ವಾರಾಣಸಿಯಲ್ಲಿ ರಾಹುಲ್ ಅವರ ವಿಮಾನ ಇಳಿಸಲು ಅನುಮತಿ ನಿರಾಕರಣೆ? ಪಿಎಂಗೆ ಆತಂಕವೆಂದಿದ್ದೇಕೆ ಕಾಂಗ್ರೆಸ್? ವರದಿ, ವಿವರ ತಿಳಿಯಿರಿ
ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾಹುಲ್ ಗಾಂಧಿ ಅವರ ವಿಮಾನವನ್ನು ಇಳಿಸಲು ಅನುಮತಿ ನಿರಾಕರಿಸಲಾಗಿದೆ. ಈ ವರದಿ ಓದಿ
ವಾರಣಾಸಿ, ಫೆಬ್ರವರಿ 14: ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾಹುಲ್ ಗಾಂಧಿ ಅವರ ವಿಮಾನವನ್ನು ಇಳಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಒತ್ತಡಕ್ಕೆ ಮಣಿದು ಅನುಮತಿ ನೀಡಲಿಲ್ಲ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೇಟಿ ನೀಡಲಿದ್ದಾರೆ. ನಮ್ಮನ್ನು 'ಕ್ಷಮಿಸಿ' ಎಂದು ಅಧಿಕಾರಿಗಳು ಕೇಳಿಕೊಂಡರು ಎಂಬುದಾಗಿ ಕಾಂಗ್ರೆಸ್ ನಾಯಕ ಅಜಯ್ ರೈ ಹೇಳಿದ್ದಾರೆ. ವಾರಾಣಸಿ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ರಾಹುಲ್ ಗಾಂಧಿ ಅವರ ವಿಮಾನ ಇಳಿಯಬೇಕಿತ್ತು. ಆದರೆ ಉದ್ದೇಶಪೂರ್ವಕವಾಗಿ ಅನುಮತಿ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
'ರಾಹುಲ್ ಗಾಂಧಿ ಇಲ್ಲಿಗೆ ಆಗಮಿಸಿದ ನಂತರ ಪ್ರಯಾಗ್‌ರಾಜ್‌ಗೆ ಹೋಗಬೇಕಿತ್ತು. ಆದರೆ ಸರ್ಕಾರದ ಒತ್ತಡದಿಂದಾಗಿ ವಿಮಾನ ನಿಲ್ದಾಣ ಪ್ರಾಧಿಕಾರವು ಅವರ ವಿಮಾನವನ್ನು ಇಳಿಸಲು ಅವಕಾಶ ನೀಡಲಿಲ್ಲ. ಭಾರೀ ವಿಮಾನ ಸಂಚಾರ ಮತ್ತು ಸಂಚಾರ ದಟ್ಟಣೆ ಇದೆ ಎಂದು ಅವರು ಹೇಳಿದರು. ವಿಮಾನಕ್ಕೆ ಅನುಮತಿ ನೀಡಲಿಲ್ಲ' ರೈ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರವು ರಾಹುಲ್ ಗಾಂಧಿಯ ಬಗ್ಗೆ 'ಹೆದರಿದೆ' ಎಂದು ಕಾಂಗ್ರೆಸ್ ನಾಯಕ ರೈ ಹೇಳಿದ್ದಾರೆ. ಆದ್ದರಿಂದ ಅವರು ವಾರಣಾಸಿಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಲು ಬಿಡಲಿಲ್ಲ ಎಂಬುದಾಗಿಯೂ ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿದ್ದರಿಂದ ದೇಶದ ಪ್ರಧಾನಿ ಆತಂಕದಲ್ಲಿದ್ದಾರೆ. ಈಗ ಅವರು ರಾಹುಲ್‌ಗೆ ತೊಂದರೆ ನೀಡುತ್ತಿದ್ದಾರೆ ಎಂದು ರೈ ಹೇಳಿದ್ದಾರೆ
ಕಾಂಗ್ರೆಸ್ ಸಂಸದರು ಸೋಮವಾರ ರಾತ್ರಿ ವಾರಣಾಸಿಗೆ ಆಗಮಿಸಿದ್ದಾರೆ. ಇಂದು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ.

ಪ್ರಮುಖವಾಗಿ, ರಾಷ್ಟ್ರಪತಿ ಮುರ್ಮು ಸೋಮವಾರ ಸಂಜೆ ವಾರಣಾಸಿಯ ಕೊತ್ವಾಲ್ ಬಾಬಾ ಕಾಲ ಭೈರವ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ರಾಷ್ಟ್ರಪತಿಯವರು ಮೊದಲ ಬಾರಿಗೆ ಕಾಶಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಸಂಜೆ ದಶಾಶ್ವಮೇಧ ಘಾಟ್‌ನಲ್ಲಿ ನಡೆದ ಭವ್ಯ ಗಂಗಾ ಆರತಿಯಲ್ಲಿ ಪಾಲ್ಗೊಂಡರು ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯಿತು. ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಸುಮಾರು 150 ದಿನಗಳ ಕಾಲ 4,080 ಕಿಲೋಮೀಟರ್‌ನಷ್ಟು ದೂರ ಯಾತ್ರೆ ಕ್ರಮಿಸಿತು. ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಉತ್ತೇಜಿಸುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾತ್ರೆಯನ್ನು ಪೂರ್ಣಗೊಳಿಸಿದರು.

ಭಾರತ್ ಜೋಡೋ ಯಾತ್ರೆ ಸಾಗಿದ ರಾಜ್ಯಗಳು
ತಮಿಳುನಾಡು
ಕೇರಳ
ಕರ್ನಾಟಕ
ಆಂಧ್ರಪ್ರದೇಶ
ತೆಲಂಗಾಣ
ಮಹಾರಾಷ್ಟ್ರ
ಮಧ್ಯಪ್ರದೇಶ
ರಾಜಸ್ಥಾನ
ಹರಿಯಾಣ
ದೆಹಲಿ
ಉತ್ತರ ಪ್ರದೇಶ
ಪಂಜಾಬ್
ಹಿಮಾಚಲ
ಜಮ್ಮು ಮತ್ತು ಕಾಶ್ಮೀರ












Click it and Unblock the Notifications