ಭಾರತದಲ್ಲಿ ಕೊರೊನಾ BF7 ಪತ್ತೆ: ಏರ್‌ಫೋರ್ಟ್‌ನಲ್ಲಿ ಪ್ರಯಾಣಿಕರ ತಪಾಸಣೆಗೆ ಸರ್ಕಾರ ಕ್ರಮ?
ಬೆಂಗಳೂರು, ಡಿಸೆಂಬರ್ 21: ಚೀನಾ ದೇಶದಲ್ಲಿ ಉಲ್ಬಣಗೊಂಡು ಆತಂಕ ಸೃಷ್ಟಿಸಿರುವ ಕೊರೊನಾ ರೂಪಾಂತರಿ ತಳಿ BF7 ಸೋಂಕು ಭಾರತಕ್ಕೆ ಕಾಲಿಟ್ಟಿದೆ. ಇದರ ಬೆನ್ನಲ್ಲೆ ಚೀನಾ ಸೇರಿದಂತೆ ಇತರರ ದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಮಾಣಿಕರನ್ನು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ತಪಾಸಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೊರೊನಾ ಮಹಾಮಾರಿ ಮತ್ತೆ ಆರ್ಭಟ ಶುರುವಿಟ್ಟುಕೊಂಡಿದೆ. ಚೀನಾದಲ್ಲಿ ಕಂಡು ಬಂದಿದ್ದ ಕೊರೊನಾ ರೂಪಾಂತರಿ ತಳಿಯು (BF7) ಭಾರತದ ವಡೋದರದ ಸಭಾನ್‌ಪುರ ಪ್ರದೇಶದಲ್ಲಿ ವಾಸಿಸುವ ಎನ್‌ಆರ್‌ಐ ಮಹಿಳೆಯೊಬ್ಬರಲ್ಲಿ ಕಂಡು ಬಂದಿದೆ. ಇದರ ಬೆನ್ನಲ್ಲಿಯೇ ಕೇಂದ್ರ ಆರೋಗ್ಯ ಇಲಾಖೆ ಸಚಿವ ಮನ್ಸೂಖ್ ಮಾಂಡವೀಯ ಅವರು ತಜ್ಞರು ಜೊತೆ ತುರ್ತು ಸಭೆ ನಡೆಸಿದ್ದಾರೆ. ದೇಶದಲ್ಲಿನ ಕೋವಿಡ್ ನಿಯಂತ್ರಣದ ಮುಂಜಾಗ್ರತಾ ಕ್ರಮವಾಗಿ ಸಭೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆಗೆ ಒಳಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆ ನಂತರ ಮಾತನಾಡಿದ ಮನ್ಸೂಖ್ ಮಾಂಡವೀಯ ಅವರು, ದೇಶದಲ್ಲಿ ಕೋವಿಡ್ -19 ಸೋಂಕು ಸಂಪೂರ್ಣವಾಗಿ ಅಂತ್ಯಗೊಂಡಿಲ್ಲ. ಈ ಮಧ್ಯೆ ಓಮಿಕ್ರಾನ್ ರೂಪಾಂತರಿ BF7 ದೇಶದಲ್ಲಿ ಪತ್ತೆ ಆಗಿದೆ. ಈ ಸಂಬಂಧ ದೇಶದ ಆಯಕಟ್ಟಿನ ಸ್ಥಳಗಳಲ್ಲಿ ಕೋವಿಡ್ ಕಣ್ಗಾವಲು ಬಲಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಅಲ್ಲದೇ ಭಾರತ ಆರೋಗ್ಯ ವಿಚಾರದಲ್ಲಿ ಎಂತದ್ದೇ ಪರಿಸ್ಥಿತಿ ಎದುರಿಸಲು ಸಶಕ್ತವಾಗಿದೆ ಎಂದು ತಿಳಿಸಿದರು.

ಕೇವಲ ಶೇ.28ರಷ್ಟು ಜನ ನಿಯಮ ಪಾಲನೆ
ಸಭೆಯಲ್ಲಿ ಭಾಗವಹಿಸಿದ್ದ ಆರೋಗ್ಯ ತಜ್ಞರು ಸೇರಿದಂತೆ ಹಿರಿಯ ಅಧಿಕಾರಿಗಳು ವಿಶ್ವಮಟ್ಟದಲ್ಲಿ ಸದ್ಯದ ಕೋವಿಡ್ ಪರಿಸ್ಥಿತಿ ಹೇಗಿದೆ ಮತ್ತು ಭಾರತದ ಸನ್ನಿವೇಶ ಯಾವ ಹಂತದಲ್ಲಿದೆ ಎಂಬುದನ್ನು ವಿವರಿಸಿದರು. ಜೊತೆಗೆ ಭಾರತದ ಜನಸಂಖ್ಯೆಯ ಶೇ. 27ರಿಂದ 28 ರಷ್ಟು ಜನರು ಮಾತ್ರ ಕೋವಿಡ್ -19ರ ಮುನ್ನೆಚ್ಚರಿಕೆ ಮತ್ತು ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ.
ಕೊರೊನಾ ಬರದಂತೆ ತಡೆಯಲು ಅಥವಾ ಸಮರ್ಥ ನಿರ್ವಹಣೆಗೆ ಜನದಟ್ಟಣೆ ಪ್ರದೇಶಗಳಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ.ವಿ.ಕೆ ಪಾಲ್ ಸಲಹೆ ನೀಡಿದರು.
ಯುಎಸ್‌ನಿಂದ ಭಾರತಕ್ಕೆ ಬಂದಿದ್ದ ಈ ದೇಶದ ಮಹಿಳೆಯಲ್ಲಿ ಓಮಿಕ್ರಾನ್ ರೂಪಾಂತರಿ ಕಂಡು ಬಂದ ನಂತರ ಅವರ ಸಂಪರ್ಕಕ್ಕೆ ಬಂದ ಇಬ್ಬರುನ್ನು ತಪಾಸಣೆಗೆ ಒಳಪಡಿಸಲಾಗಿದೆ. ಗಂಟಲು ಮಾದರಿಯನ್ನು ವೈರಸ್ ತಳಿ ಪತ್ತೆ ಮಾಡುವ ಜಿನೋಮ್ ಸಿಕ್ವೆನ್ಸಿಂಗ್ ಲ್ಯಾಬ್‌ಗೆ ಕಳುಹಿಸಲಾಗಿದೆ.












Click it and Unblock the Notifications