ಸಿದ್ದರಾಮಯ್ಯ ಕರ್ನಾಟಕದ ಮುಂದಿನ ಸಿಎಂ ಎಂದವರಿಗೆ ನೋಟಿಸ್ ನೀಡಲು ಸುರ್ಜೆವಾಲ ಸೂಚನೆ
ನವದೆಹಲಿ, ಮೇ 17: ಜನರಿಂದ ಬಹುಮತ ಪಡೆದ ಕಾಂಗ್ರೆಸ್‌ನಿಂದ ಕರ್ನಾಟಕದ ಸಿಎಂ ಯಾರಾಗುತ್ತಾರೆ?. ಈ ವಿಚಾರ ತಲೆನೋವಾಗಿ ಪರಿಣಮಿಸಿರುವ ಹೊತ್ತಿನಲ್ಲೇ, ಹೈಕಮಾಂಡ್ ನೀರ್ಧಾರ ಅಧಿಕೃತ ಪ್ರಕಟಿಸುವ ಮುನ್ನವೇ ಹೇಳಿಕೆ ನೀಡುವವರ ವಿರುದ್ಧ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆ ಕಗ್ಗಂಟು ಇವತ್ತು ಸಹ ಬಗೆಹರಿಯುವಂತೆ ಕಾಣುತ್ತಿಲ್ಲ. ಈ ಮಧ್ಯೆ ಸಿದ್ದರಾಮಯ್ಯ ಸಿಎಂ ಎಂದು ಹೇಳುತ್ತಿರುವ ನಾಯಕರ ವಿರುದ್ದ ಕರ್ನಾಟಕ ರಾಜ್ಯ ಕಾಂಗ್ರೆಸ್ ವಿರುದ್ಧ ರಣದೀಪ್ ಸಿಂಗ ಸುರ್ಜೆವಾಲ ಅವರು ಗರಂ ಆಗಿದ್ದಾರೆ. ಹೀಗೆ ಹೇಳಿಕೆ ನೀಡಿದವರಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ಕರ್ನಾಟಕದ ಮುಂದಿನ ಸಿಎಂ ಎಂದು ಹೇಳುತ್ತಿರುವವರಿಗೆ ಹೈಕಮಾಂಡ್ ಖಡಕ್ ಎಚ್ಚರಿಕೆ ಕೊಟ್ಟಿದೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹಾಗೂ ಅಶೋಕ್ ಪಟ್ಟಣ್ ಅವರಿಗೆ ನೋಟಿಸ್ ನೀಡುವಂತೆ ಸುರ್ಜೇವಾಲ ಈಗಾಗಲೇ ಸೂಚಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಕಾಂಗ್ರೆಸ್‌ನಿಂದ ಡಿಕೆ ಶಿವಕುಮಾರ್ ಇಲ್ಲವೇ ಸಿದ್ದರಾಮಯ್ಯ ಈ ಇಬ್ಬರಲ್ಲಿ ಸಿಎಂ ಯಾರಾಗಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ, ಬರೀ ಚರ್ಚೆಗಳೇ ನಡೆಯುತ್ತಿವೆ. ಇವತ್ತು ಬುಧವಾರ ಹೈಕಮಾಂಡ್ ನಿರ್ಧಾರ ಬಹುತೇಕ ಫೈನಲ್ ಆಗುತ್ತದೆ ಎನ್ನಲಾಗಿತ್ತು. ಅದರ ಆಧಾರದಲ್ಲೇ ಮಾಧ್ಯಮಗಳು ಸಿದ್ದರಾಮಯ್ಯ ಸಿಎಂ ಆಗುವುದು ಬಹುತೇಕ ನಿಶ್ಚಯ ಎಂದು ವರದಿ ಬಿತ್ತರಿಸಿದ್ದವು.
ಎಐಸಿಸಿ ಅಧಿಕೃತ ನಿರ್ಧಾರ ತಿಳಿಸುತ್ತದೆ: ವದಂತಿ ನಂಬಬೇಡಿ
ಇದೆಲ್ಲ ಬೆಳವಣಿಗೆ ಬೆನ್ನಲ್ಲೆ ಎಚ್ಚೆತ್ತ ರಣದೀಪ್ ಸಿಂಗ್ ಸುರ್ಜೆವಾಲ ಅವರು, ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ಕುರಿತು ಹೈಕಮಾಂಡ್‌ನಿಂದ ನಿರ್ಧಾರ ಆಗಬೇಕಿದೆ. ತದನಂತರವೇ ಅಧಿಕೃತ ಮಾಹಿತಿ ಹೊರಬೀಳಲಿದೆ. ಅಷ್ಟರೊಳಗೆ ಯಾರು ಸುಳ್ಳು ಸುದ್ದಿ, ವದಂತಿಗಳಿಗೆ ಕಿವಿಗೊಡದಂತೆ ಅವರು ಮನವಿ ಮಾಡಿದ್ದಾರೆ.

ಅಲ್ಲದೇ ಈ ಸಂಬಂಧ ಹೇಳಿಕೆ ನೀಡುವವರಿಗೂ, ಪಕ್ಷದ ಮುಖಂಡರಿಗೂ ಅವರು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಉಭಯ ನಾಯಕರು ಕಾಂಗ್ರೆಸ್ ಅಧಿನಾಯಕರ ಜೊತೆಗೆ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ. ಇನ್ನೂ ಆಯ್ಕೆ ಆಗಿಲ್ಲ. ಈ ಬಗ್ಗೆ ಹೈಕಮಾಂಡ್ ಅಧಿಕೃತವಾಗಿ ತಿಳಿಸಲಿದೆ. ದಯವಿಟ್ಟು ಊಹಾಪೋಹಗಳನ್ನು ನಂಬಬೇಡಿ. ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಈ ಬಗ್ಗೆ ನಿರ್ಧರಿಸಲಿದ್ದಾರೆ ಎಂದರು.
ಪ್ರಮಾಣವಚನ ಸ್ವೀಕಾರ ಸಿದ್ಧತೆಗೆ ಬ್ರೇಕ್
ಅಲ್ಲದೇ ಸಿದ್ದರಾಮಯ್ಯ ಸಿಎಂ ಬಹುತೇಕ ಖಚಿತ ಎಂಬ ಮಾಧ್ಯಮಗಳ ವರದಿಗೆ ಡಿಕೆ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಮಲ್ಲಿಕಾರ್ಜುನ್ ಖರ್ಗೆ ಬಳಿ ಸಿದ್ದರಾಮಯ್ಯ ಸಿಎಂ ಎಂಬ ವಿಚಾರ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡಿದ್ದರು. ಎಐಸಿಸಿ ಅಧಿಕೃತ ಘೋಷಣೆಗೂ ಮುನ್ನವೇ ಮಾಧ್ಯಮಗಳಿಗೆ ಹೇಳಿಕೆ ನೀಡುವವರ ವಿರುದ್ಧ ಗರಂ ಆಗಿದ್ದರು.
ಮಾಧ್ಯಮಗಳಲ್ಲಿನ ಸುದ್ದಿ ಕಂಡು ಸಿದ್ದರಾಮಯ್ಯ ಬೆಂಬಲಿಗರು, ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಒಂದೆಡೆ ಸಂಭ್ರಮಾಚರಣೆ ನಡೆಯುತ್ತಿದ್ದರೆ, ಮತ್ತೊಂದೆಡೆ ನೂತನ ಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಭರದ ಸಿದ್ಧತೆಗೆ ಬ್ರೇಕ್ ಬಿದ್ದಿದೆ.












Click it and Unblock the Notifications