ಕೊರೊನಾ ಸೋಂಕು ಪ್ರತೀಕಾರದೊಂದಿಗೆ ಮರಳಬಹುದು; ಏಮ್ಸ್ ತಜ್ಞರ ಎಚ್ಚರಿಕೆ
ನವದೆಹಲಿ, ಅಕ್ಟೋಬರ್ 03: ಕೊರೊನಾ ಸೋಂಕಿನ ವಿರುದ್ಧ ಹಲವು ದೇಶಗಳಲ್ಲಿ ಹೋರಾಟ ಇನ್ನೂ ಮುಂದುವರೆದಿದೆ. ಭಾರತದಲ್ಲಿಯೂ ಸೋಂಕು ಪ್ರತೀಕಾರದೊಂದಿಗೆ ಮರಳಬಹುದು ಎಂದು ಉನ್ನತ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಸದ್ಯಕ್ಕೆ ದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಿದೆ. ಆದರೆ ಪ್ರತೀಕಾರದೊಂದಿಗೆ ಸೋಂಕು ಮರಳಬಹುದು. ಹೀಗಾಗಿ ಎಚ್ಚರಿಕೆಯಿಂದಿರುವುದು ಅತ್ಯವಶ್ಯಕ ಎಂದು ದೆಹಲಿಯ ಏಮ್ಸ್ ಕೊರೊನಾ ಟಾಸ್ಕ್ ಪೋರ್ಸ್ ಅಧ್ಯಕ್ಷ ಡಾ. ನವೀತ್ ವಿಗ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಭಾರತದಲ್ಲಿ ಇದುವರೆಗೂ ಸುಮಾರು 90 ಕೋಟಿ ಜನರಿಗೆ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ. ಇದಾಗ್ಯೂ ದೇಶದಲ್ಲಿ ಪ್ರತಿಯೊಬ್ಬರೂ ಎರಡು ಡೋಸ್‌ಗಳ ಲಸಿಕೆಯನ್ನು ಪಡೆಯುವವರೆಗೂ ಎಚ್ಚರಿಕೆ ಅಗತ್ಯ. ಲಸಿಕೆಯಿಂದಷ್ಟೇ ಸೋಂಕು ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ನಾವು ನೂರು ಕೋಟಿಗಿಂತಲೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ಹಾಕಿಸಬೇಕು. ಎಲ್ಲರಿಗೂ ಎರಡು ಡೋಸ್‌ಗಳ ಲಸಿಕೆ ಹಾಕಿಸಬೇಕು. ಆದರೆ ನಾವು ನಮ್ಮ ಗುರಿಯನ್ನು ಸಾಧಿಸಲು ಇನ್ನೂ ವೇಗವಾಗಿ ಲಸಿಕಾ ಕಾರ್ಯಕ್ರಮ ನಡೆಸಬೇಕು. ಪ್ರತಿಯೊಬ್ಬರೂ ಎರಡೂ ಡೋಸ್‌ಗಳನ್ನು ಪಡೆದುಕೊಳ್ಳಬೇಕು. ಅಲ್ಲಿಯವರೆಗೂ ಯಾರೂ ಸುರಕ್ಷಿತರಲ್ಲ ಎಂದು ಡಾ. ವಿಗ್ ಹೇಳಿದ್ದಾರೆ.
'ಈ ಕೊರೊನಾ ಯುದ್ಧವನ್ನು ಈ ರೀತಿಯಾಗಿಯೇ ನಾವು ಗೆಲ್ಲಬೇಕಿದೆ. ಆದರೆ ಈ ಯುದ್ಧ ಸುಲಭವಲ್ಲ. ಅತಿಯಾದ ಆತ್ಮವಿಶ್ವಾಸವನ್ನೂ ಈ ವಿಷಯದಲ್ಲಿ ಹೊಂದಲು ಸಾಧ್ಯವಿಲ್ಲ. ಇದೀಗ ಅತಿಯಾದ ಆತ್ಮವಿಶ್ವಾಸವನ್ನು ಬದಿಗಿಟ್ಟು ಮುನ್ನೆಚ್ಚರಿಕೆಯಿಂದ ಮುಂದುವರೆಯುವುದಷ್ಟೇ ದಾರಿ' ಎಂದು ಹೇಳಿದ್ದಾರೆ.
