CNG Price: ಸಿಎನ್‌ಜಿ ದರ ದಿಢೀರ್ ಏರಿಕೆ, ಎಲ್ಲೆಲ್ಲಿ ಹಾಗೂ ಯಾರಿಗೆಲ್ಲಾ ಹೊರೆ?
CNG Price Hike: ಈಗಾಗಲೇ ದಿನಬಳಕೆ ವಸ್ತುಗಳ ದರ ಏರಿಕೆಯಿಂದ ಸಾಮಾನ್ಯ ಜನರು ಬೇತ್ತಿದ್ದಾರೆ. ಈ ನಡುವೆಯೇ ಇದೀಗ ಸಿಎನ್‌ಜಿ ಬೆಲೆ ಹೆಚ್ಚಳ ಆಗಿದ್ದು, ಇದರಿಂದ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೆಹಲಿ ಮತ್ತು ಎನ್‌ಸಿಆರ್ (ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್) ಪ್ರದೇಶಗಳಲ್ಲಿ ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಪ್ರಮುಖ ಇಂಧನ ಪೂರೈಕೆ ಸಂಸ್ಥೆಯಾದ 'ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್' (ಐಜಿಎಲ್) ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಬೆಲೆಯನ್ನು ಹೆಚ್ಚಳ ಮಾಡಿದೆ. ಆಗಸ್ಟ್ 29ರ ಶನಿವಾರ ಬೆಳಗ್ಗೆ 6 ಗಂಟೆಯಿಂದಲೇ ಜಾರಿಗೆ ಬರುವಂತೆ ಪ್ರತಿ ಕೆ.ಜಿ. ಸಿಎನ್‌ಜಿ ಬೆಲೆಯಲ್ಲಿ 3.89 ರೂಪಾಯಿ ಏರಿಕೆ ಮಾಡಲಾಗಿದೆ.

ಎಲ್ಲೆಲ್ಲಿ ದರ ಹೆಚ್ಚಳ?
ಈ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಸಿಎನ್‌ಜಿ ದರ ಪ್ರತಿ ಕೆ.ಜಿ.ಗೆ 86.98 ರೂಪಾಯಿಗೆ ತಲುಪಿದೆ. ಈ ಮೊದಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆ.ಜಿ. ಸಿಎನ್‌ಜಿ ಬೆಲೆ 83.09 ರೂಪಾಯಿ ಇತ್ತು. ದೆಹಲಿ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ಗಳಲ್ಲೂ ಈ ಹೊಸ ದರ ತಕ್ಷಣದಿಂದಲೇ ಜಾರಿಗೆ ಬಂದಿದೆ. ಇದರಿಂದ ಸಿಎನ್‌ಜಿ ಆಧಾರಿತ ಆಟೋ, ಟ್ಯಾಕ್ಸಿ, ಕ್ಯಾಬ್ ಹಾಗೂ ಖಾಸಗಿ ಕಾರುಗಳ ದಿನನಿತ್ಯದ ಸಂಚಾರ ವೆಚ್ಚ ಹೆಚ್ಚಾಗಲಿದ್ದು, ಚಾಲಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಯಾವ ತಿಳಗಳಿನಲ್ಲಿ ಎಷ್ಟು ಏರಿಕೆ?
ದೆಹಲಿ-ಎನ್‌ಸಿಆರ್ ಭಾಗಗಳಲ್ಲಿ ಸಿಎನ್‌ಜಿ ಬೆಲೆ ಏರಿಕೆ ಆಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಮೇ ತಿಂಗಳ ಆರಂಭದಲ್ಲೂ ಕೇವಲ 11 ದಿನಗಳ ಅಂತರದಲ್ಲಿ ಪ್ರತಿ ಕೆ.ಜಿ.ಗೆ ಒಟ್ಟು 6 ರೂಪಾಯಿಯವರೆಗೆ ದರ ಹೆಚ್ಚಿಸಲಾಗಿತ್ತು. ಮೇ 26 ರಂದು 2 ರೂಪಾಯಿ ಹೆಚ್ಚಿಸಿದಾಗ ದೆಹಲಿಯಲ್ಲಿ ಬೆಲೆ 81.09 ರೂಪಾಯಿಯಿಂದ 83.09 ರೂಪಾಯಿಗೆ ಏರಿಕೆಯಾಗಿತ್ತು. ಅದೇ ಅವಧಿಯಲ್ಲಿ ನೋಯ್ಡಾ, ಗ್ರೇಟರ್ ನೋಯ್ಡಾ ಹಾಗೂ ಗಾಜಿಯಾಬಾದ್‌ನಲ್ಲಿಯೂ ಪ್ರತಿ ಕೆ.ಜಿ. ದರ 88.70 ರೂಪಾಯಿಗೆ ತಲುಪಿತ್ತು.
ದರ ಏರಿಕೆಗೆ ಐಜಿಎಲ್ ನೀಡಿದ ಕಾರಣ ಏನು?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಎನ್‌ಜಿ ಬೆಲೆಗಳು ತೀವ್ರವಾಗಿ ಏರಿಕೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಸಾರ್ವಜನಿಕ ವಲಯದ ಐಜಿಎಲ್ ಸ್ಪಷ್ಟಪಡಿಸಿದೆ. ಅನಿಲದ ಸಂಗ್ರಹಣೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಗ್ರಾಹಕರಿಗೆ ನಿರಂತರ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಸಿಎನ್‌ಜಿ ಪೂರೈಕೆಯನ್ನು ಕಾಯ್ದುಕೊಳ್ಳಲು ಈ ವೆಚ್ಚದ ಹೊರೆಯನ್ನು ಭಾಗಶಃ ಸರಿದೂಗಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಪ್ರತಿ ಕೆ.ಜಿ.ಗೆ 3.89 ರೂಪಾಯಿ ಹೆಚ್ಚಳ ಮಾಡಬೇಕಾಯಿತು ಎಂದು ಕಂಪನಿ ತಿಳಿಸಿದೆ.
ಇಷ್ಟೆಲ್ಲಾ ದರ ಏರಿಕೆಯ ಹೊರತಾಗಿಯೂ ದೆಹಲಿಯಲ್ಲಿ ಲಭ್ಯವಿರುವ ಇತರ ಇಂಧನಗಳಿಗೆ ಹೋಲಿಸಿದರೆ ಸಿಎನ್‌ಜಿ ಚಿಲ್ಲರೆ ಬೆಲೆ ಇಂದಿಗೂ ಗ್ರಾಹಕರಿಗೆ ಸಾಕಷ್ಟು ಕೈಗೆಟುಕುವ ಮತ್ತು ಉಳಿತಾಯದ ಆಯ್ಕೆಯಾಗಿದೆ. ಎಲ್‌ಎನ್‌ಜಿ ಬೆಲೆಗಳಲ್ಲಿನ ಏರಿಳಿತಗಳ ಪರಿಣಾಮ ದೇಶೀಯ ಸಿಎನ್‌ಜಿ ಗ್ರಾಹಕರನ್ನು ಆದಷ್ಟು ಸುರಕ್ಷಿತವಾಗಿಡಲು ಪ್ರಯತ್ನಿಸಲಾಗಿದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.


Click it and Unblock the Notifications
