ದೆಹಲಿ ಕೋಚಿಂಗ್ ಸೆಂಟರ್ ಸಾವು ಪ್ರಕರಣ: ಸರ್ಕಾರದಿಂದ ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ
ನವದೆಹಲಿ, ಜುಲೈ. 30: ಶನಿವಾರ ನಡೆದ ರಾವ್ ಅವರ ಐಎಎಸ್ ಸ್ಟಡಿ ಸರ್ಕಲ್ ಘಟನೆಯಲ್ಲಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳು ಸಾವಿಗೀಡಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಮಂಗಳವಾರ ದೆಹಲಿ ಸರ್ಕಾರ, ನಗರ ಪೊಲೀಸ್ ಮುಖ್ಯಸ್ಥರು ಮತ್ತು ಮುನ್ಸಿಪಲ್ ಕಮಿಷನರ್‌ಗೆ ನೋಟಿಸ್ ಜಾರಿ ಮಾಡಿದೆ.
ರಾವ್ ಕೋಚಿಂಗ್ ಸೆಂಟರ್‌ನ ಬೇಸ್‌ಮೆಂಟ್‌ನಲ್ಲಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳು ಸಾವನ್ನಪ್ಪಿದ್ದರು. ದೆಹಲಿಯಲ್ಲಿ ಸುರಿದ ಭಾರಿ ಮಳೆಯ ಕಾರಣ ಪ್ರವಾಹ ಉಂಟಾಗಿ ಮಳೆ ನೀರು ನೆಲಮಾಳಿಗೆಯನ್ನು ತುಂಭಿತ್ತು. ಪಾರ್ಕಿಂಗ್‌ಗೆ ಎಂದು ಕೊಟ್ಟಿದ್ದ ಜಾಗದಲ್ಲಿ ಗ್ರಂಥಾಲಯಗಳು ಇದ್ದ ಕಾರಣ ವಿದ್ಯಾರ್ಥಿಗಳು ಅಲ್ಲಿದ್ದರು ಎನ್ನಲಾಗಿದೆ. ಈಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಎಚ್‌ಆರ್‌ಸಿ ನೋಟಿಸ್ ಜಾರಿ ಮಾಡಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಎರಡು ವಾರಗಳಲ್ಲಿ ಅವರಿಂದ ವಿವರವಾದ ವರದಿಯನ್ನು ಕೇಳಿದೆ ಎಂದು ಹೇಳಿಕೆಯೊಂದು ತಿಳಿಸಿದೆ. ದೆಹಲಿಯಾದ್ಯಂತ ನಿಗದಿತ ಮಾನದಂಡಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ಇಂತಹ ಸಂಸ್ಥೆಗಳು ಮತ್ತು ಕೋಚಿಂಗ್ ಸೆಂಟರ್‌ಗಳ ನಿಖರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಸಮೀಕ್ಷೆಯನ್ನು ಮಾಡುವಂತೆ ದೆಹಲಿ ಮುಖ್ಯ ಕಾರ್ಯದರ್ಶಿಯನ್ನು ಕೇಳಲಾಗಿದೆ.
ಇಂತಹ ಸಂಸ್ಥೆಗಳ ವಿರುದ್ಧ ಬಾಕಿ ಉಳಿದಿರುವ ದೂರುಗಳು ಮತ್ತು ಸಂಬಂಧಪಟ್ಟ ಇಲಾಖೆ ಕೈಗೊಂಡ ಕ್ರಮಗಳು ಸೇರಿದಂತೆ ಪ್ರತಿಯೊಂದು ವಿವರಗಳನ್ನು ವರದಿಯಲ್ಲಿ ನಮೂದಿಸಬೇಕು ಎಂದು ಎನ್‌ಎಚ್‌ಆರ್‌ಸಿ ಹೊರಡಿಸಿದ ಹೇಳಿಕೆ ತಿಳಿಸಿದೆ. ಜುಲೈ 27 ರಂದು ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ದುರ್ಘಟನೆ ನಡೆದಿತ್ತು.

ಎನ್‌ಎಚ್‌ಆರ್‌ಸಿಯು "ಜುಲೈ 27 ರಂದು ದೆಹಲಿಯ ಪ್ರಮುಖ ನಾಗರಿಕ ಸೇವೆಗಳ ಕೋಚಿಂಗ್ ಸೆಂಟರ್‌ನ ಪ್ರವಾಹಕ್ಕೆ ಸಿಲುಕಿದ ನೆಲಮಾಳಿಗೆಯ ಲೈಬ್ರರಿಯಲ್ಲಿ ಮೂವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಲಾಗಿದೆ" ಎಂದು ಹೇಳಿದರ.
ನೆಲ ಮಾಳಿಗೆಯಲ್ಲಿ ನೀರು ಹರಿಯುವ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸುದ್ದಿ ವರದಿಗಳು ಸೂಚಿಸಿವೆ. ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಮಾನವ ಹಕ್ಕುಗಳ ಆಯೋಗ, ಸುದ್ದಿ ವರದಿಯ ವಿಷಯಗಳು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸೂಚಿಸುತ್ತವೆ ಎಂದು ತಿಳಿಸಿದೆ.
ಇದರ ಜೊತೆಗೆ ದೆಹಲಿಯ ಪಟೇಲ್ ನಗರ ಪ್ರದೇಶದಲ್ಲಿ ಇನ್ನೊಬ್ಬ ನಾಗರಿಕ ಸೇವಾ ಆಕಾಂಕ್ಷಿ ಸಾವಿನ ಬಗ್ಗೆಯೂ ಆಯೋಗವು ಗಮನಹರಿಸಿದೆ. ಕೆಲವು ದಿನಗಳ ಹಿಂದೆ, ಅಧಿಕಾರಿಗಳ ನಿರ್ಲಕ್ಷ್ಯದ ಮತ್ತೊಂದು ಘಟನೆಯಲ್ಲಿ, ಮತ್ತೊಬ್ಬ ಐಎಎಸ್ ಆಕಾಂಕ್ಷಿ ನೀರು ತುಂಭಿದ್ದ ರಸ್ತೆಯನ್ನು ದಾಟುವಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.











Click it and Unblock the Notifications