿದೆ. ಬಿಹಾರ ರಾಜ್ಯದ 53 ಪ್ರಯಾಣಿಕರು ಕೂಡ ದುರಂತದಲ್ಲಿ ಸಾವು ಕಂಡಿದ್ದು, ತಮ್ಮ ರಾಜ್ಯದ ಮೃತರ ಕುಟುಂಬಕ್ಕೆ ಬಿಹಾರ ಸರ್ಕಾರ ನೆರವು ನೀಡುತ್ತಿದೆ. ಬಿಹಾರ ಮೂಲದ ಮೃತ ಪ್ರಯಾಣಿಕರ ಕುಟುಂಬಕ್ಕೆ ₹2 ಹಾಗೂ ಗಾಯಾಳು ಕುಟುಂಬಕ್ಕೆ ₹50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಹೀಗೆ ರೇಲ್ವೆ ಇಲಾಖೆ ನೀಡುತ್ತಿರುವ ₹10 ಲಕ್ಷ ಪರಿಹಾರದ ಜೊತೆಗೆ ಬಿಹಾರ ಹೆಚ್ಚುವರಿ ₹2 ಲಕ್ಷ ನೀಡಲಿದೆ.












Click it and Unblock the Notifications