ರಕ್ತಪಾತವಾಗುತ್ತದೆ ಎಂದು ಹೇಳಿದ್ದ ಮಮತಾ ಬ್ಯಾನರ್ಜಿ ವಿರುದ್ಧ ದೂರು
ನವದೆಹಲಿ, ಆಗಸ್ಟ್ 01 : ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ರ್‌ಸಿ) ವಿರುದ್ಧ ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಾಗಿದೆ. ಎನ್‌ಆರ್‌ಸಿ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ.
'ಎನ್‌ಆರ್‌ಸಿ ಯಿಂದಾಗಿ ನಾಗರಿಕ ಯುದ್ಧ, ರಕ್ತಪಾತವಾಗುತ್ತದೆ' ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಅಸ್ಸಾಂನ ಬಿಜೆಪಿ ಯುವ ಘಟಕ ನಾಹಾರ್‌ಕಟಿಯಾ ಪೊಲೀಸ್ ಠಾಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ನೀಡಿದೆ. ಎಫ್‌ಐಆರ್ ಇನ್ನೂ ದಾಖಲಾಗಿಲ್ಲ.
ಎನ್‌ಆರ್‌ಸಿ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದ ಮಮತಾ ಬ್ಯಾನರ್ಜಿ ಅವರು, 'ತಾಯ್ನಾಡಿನಲ್ಲಿಯೇ ನಿರಾಶ್ರಿತರಾಗುವ ದುಃಸ್ಥಿತಿ ಜನರಿಗೆ ಬಂದಿರುವುದು ವಿಪರ್ಯಾಸ, ಕೇಂದ್ರ ಸರ್ಕಾರದ ರಾಷ್ಟ್ರೀಯ ಪೌರತ್ವ ನೋಂದಣಿ ಹಿಂದೆ ಷಡ್ಯಂತ್ರ ಅಡಗಿದೆ' ಎಂದು ಆರೋಪಿಸಿದ್ದರು.

'ಕೇಂದ್ರ ಸರ್ಕಾರ ಎನ್‌ಆರ್‌ಸಿ ಅನ್ನು ಅಸ್ತ್ರದಂತೆ ಬಳಸಿಕೊಂಡು ಬಂಗಾಳಿ ಭಾಷಿಕರು, ಬಿಹಾರಿಗಳನ್ನು ಅಸ್ಸಾಂನಿಂದ ಹೊರದಬ್ಬಲು ಷಡ್ಯಂತ್ರ ರೂಪಿಸಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಪಶ್ಚಿಮ ಬಂಗಾಳದ ಮೇಲೆ ನೇರಪರಿಣಾಮ ಬೀರಲಿದೆ' ಎಂದು ಹೇಳಿದ್ದರು.
'ಅಸ್ಸಾಂನಲ್ಲಿಯ ವಾಸ್ತವ ಸ್ಥಿತಿಯ ಅಧ್ಯಯನಕ್ಕೆ ತೃಣಮೂಲ ಕಾಂಗ್ರೆಸ್‌ನ ಸಂಸದರ ತಂಡವನ್ನು ಕಳಿಸಲಾಗುತ್ತದೆ. ಅನೇಕರು 50, 100 ವರ್ಷಗಳಿಂದ ಅಲ್ಲಿ ನೆಲೆಸಿದ್ದಾರೆ ಅವರನ್ನು ಸಹ ಪಟ್ಟಿಯಿಂದ ಕೈಬಿಡಲಾಗಿದೆ. ತಾವೂ ಕೂಡ ಅಸ್ಸಾಂಗೆ ಭೇಟಿ ನೀಡುವುದಾಗಿ' ಮಮತಾ ಬ್ಯಾನರ್ಜಿ ತಿಳಿಸಿದ್ದರು.
ಕೇಂದ್ರ ಸರ್ಕಾರದ ಸ್ಪಷ್ಟನೆ : ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕರಡು ಪಟ್ಟಿಯಲ್ಲಿ ಹೆಸರು ಇಲ್ಲದವರನ್ನು ವಿದೇಶಿಯರು ಎಂದು ಘೋಷಣೆ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿದೆ.












Click it and Unblock the Notifications