ತಗ್ಗಿದ ಸೋಂಕಿನ 'R' ದರ; ದೇಶದಲ್ಲಿ ಕೊರೊನಾ ಕಡಿಮೆಯಾಗುವ ಸೂಚನೆ
ನವದೆಹಲಿ, ಆಗಸ್ಟ್ 19: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಇದರ ನಡುವೆ, ಕೇರಳ ಹಾಗೂ ಈಶಾನ್ಯ ರಾಜ್ಯವನ್ನೊಳಗೊಂಡಂತೆ ದೇಶದಲ್ಲಿ ಸೋಂಕಿನ ಪುನರತ್ಪತ್ತಿ ದರ ಗಣನೀಯವಾಗಿ ಇಳಿಕೆಯಾಗಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.
ಕೊರೊನಾ ಸೋಂಕು ಯಾವ ವೇಗದಲ್ಲಿ ಹರಡುತ್ತಿದೆ ಎಂಬುದನ್ನು ಸಾಂಕೇತಿಸುವ ಈ 'ಪುನರುತ್ಪತ್ತಿ ದರ'- R rate- Reproduction rate ಆಗಸ್ಟ್ 14ರ ನಂತರ ತಗ್ಗಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಈ ಆರ್ ದರ ಒಂದಕ್ಕಿಂತ ಹೆಚ್ಚು ದಾಖಲಾಗಿತ್ತು.

ಏನಿದು ಆರ್ ದರ?
ದೇಶದಲ್ಲಿ ಕೊರೊನಾ ಸೋಂಕು ಯಾವ ವೇಗದಲ್ಲಿ ಹರಡುತ್ತಿದೆ ಎಂಬುದನ್ನು ಈ "ಪುನರುತ್ಪತ್ತಿ ದರ" ಸಾಂಕೇತಿಸುತ್ತದೆ. ಒಬ್ಬ ವ್ಯಕ್ತಿಯಿಂದ ಎಷ್ಟು ಮಂದಿಗೆ ಸೋಂಕು ಹರಡಬಹುದು ಎಂಬ ಸರಾಸರಿ ಅಂದಾಜನ್ನು ಇದು ಹೇಳುತ್ತದೆ.
ಇದೀಗ ಈ ಪುನರುತ್ಪತ್ತಿ ದರ ತಗ್ಗಿದ್ದು, ಆಗಸ್ಟ್ 14-16ರವರೆಗೆ ಈ ಪುನರುತ್ಪತ್ತಿ ದರ 0.89 ಇರುವುದಾಗಿ ಲೆಕ್ಕ ಹಾಕಿದ್ದಾರೆ. ಆರ್ ದರ ಒಂದಕ್ಕಿಂತ ಕಡಿಮೆ ಇದ್ದರೆ, ಹೊಸದಾಗಿ ಸೋಂಕಿಗೊಳಗಾದವರ ಸಂಖ್ಯೆ ಹಿಂದಿನ ಅವಧಿಯಲ್ಲಿ ಸೋಂಕಿತ ಜನರ ಸಂಖ್ಯೆಗಿಂತ ಕಡಿಮೆಯಿರುತ್ತದೆ ಮತ್ತು ರೋಗದ ಪ್ರಮಾಣ, ಹರಡುವಿಕೆ ಕಡಿಮೆಯಿರುತ್ತದೆ ಎಂದರ್ಥ.
ಭಾರತದ ಆರ್ ದರ ಇದೀಗ ಸುಮಾರು 0.9ಗೆ ಕುಸಿದಿದೆ ಎಂದು ಸಂಶೋಧನೆ ನಡೆಸಿರುವ ಭಾರತೀಯ ಗಣಿತ ವಿಜ್ಞಾನ ಸಂಸ್ಥೆಯ ಸಿತ್ಬಾರಾ ಸಿನ್ಹಾ ತಮ್ಮ ಮಾಹಿತಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಕೇರಳದ ಆರ್ ಮೌಲ್ಯ ಈಗ ಒಂದಕ್ಕಿಂತ ಕಡಿಮೆಯಾಗಿದೆ. ಇದು ರಾಜ್ಯದಲ್ಲಿ ಸೋಂಕಿನ ಮಟ್ಟವನ್ನು ತಗ್ಗಿಸಲು ಸತತ ಪ್ರಯತ್ನಿಸುತ್ತಿರುವ ಅಧಿಕಾರಿಗಳಿಗೆ ಒಂದಷ್ಟು ಸಮಾಧಾನ ತಂದಿದೆ.
ಈ ವಾರದ ಆರಂಭದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೇರಳದಲ್ಲಿ ಕೊರೊನಾ ಪರಿಸ್ಥಿತಿ ಪರಿಶೀಲಿಸಲು ಕೇಂದ್ರದ ತಂಡದೊಂದಿಗೆ ಭೇಟಿ ನೀಡಿದ್ದರು. ಈ ಹಿಂದೆ ಕೇಂದ್ರ ತಂಡ ಉಲ್ಲೇಖಿಸಿದ್ದ 'ಆರ್' ದರದ ಕುರಿತೂ ವಿಶ್ಲೇಷಣೆ ನಡೆಸಿದ್ದರು.

ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಹೊಂದಿದ್ದ ಮತ್ತೊಂದು ರಾಜ್ಯ ಮಹಾರಾಷ್ಟ್ರದಲ್ಲಿ ಆರ್ ಮೌಲ್ಯ 0.89 ಆಗಿದೆ ಎಂದು ವರದಿಯಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಮುಂಬೈ ಆರ್ ಮೌಲ್ಯವು ಕಡಿಮೆ ಇದ್ದು, (ಆಗಸ್ಟ್ 10-13ರವರೆಗೆ 0.70 ಇದೆ), ದೆಹಲಿಯಲ್ಲಿ (ಜುಲೈ 31ರಿಂದ ಆಗಸ್ಟ್ 4ರವರೆಗೂ 0.85 ಇದೆ), ಬೆಂಗಳೂರು (ಆಗಸ್ಟ್ 15-17ವರೆಗೂ 0.94 ಇದೆ), ಚೆನ್ನೈ (ಆಗಸ್ಟ್ 15-17ರವರೆಗೂ 0.97 ಇದೆ).
ಆರ್ ಮಟ್ಟ ತಗ್ಗುವುದು ಸೋಂಕಿನ ಹರಡುವಿಕೆಯೂ ಕ್ಷೀಣಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ. ಆರ್ ದರ ಒಂದಕ್ಕಿಂತ ಹೆಚ್ಚಿದ್ದರೆ, ಸೋಂಕಿತರ ಸಂಖ್ಯೆ ಪ್ರತಿ ಸುತ್ತಿನಲ್ಲೂ ಹೆಚ್ಚುತ್ತಿದೆ ಮತ್ತು ತಾಂತ್ರಿಕವಾಗಿ, ಇದನ್ನು ಸಾಂಕ್ರಾಮಿತ ಹಂತ ಎಂದು ಕರೆಯಲಾಗುತ್ತದೆ.
ಆದರೆ ಇದಾಗ್ಯೂ ಹಿಮಾಚಲ ಪ್ರದೇಶ, ಪಂಜಾಬ್, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಈ ಐದು ರಾಜ್ಯಗಳಲ್ಲಿ ಆರ್ ಮೌಲ್ಯ ಒಂದಕ್ಕಿಂತ ಹೆಚ್ಚಿರುವುದಾಗಿ ತಿಳಿಸಿದೆ.
ಸದ್ಯಕ್ಕೆ ರಾಜ್ಯಗಳಲ್ಲಿ ಸೋಂಕಿನ ಪುನರುತ್ಪತ್ತಿ ದರವನ್ನು ತಗ್ಗಿಸುವ ಕುರಿತು ಗಮನ ಹರಿಸಬೇಕಿದೆ ಎಂದು ಆರೋಗ್ಯ ಸಚಿವಾಲಯ ಸೂಚಿಸಿತ್ತು. ಈ ಒಂದು ಅಂಶ ಕೊರೊನಾ ಮೂರನೇ ಅಲೆ ಪರಿಣಾಮ ನಿರ್ಧರಿಸಲು ನಿರ್ಣಾಯಕವಾಗಿದೆ ಎಂದಿತ್ತು.
ಈಚೆಗೆ ಚೆನ್ನೈ ಮೂಲದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್ ಭಾರತದಲ್ಲಿ ಸೋಂಕಿನ "R" ದರ ಕೊರೊನಾ ಮೂರನೇ ಅಲೆ ಕುರಿತು ಎಚ್ಚರಿಕೆ ಗಂಟೆ ಬಾರಿಸುತ್ತಿರುವುದಾಗಿ ತಿಳಿಸಿತ್ತು. ಈ ಆರ್ ದರ 1ಕ್ಕಿಂತ ಕಡಿಮೆಯಿದ್ದರೆ ಅಪಾಯವಿಲ್ಲ ಎಂದು ಪರಿಗಣಿಸಬಹುದು. ಆದರೆ ಇದನ್ನು ಮೀರಿದರೆ ಪ್ರಕರಣಗಳ ಸಂಖ್ಯೆಯೂ ಏಕಾಏಕಿ ಏರಿಕೆಯಾಗುವುದು ಖಚಿತ. ಮುಂದಿನ ಎರಡು ವಾರಗಳಲ್ಲಿ ಈ ದರ ಇನ್ನಷ್ಟು ಹೆಚ್ಚಳವಾಗಲಿದ್ದು, ರಾಜ್ಯದ ಈಶಾನ್ಯ ಭಾಗದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ತಿಳಿಸಿತ್ತು.












Click it and Unblock the Notifications