ಗೆಳತಿಯ ತಂದೆಯ ಫೋನ್ ಕದ್ದು ಸಿಎಂ ಯೋಗಿಗೆ ಕೊಲೆ ಬೆದರಿಕೆ ಹಾಕಿದ ಭೂಪ- ಕಾರಣ ಏನು ಗೊತ್ತಾ?
ಲಕ್ನೋ ಏಪ್ರಿಲ್ 26: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜೀವ ಬೆದರಿಕೆ ಹಾಕಲಾಗಿರುವ ವಿಚಾರ ಈಗಾಗಲೇ ತಿಳಿದಿದೆ. ಇದೀಗ ಪೊಲೀಸರು ಈ ವಿಚಾರದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆ ಹಾಕಿದ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಯುವಕ ಹಂಚಿಕೊಂಡ ಮಾಹಿತಿ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ಯುವಕ ಬೆದರಿಕೆ ಹಾಕಿದ್ದ ಫೋನ್ ಸಂಖ್ಯೆ ಅವನ ಗೆಳತಿಯ ತಂದೆಯದ್ದು. ಆರೋಪಿ ಅಮೀನ್ ತುರ್ತು ಸಂಖ್ಯೆ 112 ಗೆ ಕರೆ ಮಾಡಿ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆ ಕರೆ ಕೊಂಚ ಗೊಂದಲದ ವಾತಾವರಣವನ್ನೇ ಸೃಷ್ಟಿ ಮಾಡಿತ್ತು. ಕೂಡಲೆ ಎಚ್ಚತ್ತ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಆರಂಭದಲ್ಲಿ ಕರೆ ಬಂದ್ ಫೋನ್ ಅನ್ನು ಟ್ರ್ಯಾಕ್ ಮಾಡುವ ಮೂಲಕ ಪೊಲೀಸರು ಓರ್ವ ವ್ಯಕ್ತಿಯ ಬಳಿ ಹೋಗಿದ್ದಾರೆ. ಆದರೆ ಆ ವ್ಯಕ್ತಿ 10 ದಿನಗಳ ಹಿಂದೆ ತನ್ನ ಮೊಬೈಲ್ ಫೋನ್ ಕಳ್ಳತನವಾಗಿತ್ತು ಎಂದು ತಿಳಿಸಿದ್ದಾರೆ. ಹಾಗಾಗಿ ನಾನು ಈ ಹಿಂದೆ ಈ ಫೋನ್‌ನಿಂದ ಯಾವುದೇ ಕರೆ ಮಾಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲಿಗೆ ಫೋನ್ ಮಾಡಿದ ವ್ಯಕ್ತಿ ಯಾರು ಎಂಬ ಪ್ರಶ್ನೆ ಉದ್ಭವವಾಗಿತ್ತು.
ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಂಕಿತಾ ಶರ್ಮಾ ವ್ಯಕ್ತಿಯೊಂದಿಗೆ ಫೋನ್ ಎಲ್ಲಿ ಯಾವಾಗ ಕಳೆದುಕೊಂಡರು ಎಲ್ಲಾ ವಿಚಾರಗಳನ್ನು ಟ್ರ್ಯಾಕ್ ಮಾಡಿದ್ದಾರೆ. ಆಗ ಬೆದರಿಕೆ ಕರೆ ಮಾಡಿದ್ದು ಅಮೀನ್ ಎಂಬ ಯುವಕ ಎಂದು ತಿಳಿದು ಬಂದಿದೆ. ಆರೋಪಿ ಯುವಕನನ್ನು ಬೇಗಂಪುರದಿಂದ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆತ ಬೆದರಿಕೆ ಹಾಕಿದ್ದ ಫೋನ್ ಅನ್ನು ವಶಪಡೆದುಕೊಳ್ಳಲಾಗಿದೆ.

ತನ್ನ ಗೆಳತಿಯ ತಂದೆಯೊಂದಿಗೆ ಕೋಪಗೊಂಡಿದ್ದ ಅಮೀನ್ ಈ ಸಂಚು ರೂಪಿಸಿದ್ದಾನೆ ಎಂದು ಅಂಕಿತಾ ಶರ್ಮಾ ಹೇಳಿದ್ದಾರೆ. ವಾಸ್ತವವಾಗಿ ಅಮೀನ್‌ನ ಗೆಳತಿಯ ತಂದೆ ಇಬ್ಬರ ಸಂಬಂಧವನ್ನು ಒಪ್ಪಿರಲಿಲ್ಲ. ಇದರಿಂದಾಗಿ ಅಮೀನ್ ಗೆಳತಿ ತಂದೆಯ ವಿರುದ್ದ ಈ ಪಿತೂರಿಯನ್ನು ರೂಪಿಸಿದ್ದಾನೆ.
ಅಮೀನ್ ಆ ಹುಡುಗಿಯನ್ನು ಮದುವೆಯಾಗಲು ಬಯಸಿದ್ದನು. ಇದಕ್ಕೆ ಇ-ರಿಕ್ಷಾ ಓಡಿಸುವ ಅಮೀನ್‌ನ ಗೆಳತಿಯ ತಂದೆ ಒಪ್ಪಿರಲಿಲ್ಲ. ಅದಕ್ಕಾಗಿಯೇ ಅವನು ಹುಡುಗಿಯ ತಂದೆಯ ವಿರುದ್ಧ ಈ ಸಂಚು ರೂಪಿಸಿದ್ದನು ಎಂದು ಅಮೀನ್‌ನ ನೆರೆಹೊರೆಯವರು ವಿಚಾರಣೆಯ ಸಮಯದಲ್ಲಿ ತಿಳಿಸಿದ್ದಾರೆ. ಕಸ್ಟಡಿಗೆ ಪಡೆದ ಅಮೀನ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ತನ್ನ ಗೆಳತಿಯ ತಂದೆಯ ಫೋನ್ ಕದ್ದಿರುವುದಾಗಿ ಅಮೀನ್ ತಪ್ಪೊಪ್ಪಿಕೊಂಡಿದ್ದಾನೆ. 10 ದಿನಗಳ ಹಿಂದೆ ಈ ಫೋನ್ ಕದ್ದಿದ್ದ ಆತ, ಈ ಫೋನ್ ಗೆ ಸಿಮ್ ಕಾರ್ಡ್ ಹಾಕಿ ಸಿಎಂ ಯೋಗಿ ಅವರಿಗೆ ಬೆದರಿಕೆ ಹಾಕಿದ್ದ. ಆರೋಪಿ ಅಮೀನ್ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.












Click it and Unblock the Notifications