Cyclone Fengal: ನವೆಂಬರ್ 30ಕ್ಕೆ ಕರಾವಳಿಗೆ ಅಪ್ಪಳಿಸಲಿದೆ ಚಂಡಮಾರುತ: 'ಫೆಂಗಲ್' ವೇಗದಲ್ಲಿ ಭಾರೀ ಹೆಚ್ಚಳ
ಬೆಂಗಳೂರು, ನವೆಂಬರ್ 29: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತವು 'ಪೆಂಗಲ್' ಚಂಡಮಾರುತವಾಗಿ ಬದಲಾಗಿದ್ದಲ್ಲದೇ, ಅತ್ಯಧಿಕ ತೀವ್ರತೆ ಪಡೆದುಕೊಂಡು ಮುನ್ನುಗುತ್ತಿದೆ. ಕರಾವಳಿ ತೀರ ಪ್ರದೇಶಗಳಿಂದ ನೂರಾರು ಕಿಲೋ ಮೀಟರ್ ದೂರುದಲ್ಲಿರುವ ಈ ಚಂಡಮಾರುತವು ಗರಿಷ್ಠ 80-100 ಕಿಲೋ ಮೀಟರ್ ವೇಗದಲ್ಲಿ ತಮಿಳುನಾಡು ಕರಾವಳಿ ತೀರಕ್ಕೆ ಅಪ್ಪಳಿಸಲಿದೆ.
ಭೂಮಿಗೆ ಚಂಡರಮಾರುತ ಅಪ್ಪಳಿಸುತ್ತಿದ್ದಂತೆ ಕೇವಲ ತಮಿಳುನಾಡು, ಚೆನ್ನೈ ಮಾತ್ರವಲ್ಲದೇ, ನೆರೆಯ ಆಂಧ್ರಪ್ರದೇಶ, ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ. ಕರಾವಳಿ ರಾಜ್ಯದ ಜಿಲ್ಲೆಗಳಲ್ಲಿ ಜನ ಜೀವನ ಅಲ್ಲೋಲ ಕಲ್ಲೋಲವಾಗುವ ಸಾಧ್ಯತೆ ಇದೆ. ಈ ಹಿಂದೆ ಓಡಿಶಾ ರಾಜ್ಯವು 'ಡಾನಾ' ಚಂಡಮಾರುತದಿಂದ ನಲುಗಿತ್ತು. ಅದಾದ ಬಳಿಕ ಬಂದ 'ಆಸ್ನಾ' ಚಂಡಮಾರತ ಅಷ್ಟಾಗಿ ಪರಿಣಾಮ ಬೀರಲಿಲ್ಲ. ಇದೀಗ 'ಫೆಂಗಲ್' ಭಾರೀ ಹಾನಿ, ಪ್ರವಾಹ ಸೃಷ್ಟಿ ಮಾಡುವ ಸಾಧ್ಯತೆ ಇದೆ.

ಫೆಂಗಲ್ ಚಂಡಮಾರುತದ ಸದ್ಯದ ಸ್ಥಿತಿಗತಿ
ಬಂಗಾಳಕೊಲ್ಲಿಯಲ್ಲಿ ನೈಋತ್ಯ ಭಾಗದಲ್ಲಿ ನಿರ್ಮಾಣವಾದ ಫೆಂಗಲ್ ವೈಪರಿತ್ಯವು ಇಂದು ಶುಕ್ರವಾರ ಬೆಳಗ್ಗೆ ಅತೀ ವೇಗವಾಗಿ ವಾಯುವ್ಯ ಮಾರ್ಗದತ್ತ ಚಲಿಸಿತು. ಇಂದು ನವೆಂಬರ್ 29 ರಂದು ಸುಮಾರು 270 ಕಿಮೀ ಉತ್ತರ ಈಶಾನ್ಯ ಟ್ರಿಂಕೋಮಲಿ, ನಾಗಪಟ್ಟಿನಂನಿಂದ ಪೂರ್ವಕ್ಕೆ 300 ಕಿಮೀ ದೂರದಲ್ಲಿ ನೆಲೆಗೊಂಡಿದೆ.
