ಲೋಕಪಾಲರ ನೇಮಕ ಸಭೆಯಿಂದ ದೂರ ಉಳಿದ ಖರ್ಗೆ
ನವದೆಹಲಿ, ಮಾರ್ಚ್ 1: ಲೋಕಪಾಲರ ನೇಮಕಕ್ಕಾಗಿ ಪ್ರಧಾನಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಿಂದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ದೂರ ಉಳಿದಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಭೆಗೆ ಅವರನ್ನು ಕರೆಯಲಾಗಿತ್ತು. ಆದರೆ 'ವಿಶೇಷ ಆಹ್ವಾನಿತ'ರಾಗಲು ಖರ್ಗೆ ನಿರಾಕರಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಮಲ್ಲಿಕಾರ್ಜುನ್ ಖರ್ಗೆ, "ವಿಶೇಷ ಆಹ್ವಾನಿತರ ಹೆಸರಿನಲ್ಲಿ ಸಭೆಗೆ ಆಹ್ವಾನ ನೀಡಿ ದೇಶದ ಪ್ರಮುಖ ಭ್ರಷ್ಟಾಚಾರ ವಿರೋಧಿ ಕಣ್ಗಾವಲು ಸಂಸ್ಥೆಯ ಮುಖ್ಯಸ್ಥರ ನೇಮಕದಲ್ಲಿ ವಿಪಕ್ಷಗಳ ಧ್ವನಿಯನ್ನು ಕಡೆಗಣಿಸಲಾಗಿದೆ. ಲೋಕಪಾಲ್ ಮತ್ತು ಲೋಕಾಯುಕ್ತ ಆಕ್ಟ್ - 2013 ಒಟ್ಟಾರೆ ತನ್ನ ಸಾರದಲ್ಲಿ ಇದನ್ನು ನಿರಾಕರಿಸುತ್ತದೆ," ಎಂದಿದ್ದಾರೆ.
"ಲೋಕಪಾಲರ ನೇಮಕದಲ್ಲಿ ರಚನಾತ್ಮಕ ಭಾಗವಹಿಸುವಿಕೆಯನ್ನು ನಿರಾಕರಿಸಿ ಕೇವಲ ಕಾಗದದ ದಾಖಲೆಗೋಸ್ಕರ ಈ ದಾರಿ ತುಳಿದಿರುವುದು ಅಚ್ಚರಿಯನ್ನು ಉಂಟುಮಾಡಿದೆ," ಎಂದು ಅವರು ಪತ್ರದಲ್ಲಿ ಖಾರವಾಗಿ ಹೇಳಿದ್ದಾರೆ.

"ಇದೇ ವೇಳೆ ಅವರು ಡಿಸೆಂಬರ್ 18, 2014ರಲ್ಲಿ ಲೋಕಪಾಲ ಕಾಯಿದೆ 2013ಕ್ಕೆ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿತ್ತು. ಈ ಮಸೂದೆಯಲ್ಲಿ ವಿಪಕ್ಷ ನಾಯಕನ ಬದಲು ಅತೀ ದೊಡ್ಡ ಪಕ್ಷದ ನಾಯಕ ಎಂದು ಬದಲಿಸಲಾಗಿತ್ತು. ಇದಕ್ಕೆ ಸಂಸತ್ತಿನ ಸ್ಥಾಯೀ ಸಮಿತಿ ಒಪ್ಪಿಗೆ ನೀಡಿಯೂ ಸರಕಾರ ಇದನ್ನು ಅಂಗೀಕಾರ ಮಾಡಿಲ್ಲ," ಎಂದು ಖರ್ಗೆ ದೂರಿದ್ದಾರೆ.
"ಸಭೆಯಲ್ಲಿ ವಿಶೇಷ ಆಹ್ವಾನಿತನಾಗಿ ಯಾವುದೇ ಹಕ್ಕುಗಳಿಲ್ಲದೆ, ಮತ ಚಲಾಯಿಸುವ ಅವಕಾಶವಿಲ್ಲದೆ ಮತ್ತು ಅಭಿಪ್ರಾಯಗಳನ್ನು ದಾಖಲಿಸುವ ಆಯ್ಕೆಯೂ ಇಲ್ಲದೆ ಭಾಗವಹಿಸುವುದು ಕೇವಲ ಆಟಕ್ಕುಂಟು ಲೆಕ್ಕಕಿಲ್ಲದಂತಾಗುತ್ತದೆ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications