Coconut: ತೆಂಗಿನಕಾಯಿ ಸಮುದ್ರದಲ್ಲಿ ಸಾವಿರಾರು ಮೈಲಿ ದೂರ ಸಾಗೋದು ಹೇಗೆ? ಪ್ರಕೃತಿಯ ಅದ್ಭುತ ರಹಸ್ಯ ಇಲ್ಲಿದೆ!

ತೆಂಗಿನ ಮರದಿಂದ ಒಂದು ತೆಂಗಿನಕಾಯಿ ಕೆಳಗೆ ಬೀಳುತ್ತದೆ. ಅದು ಸಮುದ್ರದ ಅಲೆಗೆ ಸಿಕ್ಕಿಬಿದ್ದರೆ ಏನಾಗಬಹುದು? ಸಾಮಾನ್ಯವಾಗಿ ನಾವು ಅದು ಕೊಚ್ಚಿಹೋಗುತ್ತದೆ ಎಂದಷ್ಟೇ ಅಂದುಕೊಳ್ಳುತ್ತೇವೆ. ಆದರೆ ಆ ತೆಂಗಿನಕಾಯಿ ಕೆಲವೊಮ್ಮೆ ದಿನಗಳಲ್ಲ, ವಾರಗಳ ಕಾಲ ಸಮುದ್ರದಲ್ಲಿ ತೇಲುತ್ತಾ ಸಾವಿರಾರು ಕಿಲೋಮೀಟರ್ ದೂರದವರೆಗೆ ಪ್ರಯಾಣಿಸಬಹುದು! ಕೆಲವೊಮ್ಮೆ 4800 ಕಿಲೋಮೀಟರ್‌ ದೂರ ಕೂಡ ತೆಂಗಿನಕಾಯಿ ಪ್ರಯಾಣಿಸಿದ ದಾಖಲೆಗಳಿವೆ.

ಅಷ್ಟೇ ಅಲ್ಲ, ಇಷ್ಟು ದೂರದ ಸಮುದ್ರಯಾನದ ನಂತರವೂ ಅದರೊಳಗಿನ ಜೀವಸೆಲೆ ಜೀವಂತವಾಗಿರಬಹುದು. ಸೂಕ್ತವಾದ ನೆಲ ಸಿಕ್ಕರೆ ಅಲ್ಲಿಯೇ ಮೊಳಕೆಯೊಡೆದು ಹೊಸ ತೆಂಗಿನ ಮರವಾಗಿ ಬೆಳೆಯುವ ಸಾಮರ್ಥ್ಯವೂ ಅದಕ್ಕಿದೆ. ಇದು ಪ್ರಕೃತಿಯ ಅತ್ಯಂತ ಕುತೂಹಲಕಾರಿ ವಿನ್ಯಾಸಗಳಲ್ಲಿ ಒಂದು.

Coconut

ಪ್ರಕೃತಿಯೇ ಮಾಡಿದ ಪುಟ್ಟ ದೋಣಿ!

ತೆಂಗಿನಕಾಯಿಯ ಹೊರಭಾಗದಲ್ಲಿರುವ ದಪ್ಪನಾದ ನಾರಿನ ಪದರವನ್ನು ನಾವು ಸಾಮಾನ್ಯವಾಗಿ ತೆಗೆದುಹಾಕುತ್ತೇವೆ. ಆದರೆ ಪ್ರಕೃತಿಯಲ್ಲಿ ಈ ನಾರಿನ ಹೊದಿಕೆಗೆ ಬಹಳ ದೊಡ್ಡ ಕೆಲಸವಿದೆ. ಈ ದಪ್ಪನಾದ ನಾರು, ಅದರೊಳಗಿನ ಗಟ್ಟಿಯಾದ ಚಿಪ್ಪು ಮತ್ತು ಒಳಭಾಗದಲ್ಲಿರುವ ಖಾಲಿ ಜಾಗ ಸೇರಿ ತೆಂಗಿನಕಾಯಿಗೆ ನೀರಿನ ಮೇಲೆ ತೇಲುವ ಸಾಮರ್ಥ್ಯ ನೀಡುತ್ತವೆ.

ಸರಳವಾಗಿ ಹೇಳುವುದಾದರೆ, ತೆಂಗಿನ ಬೀಜವನ್ನು ಪ್ರಕೃತಿಯೇ ಒಂದು ಸುರಕ್ಷಿತ ದೋಣಿಯೊಳಗೆ ಇರಿಸಿದೆ! ಸಮುದ್ರದ ಅಲೆಗಳು ಅದನ್ನು ತಳ್ಳುತ್ತವೆ. ಸಮುದ್ರದ ಪ್ರವಾಹಗಳು ಅದನ್ನು ದೂರದೂರಕ್ಕೆ ಕೊಂಡೊಯ್ಯುತ್ತವೆ. ಆದರೆ ತೆಂಗಿನಕಾಯಿ ಸುಲಭವಾಗಿ ಸಮುದ್ರದ ತಳಕ್ಕೆ ಮುಳುಗುವುದಿಲ್ಲ.

ಉಪ್ಪುನೀರಿನ ಮಧ್ಯೆಯೂ ಬೀಜ ಹೇಗೆ ಬದುಕುತ್ತದೆ?

ಸಮುದ್ರದಲ್ಲಿ ತೇಲುವುದು ಒಂದು ಸವಾಲಾದರೆ, ಉಪ್ಪುನೀರಿನಿಂದ ಬೀಜವನ್ನು ರಕ್ಷಿಸುವುದು ಇನ್ನೂ ದೊಡ್ಡ ಸವಾಲು. ತೆಂಗಿನಕಾಯಿಯ ದಪ್ಪ ನಾರಿನ ಹೊದಿಕೆ ಮತ್ತು ಗಟ್ಟಿಯಾದ ಒಳಚಿಪ್ಪು ಅದರೊಳಗಿನ ಭ್ರೂಣವನ್ನು ಹೊರಗಿನ ಪರಿಸರದಿಂದ ರಕ್ಷಿಸಲು ನೆರವಾಗುತ್ತದೆ.

ಬೀಜ ಸಮುದ್ರದಲ್ಲಿಯೇ ಮೊಳಕೆಯೊಡೆಯಲು ಆರಂಭಿಸಿದರೆ ಅದರ ಬದುಕು ಬಹಳ ಕಷ್ಟ. ಏಕೆಂದರೆ ಉಪ್ಪುನೀರಿನ ನಡುವೆ ಚಿಗುರು ಬೆಳೆಯಲು ಸಾಧ್ಯವಿಲ್ಲ. ಆದ್ರೆ ಹೀಗಾಗದಂತೆ ಕಾಪಾಡೋದು ತೆಂಗಿನಕಾಯಿಯ ಮತ್ತೊಂದು ವಿಶೇಷ ಗುಣ. ಅದು ತಕ್ಷಣವೇ ಮೊಳಕೆಯೊಡೆಯದೆ ಬಹಳ ಕಾಲ ಕಾಯುವ ಸಾಮರ್ಥ್ಯ. ಈ ವಿಳಂಬಿತ ಮೊಳಕೆಯೊಡೆಯುವ ಗುಣವೇ ಅದರ ಸಮುದ್ರಯಾನಕ್ಕೆ ದೊಡ್ಡ ಸಹಾಯ ಮಾಡುತ್ತದೆ. ಮನೆಯ ಅಟ್ಟದಲ್ಲಿ ಹಲವು ಕಾಲ ಕಟ್ಟಿದ್ದ ತೆಂಗಿನಕಾಯಿಯನ್ನು ನೆಟ್ಟರೂ ಅದು ಮೊಳಕೆಯೊಡೆಯುವುದನ್ನು ನೀವು ನೋಡಿರಬಹುದು.

ತನ್ನೊಂದಿಗೆ ಆಹಾರ

ತೆಂಗಿನಕಾಯಿ ಬರೀ ಬೀಜವನ್ನು ಮಾತ್ರ ಹೊತ್ತುಕೊಂಡು ಹೋಗುವುದಿಲ್ಲ. ಹೊಸ ಸಸ್ಯದ ಆರಂಭಿಕ ಬೆಳವಣಿಗೆಗೆ ಬೇಕಾಗುವ ಆಹಾರವನ್ನೂ ತನ್ನೊಳಗೆ ಸಂಗ್ರಹಿಸಿಕೊಂಡಿರುತ್ತದೆ. ನಾವು ತಿನ್ನುವ ತೆಂಗಿನ ತಿರುಳು ವಾಸ್ತವವಾಗಿ ಬೀಜದ ಆಹಾರ ಸಂಗ್ರಹದ ಭಾಗವಾಗಿದೆ.

ಕಡಲತೀರಕ್ಕೆ ತಲುಪಿದ ನಂತರ ಮೊಳಕೆಯೊಡೆಯುವ ಹಂತದಲ್ಲಿ ಈ ಆಹಾರ ಸಂಗ್ರಹವೇ ಹೊಸ ಚಿಗುರಿಗೆ ಶಕ್ತಿ ನೀಡುತ್ತದೆ. ಹೊಸ ಬೇರುಗಳು ಬೆಳೆಯುವವರೆಗೆ ಮತ್ತು ಸಸ್ಯ ತನ್ನ ಆಹಾರವನ್ನು ತಾನೇ ಉತ್ಪಾದಿಸುವವರೆಗೆ ತೆಂಗಿನಕಾಯಿಯ ಒಳಗಿನ ಈ ಸಂಗ್ರಹ ದೊಡ್ಡ ಆಸರೆಯಾಗುತ್ತದೆ. ಅಂದರೆ, ಇದು ಪ್ರಯಾಣಿಕನೊಬ್ಬ ತನ್ನ ಪ್ರಯಾಣಕ್ಕೆ ಬೇಕಾದ ಆಹಾರವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಹೊರಟಂತಿರುತ್ತದೆ.

110 ದಿನಗಳ ಕಾಲ ಸಮುದ್ರದಲ್ಲಿ ತೇಲಬಹುದೇ?

ಕೆಲವು ಅಧ್ಯಯನಗಳ ಪ್ರಕಾರ, ಸೂಕ್ತ ಪರಿಸ್ಥಿತಿಯಲ್ಲಿ ತೆಂಗಿನಕಾಯಿ ಸುಮಾರು 110 ದಿನಗಳವರೆಗೆ ಸಮುದ್ರದಲ್ಲಿ ತೇಲುತ್ತಾ ಮೊಳಕೆಯೊಡೆಯುವ ಸಾಮರ್ಥ್ಯವನ್ನು ಉಳಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಅನುಕೂಲಕರ ಸಮುದ್ರದ ಪ್ರವಾಹ ದೊರೆತರೆ ಈ ಅವಧಿಯಲ್ಲಿ ಸುಮಾರು 4,800 ಕಿಲೋಮೀಟರ್ ದೂರದವರೆಗೆ ಸಾಗುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಲಾಗಿದೆ.

ಆದರೆ ಇಲ್ಲಿ ಒಂದು ಮುಖ್ಯ ವಿಚಾರವಿದೆ. ಪ್ರತಿ ತೆಂಗಿನಕಾಯಿಯೂ 4,800 ಕಿಲೋಮೀಟರ್ ಪ್ರಯಾಣಿಸಿ ಹೊಸ ಮರವಾಗುತ್ತದೆ ಎಂದು ಅರ್ಥವಲ್ಲ. ಸಮುದ್ರದ ಅಲೆಗಳು, ಪ್ರವಾಹ, ನೀರಿನ ಉಷ್ಣಾಂಶ, ತೆಂಗಿನಕಾಯಿಯ ಸ್ಥಿತಿ ಮತ್ತು ಅದು ತಲುಪುವ ಸ್ಥಳ ಸೇರಿದಂತೆ ಹಲವು ಅಂಶಗಳು ಇದರ ಮೇಲೆ ಪರಿಣಾಮ ಬೀರುತ್ತವೆ.

ಹೀಗಾಗಿ 4,800 ಕಿಲೋಮೀಟರ್ ಎನ್ನುವುದು ಎಲ್ಲ ತೆಂಗಿನಕಾಯಿಗಳಿಗೂ ಅನ್ವಯವಾಗುವುದಿಲ್ಲ. ಆದರೂ ಸಮುದ್ರದ ಮೂಲಕ ದೂರದ ಪ್ರದೇಶಗಳಿಗೆ ಹರಡುವ ಸಾಮರ್ಥ್ಯ ತೆಂಗಿನಕಾಯಿಗಿದೆ ಎಂಬುದು ಬಹಳ ಕುತೂಹಲಕಾರಿ ಸಂಗತಿ.

ಸರಿಯಾದ ತೀರವೂ ಸಿಗಬೇಕು!

ಸಾವಿರಾರು ಕಿಲೋಮೀಟರ್ ತೇಲಿದರೂ ತೆಂಗಿನಕಾಯಿಯ ಕೆಲಸ ಅಲ್ಲಿಗೆ ಮುಗಿಯುವುದಿಲ್ಲ. ಅದು ಬೆಳೆಯಲು ಸೂಕ್ತವಾದ ಸ್ಥಳಕ್ಕೆ ತಲುಪಬೇಕು. ಸಾಮಾನ್ಯವಾಗಿ ಉಷ್ಣವಲಯದ ಕಡಲತೀರಗಳು ತೆಂಗಿನ ಮರದ ಬೆಳವಣಿಗೆಗೆ ಅನುಕೂಲಕರವಾಗಿವೆ. ಅಲೆಗಳೊಂದಿಗೆ ತೀರಕ್ಕೆ ಬಂದ ತೆಂಗಿನಕಾಯಿ ಮತ್ತೆ ತಕ್ಷಣ ಸಮುದ್ರಕ್ಕೆ ಕೊಚ್ಚಿಹೋಗದೆ ಮರಳಿನ ಮೇಲೆ ಉಳಿಯಬೇಕು.

ತಾಜಾ ನೀರು, ಸೂಕ್ತ ತೇವಾಂಶ ಮತ್ತು ಬೆಳೆಯಲು ಅನುಕೂಲಕರ ಪರಿಸರ ದೊರೆತಾಗ ಮೊಳಕೆಯೊಡೆಯುವ ಪ್ರಕ್ರಿಯೆ ಆರಂಭವಾಗಬಹುದು. ತೆಂಗಿನಕಾಯಿಯ ಆಕಾರ ಮತ್ತು ದಪ್ಪ ನಾರಿನ ಪದರವೂ ಅದು ಕಡಲತೀರದಲ್ಲಿ ಸ್ಥಿರವಾಗಿರಲು ಕೆಲವು ಮಟ್ಟಿಗೆ ನೆರವಾಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ.

ದ್ವೀಪಗಳಿಗೆ ತೆಂಗಿನ ಮರ ಹೇಗೆ ತಲುಪಿತು?

ಉಷ್ಣವಲಯದ ಕಡಲತೀರ ಎಂದರೆ ತೆಂಗಿನ ಮರಗಳನ್ನು ನೆನಪಿಸಿಕೊಳ್ಳುತ್ತೇವೆ. ಆದರೆ ಸಾವಿರಾರು ವರ್ಷಗಳ ಹಿಂದೆ ದೂರದ ದ್ವೀಪಗಳಿಗೆ ತೆಂಗಿನ ಮರದ ಬೀಜಗಳು ಹೇಗೆ ತಲುಪಿದವು?

ಮಾನವರು ಹಡಗಿನಲ್ಲಿ ತೆಂಗಿನಕಾಯಿಗಳನ್ನು ಕೊಂಡೊಯ್ದ ನಂತರ ಅವು ಇನ್ನಷ್ಟು ಪ್ರದೇಶಗಳಿಗೆ ಹರಡಿದವು ಎಂಬುದು ಸತ್ಯ. ಆದರೆ ಮಾನವರ ನೆರವಿಲ್ಲದೆ ಪ್ರಕೃತಿಯೇ ಕೆಲವು ತೆಂಗಿನಕಾಯಿಗಳನ್ನು ಸಮುದ್ರದ ಮೂಲಕ ದೂರದ ದ್ವೀಪಗಳು ಮತ್ತು ಕರಾವಳಿ ಪ್ರದೇಶಗಳಿಗೆ ತಲುಪಿಸಿರುವ ಸಾಧ್ಯತೆಯೂ ಇದೆ.

ತೇಲುವ ಸಾಮರ್ಥ್ಯ, ಗಟ್ಟಿಯಾದ ರಕ್ಷಣಾ ಪದರ, ಉಪ್ಪುನೀರಿನಿಂದ ಬೀಜವನ್ನು ಕಾಪಾಡುವ ವಿನ್ಯಾಸ, ಆಹಾರ ಸಂಗ್ರಹ ಮತ್ತು ಸೂಕ್ತ ಸಮಯದವರೆಗೆ ಮೊಳಕೆಯೊಡೆಯದೆ ಕಾಯುವ ಗುಣಗಳು ಇದಕ್ಕೆ ಸಹಾಯ ಮಾಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+