ಕರ್ನಾಟಕ, ರಾಜಸ್ಥಾನ ನಾಯಕತ್ವ ಬಿಕ್ಕಟ್ಟು: ಮಲ್ಲಿಕಾರ್ಜುನ ಖರ್ಗೆ ಮುಂದಿವೆ ಹಲವು ಸವಾಲು
ಬೆಂಗಳೂರು, ಅಕ್ಟೋಬರ್ 21: ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಕರ್ನಾಟಕದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಪಕ್ಷವನ್ನು ಹಂತಹಂತವಾಗಿ ಮೇಲೆತ್ತುವ ಸವಾಲು ಖರ್ಗೆ ಅವರ ಮೇಲಿದೆ. ನೆಹರು- ಗಾಂಧಿ ಪರಿವಾರದ ಸದಸ್ಯರ ಜೊತೆಜೊತೆಗೆ ರಾಜ್ಯ ನಾಯಕರ ವಿಶ್ವಾಸವನ್ನೂ ತೆಗೆದುಕೊಂಡು ಖರ್ಗೆ ಮುನ್ನಡೆಯಬೇಕಿದೆ. ಕಾಂಗ್ರೆಸ್ ಪಕ್ಷವು ಪ್ರಾಬಲ್ಯ ಹೊಂದಿರುವ ಕರ್ನಾಟಕ ಹಾಗೂ ರಾಜಸ್ಥಾನದ ನಾಯಕರ ನಡುವಿನ ಅಸಮಾಧಾನವನ್ನು ಬಗೆಹರಿಸಬೇಕಿದೆ.
ಡಿಕೆಶಿ- ಸಿದ್ದರಾಮಯ್ಯ ನಡುವೆ ನಾಯಕತ್ವ ಕಿತ್ತಾಟ
ಕರ್ನಾಟಕದಲ್ಲಿ ಮುಂದಿನ ಏಳೆಂಟು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ನಡೆರುವುದು ಗುಟ್ಟಾಗಿ ಉಳಿದಿಲ್ಲ.
ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಜನ್ಮ ದಿನಾಚರಣೆಯು ಮೂಲ ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ತಾವೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳಲು ಸಿದ್ದರಾಮಯ್ಯ ನಡೆಸಿದ ಉತ್ಸವವಿದು ಎಂದು ಕೆಲವರು ಅಪಸ್ವರ ಎತ್ತಿದ್ದರು.

ಈ ವಿಚಾರವಾಗಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ವ್ಯಕ್ತಿ ನಿಷ್ಠೆ ಮುಖ್ಯವಲ್ಲ. ಪಕ್ಷ ನಿಷ್ಠೆ ಮುಖ್ಯವೆಂದು ಪರೋಕ್ಷವಾಗಿ ಸಿದ್ದರಾಮಯ್ಯ ಬೆಂಬಲಿಗರಿಗೆ ಹೇಳಿದ್ದರು. ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಅವರಿಂದಲೂ ಅಸಮಾಧಾನ ವ್ಯಕ್ತವಾಗಿತ್ತು. ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಸಿದ್ದರಾಮೋತ್ಸವವನ್ನು ಒಪ್ಪಿಕೊಂಡಿರಲಿಲ್ಲ. ಆದರೆ, ಸಿದ್ದರಾಮಯ್ಯ ನಿಷ್ಠರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಿತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಜರಿದ್ದರು. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಭಿನ್ನಾಭಿಪ್ರಾಯ ಹೋಗಲಾಡಿಸುವ ಯತ್ನವನ್ನು ರಾಹುಲ್ ಮಾಡಿದ್ದರು. ಆದರೂ, ಈ ಇಬ್ಬರೂ ನಾಯಕರ ನಡುವಿನ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದು ರಾಜಕೀಯ ವಿಶ್ಲೇಷಕರ ವಾದ.
ಮೂಲ ಕಾಂಗ್ರೆಸ್ಸಿಗರಾದ ಡಿ.ಕೆ.ಶಿವಕುಮಾರ್ ಪಕ್ಷ ನಿಷ್ಠರು ಎಂಬುದರಲ್ಲಿ ಎರಡು ಮಾತಿಲ್ಲ. ಡಿಕೆಶಿ ಹಾಗೂ ಖರ್ಗೆ ನಡುವಿನ ಸಂಬಂಧ ಉತ್ತಮವಾಗಿದೆ. ಆದರೆ, ಸಿದ್ದರಾಮಯ್ಯನವರಿಗೆ ಅಪಾರ ಜನ ಸಮೂಹದ ಬೆಂಬಲವಿದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಕರ್ನಾಟಕದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅಹಿಂದ ಮತಗಳು ಸಿದ್ದರಾಮಯ್ಯನವರ ಬೆನ್ನಿಗಿವೆ. ಇದೆಲ್ಲವನ್ನೂ ಅಳೆದುತೂಗಿ ನೋಡಿದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್ ಎಂಬುದಂತೂ ಸತ್ಯ. ಇಂತಹ ಇಬ್ಬರು ಪ್ರಭಾವಿ ನಾಯಕರ ನಡುವಿನ ಸಂಘರ್ಷವನ್ನು ಶಮನಗೊಳಿಸುವ ಗುರುತರ ಜವಾಬ್ದಾರಿ ಖರ್ಗೆ ಮೇಲಿದೆ.
ರಾಜಸ್ಥಾನದಲ್ಲಿ ಗೆಹಲೋಟ್- ಪೈಲಟ್ ಗುದ್ದಾಟ
ಕಾಂಗ್ರೆಸ್ ಅಧಿಕಾರದಲ್ಲಿರುವ ಭಾರತದ ಬಹುದೊಡ್ಡ ರಾಜ್ಯ ರಾಜಸ್ಥಾನ. ಅಲ್ಲಿನ ಪ್ರಭಾವಿ ನಾಯಕರಾದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ಸಂಘರ್ಷ ಹಲವು ಬಾರಿ ಬಹಿರಂಗಗೊಂಡಿದೆ. ಇದು ಕಾಂಗ್ರೆಸ್‌ನ ಹಳೆಯ ಮತ್ತು ಹೊಸ ಪೀಳಿಗೆಗಳ ನಡುವಿನ ಗುದ್ದಾಟವೆಂದೇ ಹೇಳಲಾಗುತ್ತಿದೆ.

ಗೆಹಲೋಟ್ ಹಾಗೂ ಪೈಲಟ್ ಇಬ್ಬರೂ ಪಕ್ಷ ನಿಷ್ಠರು. ಕಳೆದ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಚಿನ್ ಪೈಲಟ್ ಹಗಲಿರುಳು ಶ್ರಮಿಸಿದ್ದಾರೆ ಎಂಬುದಂತೂ ನಿಜ. ಆದರೆ, ವಯಸ್ಸಿನಲ್ಲಿ ಹಿರಿಯರಾಗಿರುವ ಗೆಹಲೋಟ್, ನೆಹರು-ಗಾಂಧಿ ಪರಿವಾರಕ್ಕೆ ನಿಕಟ ಸಂಪರ್ಕ ಹೊಂದಿದವರು. ಗೆಹಲೋಟ್‌ಗೆ ಬೆಂಬಲವಾಗಿ ಶಾಸಕರೂ ಇದ್ದಾರೆ. ಆದರೆ, ಕಾಂಗ್ರೆಸ್‌ಗೆ ಪೈಲಟ್ ತರಹದ ಹೊಸ ಪೀಳಿಗೆಯ ಅವಶ್ಯಕತೆಯೂ ಇದೆ. ಕಾಂಗ್ರೆಸ್‌ನಿಂದ ದೂರವಾಗುತ್ತಿರುವ ಯುವಸಮೂಹವನ್ನು ಆಕರ್ಷಿಸಲು ಪೈಲಟ್‌ರಂತ ನಾಯಕರು ಅನಿವಾರ್ಯವೂ ಹೌದು. ಈ ಇಬ್ಬರ ನಡುವಿನ ಅಸಮಾಧಾನವನ್ನು ಬಗೆಹರಿಸುವ ನಿಟ್ಟಿನಲ್ಲಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾವ ತಂತ್ರ ಬಳಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications