Cyclone Mocha: ಇಂದು ರಾತ್ರಿ ತೀವ್ರ ಸ್ವರೂಪ ಪಡೆಯಲಿರುವ ಮೋಚಾ ಚಂಡಮಾರುತ- ಹಲವೆಡೆ ಐಎಂಡಿ ಎಚ್ಚರಿಕೆ!
ಬಂಗಾಳ ಕೊಲ್ಲಿಯಲ್ಲಿ 'ಮೋಚಾ' ಚಂಡಮಾರುತ ಇಂದು ತೀವ್ರ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದಾಗಿ ಹಲವು ರಾಜ್ಯಗಳಲ್ಲಿ ತೀವ್ರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ. ಭಾರತೀಯ ಹವಾಮಾನ ಇಲಾಖೆ ಮೋಚಾ ಚಂಡಮಾರುತದ ಬಗ್ಗೆ ಇತ್ತೀಚಿನ ನವೀಕರಣವನ್ನು ಬಿಡುಗಡೆ ಮಾಡಿದೆ.
ಈ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಏನು ಹೇಳಿದೆ ಎಂಬುದನ್ನು ವಿವರವಾಗಿ ತಿಳಿಯೋಣ.
ಚಂಡಮಾರುತದ ಪರಿಣಾಮ ಹಲವು ರಾಜ್ಯಗಳಲ್ಲಿ ಕಂಡುಬರಲಿದ್ದು, ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಚಂಡಮಾರುತ ಒಡಿಶಾ, ಬಂಗಾಳ ಮತ್ತು ಅಂಡಮಾನ್-ನಿಕೋಬಾರ್ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಆದ್ದರಿಂದ ಇಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ಚಂಡಮಾರುತದ ಪರಿಣಾಮ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ಮೇಲೂ ಆಗಲಿದ್ದು, ಇಲ್ಲಿಯೂ ಸಹ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆಗೆ ಮ್ಯಾನ್ಮಾರ್‌ನಲ್ಲಿ ಸೈಕ್ಲೋನ್‌ನಿಂದಾಗಿ ಭೂಕುಸಿತ ಕೂಡ ಆಗಬಹುದು ಎಂದು ಇಲಾಖೆ ಹೇಳಿದೆ. ಇದರಿಂದಾಗಿ ಸಣ್ಣ ಹಡಗುಗಳು ಮತ್ತು ಮೀನುಗಾರರು ಸಮುದ್ರಕ್ಕೆ ಇಳಿಯುವುದನ್ನು ತಡೆಯಲಾಗಿದೆ.
ಈ ಚಂಡಮಾರುತ ಮುಂದೆ ಚಲಿಸುವ ಸಮಯದಲ್ಲಿ ಗಾಳಿಯು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಬೀಸಬಹುದು. ಹೀಗಾಗಿ ಪ್ರವಾಸಿಗರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮೇ 12 ರವರೆಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ.
ಮೋಚಾದಿಂದಾಗುವ ಪರಿಣಾಮವನ್ನು ತಪ್ಪಿಸಲು ಪಶ್ಚಿಮ ಬಂಗಾಳದಲ್ಲಿ ಎನ್‌ಡಿಆರ್‌ಎಫ್‌ನ 6 ತಂಡಗಳನ್ನು ನಿಯೋಜಿಸಲಾಗಿದೆ. ಉತ್ತರ 24 ಪರಗಣಗಳಲ್ಲಿರುವ ರಾಮನಗರ ಬ್ಲಾಕ್ ನಂಬರ್ ಒನ್, ರಾಮನಗರ 2, ಹಲ್ದಿಯಾ, ಗೋಸಾಬ ಕುಲ್ತಾಲಿ, ಕಾಕದ್ವೀಪ್, ಹಿಂಗಲ್‌ಗಂಜ್ ಮತ್ತು ಸಂದೇಶಖಾಲಿಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
ಇದರೊಂದಿಗೆ ಕೋಸ್ಟ್ ಗಾರ್ಡ್ ತಂಡವು ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಲು ಸಿದ್ಧವಾಗಿದೆ.

ಒಡಿಶಾದ 18 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಒಡಿಶಾದ 18 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಶ್ರೀಕಾಕುಳಂ, ವಿಜಯನಗರಂ, ಪಾರ್ವತಿಪುರಂ, ಎಎಸ್‌ಆರ್, ಅನಕಪಲ್ಲಿ, ಏಲೂರು, ಉಭಯ ಗೋದಾವರಿ, ಎನ್‌ಟಿಆರ್, ಗುಂಟೂರು, ಕೃಷ್ಣ, ಪಲ್ನಾಡು, ಪ್ರಕಾಶಂ, ನೆಲ್ಲೂರು, ತಿರುಪತಿ, ನಂದ್ಯಾಲ, ಚಿತ್ತೂರು ಮತ್ತು ಕಡಪಾ ಮತ್ತು ಅನ್ನಮಯ್ಯನಲ್ಲಿ ಯೆಲ್ಲೋ ಅಲರ್ಟ್ ಗೋಷಣೆ ಮಾಡಲಾಗಿದೆ.
ಮೇ 12-13ರ ಅವಧಿಯಲ್ಲಿ ಭಾರೀ ಮಳೆ
ಈ ಚಂಡಮಾರುತದ ಪರಿಣಾಮ ದೆಹಲಿ, ಜಾರ್ಖಂಡ್ ಮತ್ತು ಮಧ್ಯಪ್ರದೇಶದಲ್ಲೂ ಬೀರಲಿದೆ. ಈ ರಾಜ್ಯಗಳಲ್ಲಿ ಮೇ 12-13 ರ ಅವಧಿಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಸದ್ಯ ದೆಹಲಿಯಲ್ಲಿ ಇಂದು ಶುಭ್ರವಾದ ವಾತಾವರಣವಿದ್ದು, ಬಿಸಿಲು ಬಿದ್ದಿದೆ. ಇಂದು ದೆಹಲಿಯ ಗರಿಷ್ಠ ತಾಪಮಾನ 36.7 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20.9 ಡಿಗ್ರಿ ಸೆಲ್ಸಿಯಸ್ ಆಗಿರಬಹುದು.
ಕರ್ನಾಟಕದಲ್ಲಿ ಮೋಚಾ ಎಫೆಕ್ಟ್
ಪಶ್ಚಿಮ ಬಂಗಾಳಕೊಲ್ಲಿಯ 'ಮೋಚಾ' ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ 10 ರಿಂದ 12 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ಹವಾಮಾನ ವಿಜ್ಞಾನಿ ಪ್ರಸಾದ್ ಅವರು, "ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಇದರಿಂದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿಐದು ದಿನ ಮಳೆಯ ಪ್ರಮಾಣ ಅಧಿಕವಾಗಲಿದೆ'' ಎಂದು ತಿಳಿಸಿದ್ದಾರೆ.












Click it and Unblock the Notifications