Cyclone Dana: ಡಾನಾ ಚಂಡಮಾರುತ ಅಬ್ಬರ; ಮೂರು ದಿನ ಶಾಲೆಗಳಿಗೆ ರಜೆ ಘೋಷಣೆ
ಒಡಿಶಾದಲ್ಲಿ ಡಾನಾ ಚಂಡಮಾರುತ ಅಪ್ಪಳಿಸುವ ಹಿನ್ನಲೆಯಲ್ಲಿ ರಾಜ್ಯದ 14 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಬುಧವಾರದಿಂದ ಮೂರು ದಿನ ರಜೆ ಘೋಷಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ದೇವರಂಜನ್ ಕುಮಾರ್ ಸಿಂಗ್ ಮಂಗಳವಾರ ಶಾಲಾ ಮತ್ತು ಸಮೂಹ ಶಿಕ್ಷಣ (ಎಸ್ & ಎಂಇ) ಇಲಾಖೆ ಆಯುಕ್ತೆ ಹಾಗೂ ಕಾರ್ಯದರ್ಶಿ ಶಾಲಿನಿ ಪಂಡಿತ್ ಅವರಿಗೆ ಈ ಕುರಿತು ಆದೇಶವನ್ನು ಕಳಿಸಿದ್ದಾರೆ. ಚಂಡಮಾರುತವನ್ನು ಎದುರಿಸಲು ಈಗಾಗಲೇ ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ಒಡಿಶಾದ ಗಂಜಾಂ, ಪುರಿ, ಜಗತ್‌ಸಿಂಗ್‌ಪುರ, ಕೇಂದ್ರಪಾರ, ಭದ್ರಕ್, ಬಾಲಸೋರ್, ಮಯೂರ್‌ಭಂಜ್, ಕಿಯೋಂಜರ್, ಧೆಂಕನಲ್, ಜಾಜ್‌ಪುರ್, ಅಂಗುಲ್, ಖುರ್ದಾ, ನಯಾಗಢ ಮತ್ತು ಕಟಕ್ ಜಿಲ್ಲೆಗಳಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಾಗಿರಲಿದ್ದು, ಅಕ್ಟೋಬರ್ 23 ರಿಂದ 25ರವರೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಹವಾಮಾನ ಇಲಾಖೆ ಪ್ರಕಾರ ಅಕ್ಟೋಬರ್ 25ರ ಮುಂಜಾನೆ ವೇಳೆಗೆ ಡಾನಾ ಚಂಡಮಾರುತ ಒಡಿಶಾದ ಪುರಿ ಪಟ್ಟಣ ಮತ್ತು ಪಶ್ಚಿಮ ಬಂಗಾಳದ ಸಾಗರ್ ದ್ವೀಪದ ನಡುವೆ ಅಪ್ಪಳಿಸುವ ಸಾಧ್ಯತೆ ಇದೆ. 100-120 ಕಿಮೀ ವೇಗದಲ್ಲಿ ಚಂಡಮಾರುತ ಅಪ್ಪಳಿಸಲಿದ್ದು, ಒಡಿಶಾ ಮತ್ತು ಬಂಗಾಳ ಕರಾವಳಿಯನ್ನು ದಾಟಲಿದೆ ಎಂದು ಹೇಳಿದೆ.
ಭಾರಿ ಮಳೆ ಮುನ್ಸೂಚನೆ
ಡಾನಾ ಚಂಡಮಾರುತದ ಪ್ರಭಾವದಿಂದ ಒಡಿಶಾ, ಬಂಗಾಳ, ಆಂಧ್ರ ಪ್ರದೇಶ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಪುರಿಯ ಜಗನ್ನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ಮುಂದೂಡುವಂತೆ ಭಕ್ತಾದಿಗಳಿಗೆ ಮನವಿ ಮಾಡಲಾಗಿದೆ.
ಯಾವುದೇ ಸಂದರ್ಭವನ್ನಾದರೂ ಎದುರಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಹೆಚ್ಚು ಹಾನಿಗೊಳಗಾಗುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರ ಮಾಡಲು ಕೂಡ ಸರ್ಕಾರ ಯೋಜಿಸಿದೆ. ಈ ಮೂಲಕ ಜೀವಹಾನಿ ತಪ್ಪಿಸಲು ಮುನ್ನೆಚ್ಚರಿಕೆ ವಹಿಸಲು ಮುಂದಾಗಿದೆ.
ಇತರ ರಾಜ್ಯಗಳ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಬುಧವಾರ ಬೆಳಿಗ್ಗೆ ವೇಳೆಗೆ ಪುರಿ ಪಟ್ಟಣದಿಂದ ವಾಪಸ್ ತೆರಳುವಂತೆ ಸರ್ಕಾರ ಕೇಳಿದೆ. ಒಡಿಶಾ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಅವರು ಅಕ್ಟೋಬರ್ 24 ಮತ್ತು 25 ರಂದು ಪುರಿ ಪಟ್ಟಣಕ್ಕೆ ಭೇಟಿ ನೀಡದಂತೆ ಜನತೆಗೆ ಮನವಿ ಮಾಡಿದ್ದಾರೆ.
ಚಂಡಮಾರುತವು ರಾಜ್ಯದ ಕರಾವಳಿ ಮತ್ತು ಉತ್ತರ ಭಾಗಗಳಲ್ಲಿ ಭಾರಿ ಮಳೆಗೆ ಕಾರಣವಾಗಲಿದೆ. ಮಯೂರ್‌ಭಂಜ್, ಕಟಕ್, ಜಾಜ್‌ಪುರ್, ಬಾಲಸೋರ್, ಭದ್ರಕ್, ಕೇಂದ್ರಪಾರಾ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳಲ್ಲಿ 200 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಇದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಕೂಡ ಇದೆ.
ಚಂಡಮಾರುತ ಎದುರಿಸಲು ಸಿದ್ಧತೆಗಳನ್ನು ಪರಿಶೀಲನೆ ಮಾಡಲು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸೋಮವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದೆ. ಭಯಪಡದಂತೆ ಜನರಲ್ಲಿ ಮನವಿ ಮಾಡಿರುವ ಅವರು, ಹೆಚ್ಚು ಹಾನಿಯಾಗುವ ಪ್ರದೇಶಗಳನ್ನು ಗುರುತಿಸಿದ್ದು ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications