ಬಿಜೆಪಿ ಸೇರಲ್ಲ, ಚುನಾವಣೆಗೆ ನಿಲ್ಲಲ್ಲ : ಬೇಡಿ, ಹೆಗ್ಡೆ
ಬೆಂಗಳೂರು, ಜ.5: ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಹಾಗೂ ಕರ್ನಾಟಕದ ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಬಿಜೆಪಿ ಸೇರಿ ಮುಂದಿನ ಲೋಕಸಭೆ ಚುನಾವಣೆ ಎದುರಿಸಲಿದ್ದಾರೆ ಎಂಬ ಗಾಳಿಸುದ್ದಿ ಟುಸ್ ಆಗಿದೆ. ಬೇಡಿ ಹಾಗೂ ಹೆಗ್ಡೆ ಅವರು ಇದೊಂದು ಊಹಾಪೋಹ ಸುದ್ದಿ ನಾವು ಚುನಾವಣೆಗೆ ನಿಲ್ಲುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಪ್ರಮುಖ ನಾಯಕರಾದ ಕಿರಣ್ ಬೇಡಿ ಹಾಗೂ ಸಂತೋಷ್ ಹೆಗ್ಡೆ ಅವರು ಬಿಜೆಪಿ ಸೇರುವ ಬಗ್ಗೆ ಗಾಳಿಸುದ್ದಿ ಹಬ್ಬಿತ್ತು. ಜನವರಿ 14ರಂದು ಇಬ್ಬರು ಬಿಜೆಪಿ ಸೇರುತ್ತಾರೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಹೆಗ್ಡೆ ಅವರು ಸ್ಪಷ್ಟನೆ ನೀಡಿದ್ದು, ಯಾವುದೇ ರಾಜಕೀಯ ಪಕ್ಷವನ್ನು ಸೇರುತ್ತಿಲ್ಲ, ಚುನಾವಣೆಗೂ ನಿಲ್ಲುತ್ತಿಲ್ಲ ಎಂದಿದ್ದಾರೆ.

ರೀಡಿಫ್.ಕಾಂ ಜತೆ ಮಾತಾನಾಡುತ್ತಾ ಹೆಗ್ಡೆ ಅವರು, ' ನಾನು ಇದುವರೆವಿಗೂ ಕೇಳಿದ ಅತ್ಯಂತ ಕೆಟ್ಟ ಗಾಳಿಸುದ್ದಿ ಎಂದರೆ ಇದೆ ಎನ್ನಬಹುದು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭ್ರಷ್ಟಾಚಾರದ ಆರೋಪ ಹೊರೆಸಿ ಕೆಳಗಿಳಿಸಲು ಕಾರಣವಾದ ಲೋಕಾಯುಕ್ತ ವರದಿ ನೀಡಿದ ನಾನು ಈಗ ಬಿಜೆಪಿ ಸೇರಿರುವ ಯಡಿಯೂರಪ್ಪ ಜತೆ ಸಮನಾಗಿ ನಿಲ್ಲುತ್ತೇನೆ ಎನ್ನುವುದು ಹಾಸ್ಯಾಸ್ಪದ ಸಂಗತಿ ಎಂದಿದ್ದಾರೆ.
ಕಿರಣ್ ಬೇಡಿ ಅವರ ನಿಲುವಿನ ಬಗ್ಗೆ ಸ್ಪಷ್ಟವಾಗಿ ಹೇಳಲಾರೆ ಆದರೆ 101 % ಆಕೆ ಕೂಡಾ ರಾಜಕೀಯದಿಂದ ದೂರ ಉಳಿಯುತ್ತಾರೆ. ನಾನಂತೂ ರಾಜಕೀಯ ಪಕ್ಷಗಳಿಂದ ದೂರ ಇರುತ್ತೇನೆ. ಅಣ್ಣಾ ಹಜಾರೆ ಚಳವಳಿಯಲ್ಲಿ ಸಕ್ರಿಯನಾಗಿದ್ದು ಈಗ ಹಿಂದೆ ಸರಿಯಲು ರಾಜಕೀಯವೇ ಕಾರಣ. ಅಣ್ಣಾ ಹಜಾರೆ ಸಂಗಡಿಗರು ಕೆಲವರು ರಾಜಕೀಯ ಸೇರಿದ್ದೇ ಕಾರಣ ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ.












Click it and Unblock the Notifications