Cyclone Michaung: ದೇಶದ ಈ ಭಾಗದಲ್ಲಿ ಮುಂದಿನ 2-3 ದಿನಗಳ ಕಾಲ ಭಾರೀ ಮಳೆ ಮುನ್ಸೂಚನೆ
ನವದೆಹಲಿ, ಡಿಸೆಂಬರ್, 10: ದೇಶದ ಬಹುತೇಕ ರಾಜ್ಯಗಳಲ್ಲಿ ಬರದ ಛಾಯೆ ಆವರಿಸಿದ್ದು, ದಕ್ಷಿಣ ಭಾಗದ ರಾಜ್ಯಗಳಲ್ಲಿ ಮಾತ್ರ ಮೈಚಾಂಗ್ ಚಂಡಮಾರುತ ಹಿನ್ನೆಲೆ ಕಳೆದ ಒಂದು ವಾರದಿಂದಲೂ ಅಬ್ಬರದ ಮಳೆಯಾಗುತ್ತಿದೆ. ಹಾಗೆಯೇ ದಕ್ಷಿಣ ಭಾರತದ ಈ ರಾಜ್ಯಗಳಲ್ಲಿ ಇನ್ನು ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆ ಸುರಿಯಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮುಂದಿನ 2-3 ದಿನಗಳ ಕಾಳ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈಗಾಗಲೇ ಕಳೆದ ಒಂದು ವಾರದಿಂದ ಭಾರೀ ಮಳೆಯಿಂದ ಈ ರಾಜ್ಯಗಳಲ್ಲಿ ಪ್ರವಾಹದ ವಾತಾವರಣ ಮುಂದುವರೆದಿದೆ. ಮುಂದಿನ 2-3 ದಿನಗಳಲ್ಲಿ ತಮಿಳುನಾಡು, ಕೇರಳ, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಬಿರುಗಾಳಿ ಸಮೇತ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಶನಿವಾರ (ಡಿಸೆಂಬರ್ 09) ತಮಿಳುನಾಡು ಮತ್ತು ಕೇರಳದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ತಮಿಳುನಾಡಿನ ತಿರುನಲ್ವೇಲಿ ಮತ್ತು ಕೂನೂರಿನಲ್ಲಿ 2 ಸೆಂ.ಮೀ ಮಳೆ ದಾಖಲಾಗಿದ್ದರೆ, ಕೇರಳದ ವಡವತ್ತೂರಿನಲ್ಲಿ 3 ಸೆಂ.ಮೀ ಮಳೆಯಾಗಿದೆ. ಇನ್ನು ಡಿಸೆಂಬರ್ 4ರಂದು ಭಾರೀ ಮಳೆಯಿಂದ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆ ಚೆನ್ನೈನಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಭೀಕರ ಪ್ರವಾಹದಂತಹ ಮಳೆಯಿಂದ ಚೆನ್ನೈನ ಬಹುತೇಕ ಭಾಗಗಳಲ್ಲಿ ಜನಜೀವನ ಅತಂತ್ರವಾಗಿದೆ. ಇನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶನಿವಾರ ಆರ್ಥಿಕ ನೆರವು ಘೋಷಿಸಿದ್ದು, ಚೆನ್ನೈನ ಪ್ರತಿ ಸಂತ್ರಸ್ತ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ 6,000 ರೂಪಾಯಿ ಘೋಷಣೆ ಮಾಡಿದ್ದಾರೆ ಎನ್ನುವ ಮಾಹಿತಿ ತಿಳುದುಬಂದಿದೆ.
ಆದರೆ, ಈ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಪ್ರತಿ ಸಂತ್ರಸ್ತ ಕುಟುಂಬಕ್ಕೆ 10,000 ರೂಪಾಯಿಗೆ ಸಹಾಯ ದನವನ್ನು ಹೆಚ್ಚಿಸಲು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಇನ್ನು ಪರಿಹಾರ ನಿಧಿಗೆ ರಾಜ್ಯ ಸರ್ಕಾರ ಒಂದು ಪೈಸೆಯನ್ನೂ ನೀಡಿಲ್ಲ ಎಂದು ಆರೋಪ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲೆಲ್ಲಿ ಮಳೆ ಮತ್ತು ಹಿಮ ಹೆಚ್ಚಿರಲಿದೆ?
ಇನ್ನು ನಾಳೆಯಿಂದ ಪಶ್ಚಿಮ ಹಿಮಾಲಯ ಪ್ರದೇಶದ ಮೇಲೆ ಚಂಡಮಾರುತದ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು ಮುಂದಿನ ಕೆಲವು ದಿನಗಳಲ್ಲಿ ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಮೇಲೆ ಚದುರಿದ ಮಳೆ ಅಥವಾ ಹಿಮಪಾತವನ್ನು ಸೃಷ್ಟಿಸಬಹುದು.
ಇದರ ಜೊತೆಗೆ, ಉತ್ತರ ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಅಸ್ಸಾಂ, ಮೇಘಾಲಯದಲ್ಲಿ ಇಂದಿನಿಂದ ಪ್ರಾರಂಭವಾಗುವ ಪ್ರತ್ಯೇಕ ಬೆಳಗಿನ ಸಮಯದಲ್ಲಿ ದಟ್ಟವಾದ ಮಂಜು ಇರುತ್ತದೆ. ಈ ಹಿನ್ನೆಲೆ ಈ ಪ್ರದೇಶಗಳಲ್ಲಿ ರಸ್ತೆ, ರೈಲು ಮತ್ತು ವಾಯು ಸಂಚಾರದ ಮೇಲೆ ಪರಿಣಾಮ ಬೀರಬಹುದು.
ಮುಂದಿನ 2 ದಿನಗಳಲ್ಲಿ ಮಧ್ಯ ಮತ್ತು ಪೂರ್ವ ಭಾರತದಲ್ಲಿ ಕನಿಷ್ಠ ತಾಪಮಾನದಲ್ಲಿ ಸುಮಾರು 2-3 ° Cಯಷ್ಟು ಕ್ರಮೇಣ ಕುಸಿತದ ಮುನ್ಸೂಚನೆ ನೀಡಿದೆ. ಮುಂದಿನ 4 ರಿಂದ 5 ದಿನಗಳಲ್ಲಿ ದೇಶದ ಉಳಿದ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯನ್ನು ನಿರೀಕ್ಷಿಸಲಾಗುವುದಿಲ್ಲ.












Click it and Unblock the Notifications