ಇಂದು ಜಮ್ಮು & ಕಾಶ್ಮೀರ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸಲಿರುವ ಚುನಾಚಣೆ ಆಯೋಗ-ಮಾಹಿತಿ ಇಲ್ಲಿದೆ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನೆಲೆ ಭಾರತೀಯ ಚುನಾವಣಾ ಆಯೋಗದ ಮೂವರು ಸದಸ್ಯರ ನಿಯೋಗವು ಆಗಸ್ಟ್ 8-10ರ ವರೆಗೆ ಶ್ರೀನಗರಕ್ಕೆ ಭೇಟಿ ನೀಡಿದ್ದು, ಚುನಾವಣೆಯ ನಿರ್ವಹಣೆಗಾಗಿ ಭದ್ರತಾ ಸಿದ್ಧತೆಯನ್ನು ಪರಿಶೀಲನೆ ನಡೆಸಿತು. ಇನ್ನು ಇಂದು (ಆಗಸ್ಟ್ 16) ಚುನಾವಣೆ ದಿನಾಂಕವನ್ನು ಪ್ರಕಟಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹರಿಯಾಣ ವಿಧಾನಸಭೆಯ ಅವಧಿ ನವೆಂಬರ್‌ನಲ್ಲಿ ಕೊನೆಗೊಳ್ಳುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 30, 2024ರೊಳಗೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ಹೇಳಿದೆ.

ಇನ್ನು ವಿಧಾನಸಭೆಗಳಿಗೆ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲು ಇಂದು (ಆಗಸ್ಟ್ 16) ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿಯನ್ನು ನಡೆಸುವುದಾಗಿ ಚುನಾವಣಾ ಆಯೋಗ ಶುಕ್ರವಾರ ಬೆಳಗ್ಗೆ ಘೋಷಿಸಿತು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯನ್ನು 4-5 ಹಂತಗಳಲ್ಲಿ ನಡೆಸಲು ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಉತ್ತರ ಕಾಶ್ಮೀರ ಮೊದಲು, ನಂತರ ಕ್ರಮವಾಗಿ ದಕ್ಷಿಣ ಕಾಶ್ಮೀರ, ಮಧ್ಯ ಕಾಶ್ಮೀರ ಮತ್ತು ಜಮ್ಮುವಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಚುನಾವಣಾ ಆಯೋಗದ ಪ್ರಕಾರ, ಉತ್ತರ ಕಾಶ್ಮೀರದಲ್ಲಿ ಚುನಾವಣೆ ನಡೆಸುವುದು ಸವಾಲಿನ ಕೆಲಸವಾಗಿದೆ. ಉತ್ತರ ಕಾಶ್ಮೀರದ ಅನಂತನಾಗ್, ಬಾರಾಮುಲ್ಲಾ, ಬುದ್ಗಾಮ್, ಬಂಡೀಪೋರ್, ಗಂದರ್‌ಬಾಲ್, ಕುಪ್ವಾರ, ಕುಲ್ಗಾಮ್, ಶೋಪಿಯಾನ್, ಪುಲ್ವಾಮಾ ಮತ್ತು ಶ್ರೀನಗರ ಜಿಲ್ಲೆಗಳು ಸೂಕ್ಷ್ಮ ಜಿಲ್ಲೆಗಳಾಗಿದ್ದರೆ, ಕಥುವಾ, ಸಾಂಬಾ, ರಿಯಾಸಿ, ಜಮ್ಮು ಮತ್ತು ಉಧಮ್‌ಪುರ ದಕ್ಷಿಣದಲ್ಲಿ ಸೂಕ್ಷ್ಮ ವಲಯಗಳಾಗಿವೆ.
ಈ ವರ್ಷ ಲೋಕಸಭೆ ಚುನಾವಣೆಯನ್ನು 5 ಹಂತಗಳಲ್ಲಿ ಶಾಂತಿಯುತವಾಗಿ ನಡೆಸಲಾಗಿದ್ದು, ಅಂತಿಮ ಮತದಾನದ ಪ್ರಮಾಣ ಶೇಕಡಾ 58.46ರಷ್ಟು ದಾಖಲಾಗಿದೆ, ಇದು 35 ವರ್ಷಗಳಲ್ಲೇ ಅತ್ಯಧಿಕವಾಗಿದೆ. 2014ರಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ಬಾರಿಗೆ ವಿಧಾನಸಭೆ ಚುನಾವಣೆ ನಡೆದ ವರ್ಷವಾಗಿದ್ದು, ಐದು ಹಂತಗಳಲ್ಲಿ ಮತದಾನ ನಡೆದಿತ್ತು.
ಜಮ್ಮು ಕಾಶ್ಮೀರದಲ್ಲಿ 10 ವರ್ಷಗಳ ಬಳಿಕ ವಿಧಾನಸಭಾ ಚುನಾವಣೆ ನುಡೆಯುತ್ತಿದೆ. ಸಂವಿಧಾನ ನೀಡಿದ್ದ 370 ವಿಧಿ ರದ್ಧಾದ ಬಳಿಕ ಅಲ್ಲಿ ವಿಧಾನಸಭಾ ಚುನಾವಣೆ ನಡೆದಿರಲಿಲ್ಲ. ಕಳೆದ ವರ್ಷ ಲೋಕಸಭಾ ಚುನಾವಣೆ ತುಂಬಾ ಶಾಂತಿಯುತವಾಗಿ ನಡೆದಿತ್ತು. ಇದೀಗ ಅಲ್ಲಿನ ಜನ ಬದಲಾವಣೆ ಬಯಸುತ್ತಿದ್ದಾರೆ. ಈ ಬಾರಿಯೂ ಅಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.












Click it and Unblock the Notifications