ಉತ್ತರಾಖಂಡದಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲ, ಬಿಜೆಪಿ ಜೊತೆಗಷ್ಟೇ ಆಪ್ ಪೈಪೋಟಿ
ಡೆಹ್ರಾಡೂನ್, ಡಿಸೆಂಬರ್ 23: ಉತ್ತರಾಖಂಡ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಭಾರತೀಯ ಜನತಾ ಪಕ್ಷವೊಂದೇ ಪ್ರಮುಖ ಪ್ರತಿಸ್ಪರ್ಧಿ ಆಗಲಿದೆ ಎಂದು ಆಪ್ ಮುಖ್ಯಮಂತ್ರಿ ಅಭ್ಯರ್ಥಿ ನಿವೃತ್ತ ಕರ್ನಲ್ ಅಜಯ್ ಕೋಠಿಯಾಲ್ ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶದಲ್ಲಿ ಮುಂಬರುವ ಉತ್ತರಾಖಂಡ್ ವಿಧಾನಸಭೆ ಚುನಾವಣೆ ಬಗ್ಗೆ ಮಾತನಾಡಿದ್ದಾರೆ. "2022ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಆಮ್ ಆದ್ಮಿ ಪಕ್ಷಕ್ಕೆ ಪ್ರತಿಸ್ಪರ್ಧಿ ಆಗಲಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
"ಕಾಂಗ್ರೆಸ್ ಈಗಾಗಲೇ ಸೋತ ಪಕ್ಷವಾಗಿದೆ. ಪ್ರಸ್ತುತ ಅಧಿಕಾರದಲ್ಲಿ ಇರುವವರು ಯಾರು?, ನಮ್ಮ ವಿರುದ್ಧ ಯಾರು ಹೆಚ್ಚು ತಮ್ಮ ಅಧಿಕಾರವನ್ನು ಬಳಸುತ್ತಾರೆ?, ಸದ್ಯಕ್ಕೆ ಶಕ್ತಿಶಾಲಿ ಪಕ್ಷ ಎಂದರೆ ಅದು ಬಿಜೆಪಿ. ಅವರು ತಮ್ಮ ವಿರುದ್ಧ ಅಧಿಕಾರವನ್ನು ಬಳಸಿಕೊಳ್ಳಬಹುದು. ಹಾಗಿದ್ದ ಮೇಲೆ ನಾವು ಕಾಂಗ್ರೆಸ್ ಕಡೆಗೆ ಏಕೆ ನೋಡಬೇಕು. ನಾವು ಬಿಜೆಪಿಯನ್ನು ಸೋಲಿಸಬೇಕಾಗಿದೆ," ಎಂದು ಅಜಯ್ ಕೋಠಿಯಾಲ್ ಹೇಳಿದ್ದಾರೆ.

ಆಪ್ ಪರ ಶೇ.20ಕ್ಕಿಂತ ಹೆಚ್ಚು ಜನರ ಒಲವು
ಉತ್ತರಕಾಶಿ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅಜಯ್ ಕೋಠಿಯಾಲ್ 2022ರ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಶೇ.20ಕ್ಕಿಂತ ಹೆಚ್ಚು ಜನರಿ ಆಪ್ ಪರ ಒಲವು ಹೊಂದಿದ್ದಾರೆ. ಒಂದು ವೇಳೆ ಯಾವುದೇ ಪಕ್ಷಕ್ಕೆ ಬಹುಮತ ಸಿಗದೇ ಹೋದಲ್ಲಿ, ಆಪ್ ಎರಡನೇ ಬಾರಿ ಚುನಾವಣೆಗೆ ಹೋಗಲಿದೆ," ಎಂದು ಹೇಳಿದ್ದಾರೆ.

ಹಳೆಯ ಪಕ್ಷಗಳ ನಡುವೆಯೇ ಸ್ಪರ್ಧೆಯಿಲ್ಲ
ದೆಹಲಿಯಲ್ಲಿ ನಡೆದ ಕಳೆದ ಎರಡು ವಿಧಾನಸಭೆ ಚುನಾವಣೆಗಳ ಕುರಿತು ಮಾತನಾಡಿದ ಅಜಯ್ ಕೋಠಿಯಾಲ್, "ಹಳೆಯ ಪಕ್ಷ ಆಗಿರುವುದರ ಹೊರತಾಗಿಯೂ ಕಾಂಗ್ರೆಸ್ ದೆಹಲಿಯ 70 ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ. ಇನ್ನು ಬಿಜೆಪಿಯು ಕೇವಲ ಆರರಿಂದ ಏಳು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಉತ್ತರಾಖಂಡ್ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಪೈಪೋಟಿಯೊಡ್ಡಿಕೊಳ್ಳುವ ಬದಲು ಆಪ್ ವಿರುದ್ಧ ಸ್ಪರ್ಧೆಗೆ ನಿಲ್ಲುತ್ತಿವೆ. ಇದು ವಾಸ್ತವ ಸ್ಥಿತಿಗೆ ಸೂಚಕವಾಗಿದೆ," ಎಂದು ಕೋಠಿಯಾಲ್ ಹೇಳಿದ್ದಾರೆ.

18 ವರ್ಷ ದಾಟಿದ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ ನೆರವು
ಕಳೆದ ತಿಂಗಳು ಉತ್ತರಾಖಂಡದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹಿಳೆಯರಿಗೆ ಬಂಪರ್ ಘೋಷಣೆಯನ್ನು ಹೊರಡಿಸಿದ್ದರು. ರಾಜ್ಯದಲ್ಲಿ ಆಪ್ ಅಧಿಕಾರಕ್ಕೆ ಬಂದರೆ 18 ವರ್ಷ ದಾಟಿದ ಪ್ರತಿಯೊಬ್ಬರ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದರು. "ಯುವಕ ಮತ್ತು ಯುವತಿಯರು ನಿರುತ್ಸಾಹಿಗಳಾಗಿದ್ದು, ಮೊದಲು ಅವರಲ್ಲಿ ಮನೋಬಲವನ್ನು ತುಂಬಬೇಕು. ತದನಂತರದಲ್ಲಿ ಯುವ ಸಮುದಾಯಕ್ಕೆ ಉಪಯೋಗವಾಗುವ ಯೋಜನೆಗಳನ್ನು ಘೋಷಿಸಬೇಕು," ಎಂದು ಕೋಠಿಯಾಲ್ ಹೇಳಿದ್ದಾರೆ.

ಎಎಪಿ ಹೋರಾಟದ ಹಾದಿಯ ಬಗ್ಗೆ ಉಲ್ಲೇಖ
"ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಸತತ ಎರಡು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ, ಆಡಳಿತದ ಹಲವು ಅಂಶಗಳು ಎಎಪಿ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಉತ್ತರಾಖಂಡದಲ್ಲಿ ಅಧಿಕಾರಕ್ಕೆ ಬಂದರೆ ಪಕ್ಷದ ಕೆಲಸ ಸರಳವಾಗಲಿದೆ," ಎಂದು ಕೋಠಿಯಾಲ್ ಅಭಿಪ್ರಾಯಪಟ್ಟಿದ್ದಾರೆ. 'ಭ್ರಷ್ಟಾಚಾರದ ವಿರುದ್ಧ ಭಾರತ' ಆಂದೋಲನದಲ್ಲಿ ಎಎಪಿಯ ಹೋರಾಟವನ್ನು ಉಲ್ಲೇಖಿಸಿದ ಅವರು, ಇದು ರಾಜಕೀಯ ಪಕ್ಷಕ್ಕಿಂತ ಹೆಚ್ಚು ಎಂದು ಹೇಳಿದರು.












Click it and Unblock the Notifications