Covid-19 cases: ಹಲವು ದಿನಗಳ ಬಳಿಕ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ
ನವದೆಹಲಿ, ಏಪ್ರಿಲ್. 23: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಭಾನುವಾರ 10,112 ಹೊಸ ಕೋವಿಡ್ 19 ಸೋಂಕುಗಳು ದಾಖಲಾಗಿವೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 67,806 ಕ್ಕೆ ಏರಿದೆ. ಜೊತೆಗೆ ಹಲವು ದಿನಗಳಿಂದ ಏರಿಕೆಯಾಗುತ್ತಿದ್ದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ಭಾನುವಾರ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ 10,112 ಹೊಸ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಒಟ್ಟು 4,42,92,854 ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಇಲ್ಲಿಯವರೆಗೆ 5,31,329 ಜನರು ಕೋವಿಡ್ 19 ನಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಇಂದು ದಾಖಲಾಗಿರುವ 29 ಸಾವುಗಖು ಸೇರಿವೆ. ಅದರಲ್ಲಿ ಏಳು ಕೇಸ್‌ಗಳು ಕೇರಳದಿಂದ ಬಂದಿವೆ ಎಂದು ಆರೋಗ್ಯ ಸಚಿವಾಲಯದ ಡೇಟಾ ತೋರಿಸುತ್ತದೆ.

ಕೋವಿಡ್ ಪ್ರಕರಣಗಳ ಏರಿಕೆಗಳಿಗೆ ವಿಜ್ಞಾನಿಗಳು ಎಕ್ಸ್‌ಬಿಬಿ.1.16 ಕೋವಿಡ್ 19 ರೂಪಾಂತರ ಕಾರಣವಾಗಿದೆ ಎಂದು ಪ್ರಸ್ತುತ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಕೋವಿಡ್-19 ರೂಪಾಂತರಗಳು ಹೆಚ್ಚು ತೀವ್ರವಾಗಿಲ್ಲದ ಕಾರಣ ಹೆಚ್ಚಿನ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದು ಕಡಿಮೆಯಾಗಿದೆ.
ಆದರೂ, ಜನರು ಕಿಕ್ಕಿರಿದ ಸ್ಥಳಗಳಲ್ಲಿ ಜನರು ಮಾಸ್ಕ್ ಧರಿಸುವುದು ಅಭ್ಯಾಸ ಮಾಡಬೇಕಿದೆ. ಸೋಂಕನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಅಪಾಯದ ಮೌಲ್ಯಮಾಪನ ಆಧಾರಿತ ವಿಧಾನವನ್ನು ಅನುಸರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಆರೋಗ್ಯ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಕೋವಿಡ್ -19 ರ ಪರಿಸ್ಥಿತಿಯನ್ನು ಸೂಕ್ಷ್ಮ ಮಟ್ಟದಲ್ಲಿ (ಜಿಲ್ಲೆ ಮತ್ತು ಉಪ-ಜಿಲ್ಲೆಗಳು) ಪರೀಕ್ಷಿಸಲು ಮತ್ತು ಕೋವಿಡ್ -19 ರ ತ್ವರಿತ ಮತ್ತು ಪರಿಣಾಮಕಾರಿ ನಿರ್ವಹಣೆಗೆ ಅಗತ್ಯವಾದ ಕ್ರಮಗಳ ಅನುಷ್ಠಾನದ ಮೇಲೆ ಗಮನಹರಿಸುವಂತೆ ಸಲಹೆ ನೀಡಿದೆ. ಪರೀಕ್ಷೆ, ಟ್ರ್ಯಾಕಿಂಗ್, ಚಿಕಿತ್ಸೆ ಮತ್ತು ಲಸಿಕೆ ನೀಡುವ ತಂತ್ರವನ್ನು ಅನುಸರಿಸಲು ರಾಜ್ಯಗಳಿಗೆ ಸೂಚಿಸಿದೆ.

ಕೋವಿಡ್ -19 ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಎಂಟು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಈ ಕುರಿತು ಪತ್ರ ಬರೆದಿದ್ದಾರೆ. ದೆಹಲಿ, ಉತ್ತರ ಪ್ರದೇಶ, ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಕರ್ನಾಟಕ ಮತ್ತು ಹರಿಯಾಣಕ್ಕೆ ಪತ್ರ ಬರೆದಿರುವ ಅವರು, ಪರೀಕ್ಷಾ ಕ್ರಮಗಳನ್ನು ಹೆಚ್ಚಿಸಲು ಮತ್ತು ಆಸ್ಪತ್ರೆಯ ಮೂಲಸೌಕರ್ಯವನ್ನು ಸುಧಾರಿಸಲು ತಿಳಿಸಿದ್ದಾರೆ.
ತೀವ್ರ ಉಸಿರಾಟದ ಸೋಂಕು (SARI) ಮತ್ತು ಇನ್ಫ್ಲುಯೆನ್ಸ ತರಹದ ಅನಾರೋಗ್ಯದ (ILI) ಪ್ರಕರಣಗಳನ್ನು ಸರಿಯಾಗಿ ಮೇಲ್ವಿಚಾರಣೆ ಮಾಡಲು, ಕೊರೊನಾ ಪರೀಕ್ಷೆಯನ್ನು ಹೆಚ್ಚಿಸಲು, ಜೀನೋಮ್ ಅನುಕ್ರಮಕ್ಕಾಗಿ ಹೆಚ್ಚಿನ ಮಾದರಿಗಳನ್ನು ಕಳುಹಿಸಲು ಮತ್ತು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲು ಆರೋಗ್ಯ ಕಾರ್ಯದರ್ಶಿ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.












Click it and Unblock the Notifications