ಇನ್ನೂ ಕೆಲವು ರಾಜ್ಯಗಳಲ್ಲಿ ಪಾಸಿಟಿವಿಟಿ ದರ 10% ಇದೆ. ಹಲವು ದೇಶಗಳಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಆದ್ದರಿಂದ ನಾವು ಬಹಳ ಜಾಗರೂಕವಾಗಿರಬೇಕು ಸೋಂಕು ರುದ್ರ ರೂಪ ತಾಳಬಹುದು ಎಂದು ಎಚ್ಚರಿಸಿದ್ದಾರೆ.

ಹಬ್ಬಗಳ ಕಾಲವೂ ಇದಾದ್ದರಿಂದ ಕೇಂದ್ರ ಆರೋಗ್ಯ ವ್ಯವಹಾರಗಳ ಸಚಿವಾಲಯ ಮುಂಚಿತವಾಗಿ ನಿಯಮಿತ ಎಚ್ಚರಿಕೆ ನೀಡುತ್ತಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಜಾಗರೂಕವಾಗಿರಬೇಕು. ಜನರು ಕೊರೊನಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳುತ್ತಲೇ ಬಂದಿದೆ.
ಜನರು ಯಾವುದೇ ಕಾರಣಕ್ಕೂ ಎಚ್ಚರಿಕೆಯನ್ನು ನಿರ್ಲಕ್ಷಿಸಬಾರದು, ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದು, ಇನ್ನೂ ಕೆಲವು ದಿನ ಕೊರೊನಾ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದೆ. ಡೆಂಗ್ಯೂ, ಟೈಫಾಯ್ಡ್ ಹಾಗೂ ಇತರೆ ಜ್ವರದ ಪ್ರಕರಣಗಳು ಕಂಡುಬರುತ್ತಿವೆ. ಹಾಗೂ ಇದು ಕೊರೊನಾ ಅಥವಾ ಫ್ಲೂ, ಡೆಂಗ್ಲೂ ಎಂದು ವೈದ್ಯರು ಪತ್ತೆ ಹಚ್ಚುವುದು ಕೂಡ ಕಷ್ಟಕರವಾಗಿದೆ. ಹಾಗಾಗಿ ಜನರು ಕೆಲವು ದಿನ ಯಾವುದೇ ಸೋಂಕಿಗೆ ತುತ್ತಾಗದಂತೆ ತಮ್ಮನ್ನು ತಾವು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಅಕ್ಟೋಬರ್ ಹಾಗೂ ನವೆಂಬರ್ ವೇಳೆಗೆ ಕೊರೊನಾ ಮೂರನೇ ಅಲೆ ಉಲ್ಬಣಗೊಳ್ಳಲಿದೆ ಎಂದು ತಜ್ಞರು ಈ ಹಿಂದೆ ಮಾಹಿತಿ ನೀಡಿದ್ದರು. ಪ್ರತಿನಿತ್ಯ ಅತ್ಯಧಿಕ ಕೊರೊನಾ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದೂ ಎಚ್ಚರಿಸಿದ್ದರು.
ಭಾರತದಲ್ಲಿ ಕೊರೊನಾ ಪ್ರಕರಣಗಳು:
ಭಾರತದಲ್ಲಿ ಭಾನುವಾರ 22,842 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, 244 ಜನರು ಸಾವನ್ನಪ್ಪಿದ್ದಾರೆ. ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 2,70,557 ಆಗಿದ್ದು, ಒಟ್ಟು 3,30,94,529 ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲಿ ಈವರೆಗೂ ಒಟ್ಟು 4,48,817 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕೇರಳದ ಬಳಿಕ ಇದೀಗ ಮಿಜೋರಾಂನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಮಿಜೋರಾಂನಲ್ಲಿ ಪಾಸಿಟಿವಿಟಿ ದರವು ದೇಶದಲ್ಲೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ ಕೇಂದ್ರ ಸರ್ಕಾರವು ತನ್ನ ತಂಡವನ್ನು ಮಿಜೋರಾಂ ರಾಜ್ಯಕ್ಕೆ ಕಳುಹಿಸಿ ನೆರವು ನೀಡುತ್ತಿದೆ.
ಮಿಜೋರಾಂನಲ್ಲಿ ಸದ್ಯ ಪಾಸಿಟಿವಿಟಿ ದರ 18.44% ಇದೆ. ಇದು ದೇಶದಲ್ಲೇ ಅತ್ಯಧಿಕವಾಗಿದೆ.












Click it and Unblock the Notifications