Coromandel Express Train Accident: ರೈಲು ಅಪಘಾತಕ್ಕೆ 50 ಜನ ಬಲಿ, 179 ಜನರಿಗೆ ಗಾಯ?
ಭುವನೇಶ್ವರ: ಭೀಕರ ರೈಲು ಅಪಘಾತಕ್ಕೆ 50 ಜನರು ಬಲಿಯಾಗಿರುವ ಘಟನೆ ಒಡಿಶಾದ ಬಾಲಸೋರ್ ಪ್ರದೇಶದಲ್ಲಿ ನಡೆದಿದೆ. ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 50ಕ್ಕೂ ಹೆಚ್ಚು ಜನ ಬಲಿಯಾಗಿದ್ದು, 179 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಶಾಲಿಮಾರ್ & ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಒಡಿಶಾದ (Odisha) ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣ ಸಮೀಪ ಗೂಡ್ಸ್ ರೈಲಿಗೆ ಗುದ್ದಿದೆ. ಆಗ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ (Coromandel Express Train) 8 ಬೋಗಿ ಹಳಿತಪ್ಪಿವೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನ ಮೃತಪಟ್ಟು ಹಾಗೂ 179 ಜನರಿಗೆ ಗಾಯ ಆಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮತ್ತೊಂದ್ಕಡೆ ಗಾಯಾಳುಗಳ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ (Odisha Train Accident).

ದೇಶದ ಇತಿಹಾಸದಲ್ಲೇ ಭೀಕರ ಅಪಘಾತ
ಒಡಿಶಾದ ವಿಶೇಷ ಪರಿಹಾರ ಆಯುಕ್ತರ ಕಚೇರಿ ಸಿಬ್ಬಂದಿ ಸೇರಿದಂತೆ ರಕ್ಷಣಾ ಸಿಬ್ಬಂದಿ ಅಪಘಾತ ಸಂಭವಿಸಿರುವ ಸ್ಥಳಕ್ಕೆ ತೆರಳಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಹಲವು ಬೋಗಿಗಳು ಹಳತಪ್ಪಿ ಬಿದ್ದಿರುವ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವೂ ಇದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಇರುವ ಎಲ್ಲ ಸೌಲಭ್ಯ ರೈಲ್ವೆ ಇಲಾಖೆ ಒದಗಿಸಿದೆ. ದೇಶದ ಇತಿಹಾಸದಲ್ಲೇ ನಡೆದಿರುವ ಭೀಕರ ರೈಲು ಅಪಘಾತಗಳಲ್ಲಿ ಇದೂ ಒಂದಾಗಿದೆ ಎನ್ನಲಾಗುತ್ತಿದೆ.
ಕೋಚ್ ಪಲ್ಟಿ, ಪ್ರಯಾಣಿಕರ ಗತಿ ಏನು?
ಅವರೆಲ್ಲಾ ಅಂದುಕೊಂಡ ಸ್ಥಳಕ್ಕೆ ಹೋಗಬೇಕು ಅಂತಾ ರೈಲು ಹತ್ತಿದ್ದರು. ಹಾಯಾಗಿ ತಮ್ಮ ಜರ್ನಿ ಎಂಜಾಯ್ ಮಾಡುತ್ತಿದ್ದರು. ಆದರೆ ಕತ್ತಲೆ ಒಳಗೆ ದಿಢೀರ್ ಆಘಾತವು ಎದುರಾಗಿದ್ದು, ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಹೀಗೆ ಕ್ಷಣಮಾತ್ರದಲ್ಲಿ ನಡೆದ ಘಟನೆ ಪರಿಣಾಮ ಎಕ್ಸ್‌ಪ್ರೆಸ್ ರೈಲಿನ ಕೋಚ್ ಅಂದರೆ ಬೋಗಿಗಳು ಪಲ್ಟಿಯಾಗಿ ಬಿದ್ದಿವೆ. ಹೀಗೆ ಪಲ್ಟಿಯಾದ ಕೋಚ್‌ಗಳಲ್ಲಿ ಹೆಚ್ಚಿನ ಪ್ರಯಾಣಿಕರು ಸಿಲುಕಿ ಮೃತಪಟ್ಟಿರುವ ಸಾಧ್ಯತೆ ಇದೆ.

