Haryana Assembly Election 2024: ಮತದಾರರು ಬಿಜೆಪಿ ಹೊರಹಾಕಲು ನಿರ್ಧರಿಸಿದ್ದಾರೆ ಎಂದ ಸುರ್ಜೆವಾಲಾ
ಹರಿಯಾಣ ವಿಧಾನಸಭಾ ಚುನಾವಣೆಯ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ, ಹರಿಯಾಣದ ಮತದಾರರು ಮೊದಲಿಗೆ ಬಿಜೆಪಿಯನ್ನು ಹೊರಹಾಕಲು ದೃಢವಾಗಿ ನಿರ್ಧರಿಸಿದ್ದಾರೆ ಎಂದಿದ್ದಾರೆ. ಐಎನ್‌ಎಲ್‌ಡಿ-ಬಿಎಸ್‌ಪಿ ಮತ್ತು ಜೆಜೆಪಿ-ಆಜಾದ್ ಸಮಾಜ ಪಕ್ಷಗಳಿಂದಾಗಿ ನಮ್ಮ ಹಳೆಯ ಪಕ್ಷದ ಭವಿಷ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರು ಎಲ್ಲ ರಂಗದಲ್ಲೂ ಹರಿಯಾಣದಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಮತದಾರರು ಈ ಚುನಾವಣೆಯಲ್ಲಿ ಮೊದಲಿಗೆ ಬಿಜೆಪಿಯನ್ನು ಹೊರಹಾಕುವತ್ತ ಗಮನ ಹರಿಸಿದ್ದಾರೆ. ಇದೇ ಸಮಯದಲ್ಲಿ ಹರಿಯಾಣದ ಜನರು ನಮ್ಮ ಕಾಂಗ್ರೆಸ್ ಅನ್ನು ಬೆಂಬಲಿಸಲು ಮನಸ್ಸು ಮಾಡಿದ್ದಾರೆ ಎಂದೂ ಸುರ್ಜೆವಾಲಾ ಹೇಳಿದ್ದಾರೆ.

ಬಿಜೆಪಿಯಿಂದಾಗಿ ಜನರು ತುಂಬಾ ಬೇಸತ್ತಿದ್ದಾರೆ. ಹಾಗಾಗಿ ಅವರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮನಸ್ಸು ಮಾಡಿದ್ದಾರೆ. ಹಾಗಾಗಿ ಬೇರೆ ವಿಷಯಗಳು ನಮಗೆ ಮುಖ್ಯವಾಗುತ್ತದೆ ಎಂದು ಭಾವಿಸುವುದಿಲ್ಲ. ಮೊದಲ ಬಾರಿಗೆ ಇಲ್ಲಿ ಸಮಸ್ಯೆಗಳು ಕೂಡ ಮರೆಯಾಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ಹರಿಯಾಣದ 90ರ ಪೈಕಿ 89 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಈ ಬಾರಿ ಕಾಂಗ್ರೆಸ್ ಪಕ್ಷವು ಈ ಹಿಂದೆ 2005ರ ಸಾಧನೆಯನ್ನು ಸರಿಗಟ್ಟಬಹುದು ಅಥವಾ ಅದನ್ನು ಮೀರಿಸಲೂಬಹುದು. ಈ ಚುನಾವಣೆ ಈಗ ಸಂಪೂರ್ಣವಾಗಿ ಕಾಂಗ್ರೆಸ್‌ಗೇ ಸೇರಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹರಿಯಾಣದ ಮಾಜಿ ಸಚಿವರೂ ಹಾಗೂ ಕಾಂಗ್ರೆಸ್‌ನ ಹಾಲಿ ರಾಜ್ಯಸಭಾ ಸಂಸದರಾಗಿರುವ ರಣದೀಪ್ ಸುರ್ಜೆವಾಲಾ ಅವರು ಕೈತಾಲ್ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲಿ ಅವರ ಮಗ ಆದಿತ್ಯ ಸುರ್ಜೆವಾಲಾ ಕೂಡ ಸ್ಪರ್ಧಿಸುತ್ತಿರುವುದು ಗಮನ ಸೆಳೆದಿದೆ. ಬಿಜೆಪಿ ಜೊತೆಗಿನ ಮತದಾರರ ಅಸಮಾಧಾನವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಪಕ್ಷವು ಸಿದ್ಧವಾಗಿದೆ. ಹಾಗಾಗಿ ಸಣ್ಣ ಪಕ್ಷಗಳ ಪ್ರಭಾವವನ್ನು ಇದು ಮರೆಮಾಡುತ್ತದೆ ಎಂದು ಸುರ್ಜೆವಾಲಾ ಸಮರ್ಥಿಸಿಕೊಂಡಿದ್ದಾರೆ.
ರಣದೀಪ್ ಸುರ್ಜೇವಾಲಾ ಅವರ ಪುತ್ರ ಆದಿತ್ಯ ಸುರ್ಜೇವಾಲಾ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಕೈತಾಲ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ, ದಿವಂಗತ ಶಂಶೇರ್ ಸಿಂಗ್ ಸುರ್ಜೆವಾಲಾ ಅವರ ಮೊಮ್ಮಗ ಆದಿತ್ಯ ಅವರು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವೀಧರರಾಗಿದ್ದು, ಸುರ್ಜೆವಾಲಾ ಕುಟುಂಬದ ಮೂರನೇ ತಲೆಮಾರಿನ ರಾಜಕಾರಣಿಯಾಗಿ ಮಿಂಚಲು ಸಜ್ಜಾಗಿದ್ದಾರೆ.
ಹರಿಯಾಣದಲ್ಲೂ ಈಗಾಗಲೇ ಕಾಂಗ್ರೆಸ್ ಗ್ಯಾರಂಟಿ ಅಸ್ತ್ರವನ್ನೇ ಬಳಸಿದ್ದು, ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ ಅಲ್ಲಿನ ಜನರಿಗೆ ಭರ್ಜರಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಸದ್ಯ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಎಲ್ಲ ರೀತಿಯಿಂದಲೂ ಸಜ್ಜಾಗಿದೆ ಎಂದು ಅಲ್ಲಿನ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಮತ್ತೊಂದೆಡೆ ಬಿಜೆಪಿ ಪಕ್ಷ ಕೂಡ ಸರಣಿ ಪ್ರಚಾರದ ಮೂಲಕ ಕಾಂಗ್ರೆಸ್‌ಗೆ ಟಕ್ಕರ್ ಕೊಡುತ್ತಿದೆ. ಈಗಾಗಲೇ ಪ್ರಧಾನಿ ಮೋದಿ ಭರ್ಜರಿ ಪ್ರಚಾರ ಕೂಡ ಮಾಡಿದ್ದಾರೆ. ಅಕ್ಟೋಬರ್ 5ರಂದು ಹರಿಯಾಣದ ವಿಧಾನಸಭಾ ಚುನಾವಣೆ ನಿಗದಿಯಾಗಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಬರಲಿದೆ.












Click it and Unblock the Notifications