maharashtra assembly election 2024 ಮಹಾರಾಷ್ಟ್ರ ಸಮಿಶ್ರ ಸರ್ಕಾರದಲ್ಲಿ ಈ ವಿಷಯಕ್ಕೆ ಕ್ರೆಡಿಟ್ ವಾರ್ : ಬಿಜೆಪಿಗೆ ತಲೆನೋವು
ಮಹಾರಾಷ್ಟ್ರ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರ (ಮಹಾಯುತಿ)ದಲ್ಲಿ ಬಿರುಕು ಮೂಡುವ ಲಕ್ಷಣ ಕಾಣಿಸುತ್ತಿದೆ. ಮಹಾರಾಷ್ಟ್ರದಲ್ಲಿ ಇದೀಗ ಸಮ್ಮಿಶ್ರ ಸರ್ಕಾರ ಇದೆ. ಮೂರು ಪಕ್ಷಗಳು ಸೇರಿ ಆಡಳಿತ ನಡೆಸುತ್ತಿವೆ. ಬಿಜೆಪಿ, ಶಿವಸೇನಾ ಹಾಗೂ ಎನ್‌ಸಿಪಿ ಪಕ್ಷಗಳು ಸರ್ಕಾರದ ಭಾಗವಾಗಿವೆ. ಆದರೆ, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಈ ಪಕ್ಷಗಳ ನಡುವೆ ಸರ್ಕಾರದ ಯೋಜನೆಗಳ ಕ್ರೆಡಿಟ್ ಹಾಗೂ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಬಿರುಕು ಹೆಚ್ಚಾಗಿದೆ.
ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ಸರ್ಕಾರದಲ್ಲಿ ಈಗಾಗಲೇ ಹಲವು ಗೊಂದಲ ಇದೆ. ಇದೀಗ ಸೀಟು ಹಂಚಿಕೆಯ ವಿಷಯ ಕಾವುಪಡೆದುಕೊಳ್ಳುತ್ತಿದೆ. ಇದರ ನಡುವೆ ವಿವಿಧ ಯೋಜನೆಗಳ ಕ್ರೆಡಿಟ್‌ಗೆ ಪಕ್ಷಗಳ ನಡುವೆ ಟಾಕ್ ವಾರ್ ಪ್ರಾರಂಭವಾಗಿದೆ. ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಲಡ್ಕಿ ಬಹೀನ್ ಯೋಜನೆ ಹಾಗೂ ಜನ್ ಸಮ್ಮಾನ್ ಯಾತ್ರೆಯ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ.

ಲಡ್ಕಿ ಬಹೀನ್ ಯೋಜನೆ: ಮಹಾಯತಿ ಸರ್ಕಾರದಲ್ಲಿ ಇದೀಗ ಕ್ರೆಡಿಟ್ ವಾರ್ ಜೋರಾಗಿದೆ. ಈ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾರಿಯಾಗಿರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಟಾಕ್ ವಾರ್ ನಡೆಯುತ್ತಿದ್ದು, ಒಂದೊಂದು ಪಕ್ಷವು ಮತ್ತೊಂದು ಪಕ್ಷವನ್ನು ಕೆಲವು ನಿರ್ದಿಷ್ಟ ವಿಷಯಗಳಲ್ಲಿ ನಿರ್ಲಕ್ಷಿಸುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಲಡ್ಕಿ ಬಹೀನ್ ಎನ್ನುವ ಯೋಜನೆಯನ್ನು ಪರಿಚಯಿಸಲಾಗಿದೆ.
ಆದರೆ, ಈ ಯೋಜನೆಯ ಜಾರಿ ಪ್ರಚಾರವನ್ನು ಎನ್‌ಸಿಪಿ (ಅಜಿತ್ ಪವಾರ್ ಬಣ) ಔವರ್ ಟೇಕ್ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಚಿತ್ರವನ್ನು ಈ ಯೋಜನೆಯ ಪ್ರಚಾರದ ಕರಪತ್ರಗಳು ಹಾಗೂ ಜಾಹೀರಾತುಗಳಲ್ಲಿ ಬಳಸಿಲ್ಲ ಎಂದು ಶಿವಸೇನಾ (ಏಕನಾಥ್ ಶಿಂಧೆ ಬಣ) ಆರೋಪಿಸಿದೆ. ಇದು ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಅಜಿತ್ ಪವಾರ್ ಎಲ್ಲರ ವಿಶ್ವಾಸ ಗಳಿಸಬೇಕು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

ಜನ್ ಸಮ್ಮಾನ್ ಯಾತ್ರೆಗೆ ವಿರೋಧ
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಪಕ್ಷಗಳು (ಮಹಾ ವಿಕಾಸ್ ಅಘಾಡಿ) ಹಾಗೂ ಬಿಜೆಪಿಯ (ಮಹಾಯುತಿ) ಪಕ್ಷಗಳು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಮಿತ್ರ ಪಕ್ಷಗಳು ಸೀಟು ಹಂಚಿಕೆ ಹಾಗೂ ಚುನಾವಣಾ ಪ್ರಚಾರದ ತಂತ್ರಗಳನ್ನು ಒಂದಾಗಿಯೇ ಎಣೆಯುತ್ತಿವೆ. ಆದರೆ, ಇದೀಗ ಯೋಜನೆಗಳ ಕ್ರೆಡಿಟ್ ವಾರ್‌ನೊಂದಿಗೆ ವಿವಿಧ ಪಕ್ಷಗಳು ನಡೆಸುತ್ತಿರುವ ಯಾತ್ರೆಗಳಿಗೂ ವಿರೋಧ ವ್ಯಕ್ತವಾಗಿದೆ.
ಎನ್‌ಸಿಪಿ (ಅಜಿತ್ ಪವಾರ್ ಬಣ)ದ ಜನ್ ಸಮ್ಮಾನ್ ಯಾತ್ರೆಯಿಂದ ಶಿವಸೇನಾ ಪಕ್ಷ ಹಾಗೂ ಬಿಜೆಪಿ ಮುನಿಸಿಕೊಂಡಿವೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿರುವ ಅಜಿತ್ ಪವಾರ್ ಅವರು ಈಚೆಗೆ ಈ ಯಾತ್ರೆಯನ್ನು ಪ್ರಾರಂಭಿಸಿದ್ದು, ಮಿತ್ರ ಪಕ್ಷಗಳಿಂದ ತುಸು ಅಂತರ ಕಾಪಾಡಿಕೊಂಡಿದ್ದಾರೆ. ಇದು ಮಿತ್ರಪಕ್ಷಗಳಲ್ಲಿ ಭಿನ್ನಮತ ಮೂಡುವುದಕ್ಕೆ ಕಾರಣವಾಗಿದೆ. ಭಾರತೀಯ ಚುನಾವಣಾ ಆಯೋಗವು ಮಹಾರಾಷ್ಟ್ರದಲ್ಲಿ ಚುನಾವಣೆ ದಿನಾಂಕ ಘೋಷಣೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.












Click it and Unblock the Notifications