ಒಂದೇ ಹಳಿಗೆ ಬಂದ ರೈಲುಗಳು?
ಅಪಾಘಾತದಲ್ಲಿ ಮೃತಪಟ್ಟಿರುವ ಪ್ರಯಾಣಿಕರ ಸಂಖ್ಯೆ ಇನ್ನೂ ದೃಢವಾಗಿಲ್ಲ. ಆದರೆ ಈ ಹಂತಕ್ಕೆ ಸುಮಾರು 50ಕ್ಕೂ ಹೆಚ್ಚು ಜನ ಮೃತಪಟ್ಟು 179 ಜನರಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಹಲವು ಬೋಗಿಗಳಲ್ಲಿ ಪ್ರಯಾಣಿಕರ ರಕ್ಷಣಾ ಕಾರ್ಯ ಕೂಡ ಭರದಿಂದ ಸಾಗಿದ್ದು, ಗಾಯಾಳು ಹಾಗೂ ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಈ ಘಟನೆಗೆ ಎರಡೂ ರೈಲುಗಳು ಒಂದೇ ಮಾರ್ಗದಲ್ಲಿ ಬಂದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸಿಗ್ನಲ್ ವೈಫಲ್ಯದಿಂದ ಎರಡೂ ರೈಲುಗಳು ಒಂದೇ ಹಳಿಯಲ್ಲಿ ಬಂದು ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಪಘಾತಕ್ಕೆ ಒಳಗಾದ ರೈಲು ಪ.ಬಂಗಾಳದ ಶಾಲಿಮಾರ್ ನಿಲ್ದಾಣದಿಂದ ಹೊರಟು ಚೆನ್ನೈನ ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣ ಸೇರುತ್ತದೆ. ರೈಲು ಮಧ್ಯಾಹ್ನ 3.30ಕ್ಕೆ ಪ್ರಯಾಣ ಪ್ರಾರಂಭಿಸಿದ್ದು ಸಂಜೆ 6.30ಕ್ಕೆ ಬಾಲಸೋರ್ ನಿಲ್ದಾಣ ತಲುಪಿತು ಅಂತಾ ಹೇಳಲಾಗಿದೆ. ಹಾಗೇ ಇದು ನಾಳೆ ಸಂಜೆ 4.50ಕ್ಕೆ ಚೆನ್ನೈ ತಲುಪಬೇಕಿತ್ತು, ಆದರೆ ಅಷ್ಟರೊಳಗೆ ಈ ಭೀಕರ ಘಟನೆ ಸಂಭವಿಸಿದೆ. ಇನ್ನು ಸರ್ಕಾರದ ಸಹಾಯವಾಣಿಗೆ ಈ ಸಂಖ್ಯೆ ಬಳಸಬಹುದು: 033-26382217, 8972073925, 67822 62286, 9332392339, 8249591559, 7978418322, 9903370746
ಒಟ್ನಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಗಂಭೀರವಾಗುತ್ತಿದೆ. ಇನ್ನೊಂದ್ಕಡೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗುವ ಭೀತಿ ಇದೆ. ಗಾಯಾಳುಗಳು ರೈಲಿನ ಬೋಗಿ ಒಳಗೆ ನರಳುತ್ತಿದ್ದು, ಸ್ಥಳೀಯರು ರೈಲಿನ ಒಳಗೆ ಸಿಲುಕಿರುವವರ ರಕ್ಷಣೆಗೆ ಸಹಾಯ ಮಾಡುತ್ತಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ.












Click it and Unblock the Notifications