ಪುದುಚೇರಿಯಿಂದ ಪೂರ್ವ-ಆಗ್ನೇಯ ಭಾಗದಲ್ಲಿ 340 ಕಿಲೋ ಮೀಟರ್ ದೂರದಲ್ಲಿ ಹಾಗೂ ಚೆನ್ನೈನ ಆಗ್ನೇಯಕ್ಕೆ 380 ಕಿ.ಮೀ. ದೂರದಲ್ಲಿದೆ. ಮುಂದಿನ 24 ಗಂಟೆಗಳಲ್ಲಿ ಈ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳಲಿದೆ. ಇದರಿಂದ ಕರಾವಳಿ ಭಾಗದಲ್ಲಿ ಮಳೆ, ಮೈಕೊರೆವ ಚಳಿ ನಿರ್ಮಾಣವಾಗಲಿದೆ. ಈಗಾಗಲೇ ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ನವೆಂಬರ್ 30ರಂದು ಪುದಚೇರಿಗೆ ಭಾರೀ ಮಳೆ
ಫೆಂಗಲ್ ಚಂಡರಮಾರುತವು ವಾಯುವ್ಯ ದಿಕ್ಕಿನತ್ತ ಚಲಿಸಲಿದ್ದು, ಕಾರೈಕಾಲ್ ಮತ್ತು ಮಹಾಬಲಿಪುರಂ ನಡುವಿನ ತಮಿಳುನಾಡು-ಪುದುಚೇರಿ ತೀರಗಳಿಗೆ ಪ್ರತಿ ಗಂಟೆಗೆ 80ರಿಂದ 100 ಕಿಮೀ ವೇಗದಲ್ಲಿ ಬಂದು ಅಪ್ಪಳಿಸಲಿದೆ. ನವೆಂಬರ್ 30 ರಂದು ಮಧ್ಯಾಹ್ನದ ಹೊತ್ತಿಗೆಗಾಲೇ ಭೂಪ್ರದೇಶದ ಮೇಲೆ ಸೈಕ್ಲೋನ್ ಸ್ಪಷ್ಟ ಪ್ರಭಾವ ಉಂಟಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ಇಳಿಸಿದೆ.
ವಿವಿಧ ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ
ಚಂಡಮಾರುತದ ಪ್ರಭಾವದಿಂದ ಮುಂದಿನ ನಾಲ್ಕರಿಂದ ಐದು ದಿನಗಳ ಕಾಲ ತಮಿಳುನಾಡು, ಆಂಧ್ರಪ್ರದೇಶ, ಓಡಿಶಾ, ಕರ್ನಾಟಕದ ವಿವಿಧೆಡೆ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಕರಾವಳಿ ರಾಜ್ಯದ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗಲಿದ್ದು, ಜನ ಜೀವನ ಅಸ್ತವ್ಯಸ್ತವಾಗಲಿದೆ. ಕಳೆದ ಕೆಲವು ದಿನಗಳಿಂದ ಬರುತ್ತಿರುವ ಮಳೆಗೆ ಚೆನ್ನೈ ಮಹಾನಗರ ಪರಿತಪಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಮಳೆ ಇನ್ನಷ್ಟು ಹೆಚ್ಚಾದರೆ ಹೇಗೆ ಎಂಬ ಭಯ ಸ್ಥಳೀಯರನ್ನು ಕಾಡುತ್ತಿದೆ.
ಕರ್ನಾಟಕಕ್ಕೆ ಏನಿದೆ ಮುನ್ಸೂಚನೆ?
ಕರ್ನಾಟಕದ ಒಳನಾಡು ಜಿಲ್ಲೆಗಳ ಮೇಲೆ ಸೈಕ್ಲೋನ್ ಪ್ರಭಾವ ಹೆಚ್ಚಿರಲಿದೆ. ಹೀಗಾಗಿಯೇ ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಮಲೆನಾಡು ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿ, ಶುಷ್ಕ ವಾತಾವರಣ ಮುಂದುವರಿಯಲಿದೆ ಎಂದು ಐಎಂಡಿ ಕರ್ನಾಟಕ ಕೇಂದ್ರ ಮುನ್ಸೂಚನೆ ನೀಡಿದೆ.












Click it and Unblock the Notifications