ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರ ಫೋಟೋ ಇದ್ದ ರಾಹುಲ್ ಟ್ವೀಟ್ ತೆಗೆದು ಹಾಕಿದ ಟ್ವಿಟ್ಟರ್
ನವದೆಹಲಿ, ಆ.07: ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಅತ್ಯಾಚಾರ, ಸಜೀವ ದಹನಕ್ಕೆ ಒಳಗಾದ ಒಂಬತ್ತು ವರ್ಷದ ದಲಿತ ಬಾಲಕಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಫೋಟೋದೊಂದಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ ಅನ್ನು ಟ್ವಿಟ್ಟರ್ ತನ್ನ ವೇದಿಕೆಯಿಂದ ತೆಗೆದು ಹಾಕಿದೆ.
ರಾಹುಲ್ ಗಾಂಧಿ ಟ್ವೀಟ್ಟರ್ ಖಾತೆಗೆ ಹೋದಾಗ ಬಾಲಕಿಯ ಕುಟುಂಬಸ್ಥರೊಂದಿನ ಫೋಟೋ ಇರುವ ಟ್ವೀಟ್ "ಇನ್ನು ಮುಂದೆ ಲಭ್ಯವಿಲ್ಲ" ಎಂದು ತೋರಿಸುತ್ತಿದೆ. ಹಾಗೆಯೇ ಟ್ವೀಟ್ ಮೇಲೆ ಕ್ಲಿಕ್ ಮಾಡಿದಾಗ, ಈಗ "ಈ ಟ್ವೀಟ್ ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸಿದೆ" ಎಂದು ಬರೆಯುವ ಸಂದೇಶ ಕಾಣಿಸಿಕೊಂಡಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಬಾಲಕಿಯ ಕುಟುಂಬಸ್ಥರನ್ನು ಭೇಟಿಯಾಗಿದ್ದರು. ಈ ಭೇಟಿಯ ಫೋಟೋವನ್ನು ಟ್ವೀಟ್ ಮಾಡಿ, "ಪೋಷಕರ ಕಣ್ಣೀರು ಒಂದೇ ಒಂದು ಮಾತನ್ನು ಹೇಳುತ್ತಿದೆ. ಅವರ ಮಗಳು, ಈ ದೇಶದ ಮಗಳು ನ್ಯಾಯಕ್ಕೆ ಅರ್ಹಳು ಮತ್ತು ಈ ನ್ಯಾಯದ ಹಾದಿಯಲ್ಲಿ ನಾನು ಅವರೊಂದಿಗೆ ಇದ್ದೇನೆ," ಎಂದು ಹೇಳಿದ್ದರು.

ರಾಹುಲ್ ಗಾಂಧಿ ಬುಧವಾರ ಹುಡುಗಿಯ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದರು ಮತ್ತು ನ್ಯಾಯದ ಹಾದಿಯಲ್ಲಿ ಅವರೊಂದಿಗೆ ಇದ್ದೇನೆ ಮತ್ತು "ಒಂದು ಇಂಚು ಸಹ ಹಿಂದೆ ಸರಿಯುವುದಿಲ್ಲ" ಎಂದು ಹೇಳಿದ್ದರು. "ನಾನು ಕುಟುಂಬದೊಂದಿಗೆ ಮಾತನಾಡಿದೆ. ಅವರಿಗೆ ನ್ಯಾಯ ಬೇಕು ಮತ್ತು ಬೇರೇನೂ ಇಲ್ಲ. ನಮಗೆ ನ್ಯಾಯ ದೊರಕುತ್ತಿಲ್ಲ. ನಮಗೆ ಸಹಾಯ ಮಾಡಬೇಕು ಎಂದು ಕುಟುಂಬಸ್ಥರು ಹೇಳುತ್ತಾರೆ. ನಾವು ಅದನ್ನು ಮಾಡುತ್ತೇವೆ. ನಾನು ನಿಮ್ಮೊಂದಿಗೆ ನಿಂತಿದ್ದೇನೆ. ನ್ಯಾಯ ಸಿಗುವವರೆಗೂ ರಾಹುಲ್ ಗಾಂಧಿ ಅವರ ಜೊತೆಯಲ್ಲಿಯೇ ಇರುತ್ತಾನೆ," ಎಂದಿದ್ದರು.
ಕುಟುಂಬದ ಫೋಟೋವನ್ನು ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಈ ಟ್ವೀಟ್ ಬಾಲನ್ಯಾಯ ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ರಾಹುಲ್ ಮೇಲೆ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸ್ ಮತ್ತು ಟ್ವಿಟರ್‌ಗೆ ಸೂಚಿಸಿತ್ತು.
ಈ ಫೋಟೋದಲ್ಲಿ ಸಂತ್ರಸ್ತೆಯ ತಂದೆ ಮತ್ತು ತಾಯಿಯ ಮುಖಗಳನ್ನು ನೋಡಬಹುದು, ಇದು ಬಾಲಕಿಯ ಗುರುತನ್ನು ಬಹಿರಂಗಪಡಿಸುತ್ತದೆ. ಆದ್ದರಿಂದ ಟ್ವಿಟ್ಟರ್‌ನಲ್ಲಿ ಅಪ್ತಾಪ್ತ ಬಾಲಕಿಯ ಕುಟುಂಬಸ್ಥರ ಫೋಟೋ ಹಂಚಿಕೆ, ಪೋಕ್ಸೊ ಕಾಯ್ದೆಯ ಸೆಕ್ಷನ್ 23, ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 74, ಐಪಿಸಿ ಸೆಕ್ಷನ್ 228 ಎ ಉಲ್ಲಂಘನೆಯಾಗಿದೆ ಎಂದು ಮಕ್ಕಳ ಹಕ್ಕುಗಳ ಸಂಸ್ಥೆ ಹೇಳಿತ್ತು.
ಟ್ವಿಟ್ಟರ್ ಖಾತೆ ನಿರ್ವಹಿಸುತ್ತಿರುವವರ ವಿರುದ್ಧ ಕ್ರಮಕ್ಕಾಗಿ ದೂರನ್ನು ವರ್ಗಾಯಿಸಲಾಗಿದ್ದು, ಟ್ವಿಟ್ಟರ್ ಫ್ಲಾಟ್ ಫಾರಂನಿಂದ ಟ್ವೀಟ್ ಗಳನ್ನು ತೆಗೆಯಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚಿಸಿತ್ತು. ಹಾಗೆಯೇ ಮೂರು ದಿನಗಳೊಳಗೆ ಈ ವಿಚಾರಕ್ಕೆ ಕ್ರಮ ತೆಗೆದುಕೊಂಡ ವರದಿ ಕಳುಹಿಸಬೇಕು ಎಂದು ಆಯೋಗ ಹೇಳಿತ್ತು.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಸಂಬಂಧ ಟ್ವೀಟರ್ ಸ್ಥಾನಿಕ ಆಡಳಿತಾಧಿಕಾರಿಗೆ ಪತ್ರವೊಂದನ್ನು ಕಳುಹಿಸಿದೆ. ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಸಂತ್ರಸ್ತೆಯ ಕುಟುಂಬಸ್ಥರ ಫೋಟೋವೊಂದನ್ನು ಹಂಚಿಕೊಂಡಿದ್ದು, ಬಾಲಕಿಯ ತಂದೆ ತಾಯಿ ಎಂದು ಹೇಳಿಕೊಂಡಿರುವ ಬಗ್ಗೆ ದೂರು ಸ್ವೀಕರಿಸಿರುವುದಾಗಿ ಹೇಳಿದೆ.
ಭಾನುವಾರ ದಲಿತ ಬಾಲಕಿಯೋರ್ವಳು ಕೂಲರ್‌ನಿಂದ ಕುಡಿಯುವ ನೀರನ್ನು ತರಲು ಶ್ಮಶಾನಕ್ಕೆ ಹೋಗಿದ್ದು ಆದರೆ ವಾಪಾಸ್ ಬಂದಿಲ್ಲ. ಸಂಜೆ 6 ಗಂಟೆ ಸುಮಾರಿಗೆ, ಶವದಹನ ಮಾಡುವ ರಾಧೇಶ್ಯಾಮ್ ಬಾಲಕಿಯ ಶವವನ್ನು ನೋಡಿ, ಆಕೆಯ ತಾಯಿಯನ್ನು ಶ್ಮಶಾನಕ್ಕೆ ಕರೆದು ಶವವನ್ನು ತೋರಿಸಿದರು. ಆಕಸ್ಮಿಕವಾಗಿ ಆಕೆಗೆ ವಿದ್ಯುತ್ ಸ್ಪರ್ಶವಾಗಿದೆ ಎಂದು ಹೇಳಿಕೊಂಡರು. ಮಣಿಕಟ್ಟು ಮತ್ತು ಮೊಣಕೈಯಲ್ಲಿ ಸುಟ್ಟ ಗುರುತುಗಳಿವೆ. ತುಟಿಗಳು ನೀಲಿ ಬಣ್ಣದ್ದಾಗಿವೆ ಎಂದು ಆಕೆಯ ತಾಯಿ ಹೇಳಿದ್ದರು. ನಂತರ ಪೂಜಾರಿ ಮತ್ತು ಆತನ ಸಹಚರರು ಪೊಲೀಸರಿಗೆ ಮಾಹಿತಿ ನೀಡದಂತೆ ತಾಯಿಗೆ ಹೇಳಿದರು. ಆದಾಗ್ಯೂ, ನಂತರ, ಪೋಷಕರು ಎಚ್ಚೆತ್ತು ಪೊಲೀಸರಿಗೆ ಮಾಹಿತಿ ನೀಡಿದರು.
ಭಯಾನಕ ಘಟನೆಯ ಮೇಲೆ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿತು. ದೇಶದಲ್ಲಿ ಭಯ ಹುಟ್ಟಿಸುವಂತಹ ಲೈಂಗಿಕ ದೌರ್ಜನ್ಯ ಘಟನೆಯ ರೂಪ ಇದು ತಳೆದಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಟೀಕಿಸಿದ್ದಾರೆ. ಈ ಅಪರಾಧವು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಹೋಲಿಕೆ ಮಾಡಲಾಗಿದೆ. ಈ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ರಾತ್ರೋರಾತ್ರಿ ಸಂತ್ರಸ್ತೆಯ ಮೃತದೇಹದ ಅಂತ್ಯ ಸಂಸ್ಕಾರ ನಡೆಸಿದ್ದು, ಈ ವಿಚಾರದ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಪೊಲೀಸರ ಅಮಾನತು ಕೂಡಾ ನಡೆದಿತ್ತು. ಹಾಗೆಯೇ ಸಂತ್ರಸ್ತೆಯ ಕುಟುಂಬಸ್ಥರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಲಾಗಿತ್ತು.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications