ಬಿಎಸ್‌ವೈ ರೀತಿಯಲ್ಲಿಯೇ ಶಿವರಾಜ್ ಸಿಂಗ್ ಚೌಹಾಣ್‌ರನ್ನು ಸೈಡ್‌ಲೈನ್ ಮಾಡಲಿದೆಯೇ ಬಿಜೆಪಿ? ಮಧ್ಯಪ್ರದೇಶದಲ್ಲಿ ಹೆಚ್ಚಿದ ಕುತೂಹಲ
ನವದೆಹಲಿ, ಸೆಪ್ಟೆಂಬರ್ 26: ಇದೇ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈಗಾಗಲೇ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿಯೂ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಹೆಸರು ಕಾಣಿಸಿಕೊಂಡಿಲ್ಲ. ಇದು ಮಧ್ಯಪ್ರದೇಶ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ ಜನಪ್ರಿಯತೆ ಕುಸಿಯುತ್ತಿದ್ದು, ಆಡಳಿತ ವಿರೋಧಿ ಅಲೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ಈ ಕಾರಣಕ್ಕಾಗಿಯೇ ಬಿಜೆಪಿ ಹೈಕಮಾಂಡ್ ಚೌಹಾಣ್‌ರನ್ನು ಮನ್ನಣೆ ನೀಡುತ್ತಿಲ್ಲವೆಂದು ಹೇಳಲಾಗುತ್ತಿದೆ. ಈ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡುವುದಿಲ್ಲವೆಂದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಈ ಅಭಿಪ್ರಾಯಗಳು ಸತ್ಯಕ್ಕೆ ದೂರವಾಗಿವೆ ಎಂದು ಬಿಜೆಪಿ ಉನ್ನತ ಮೂಲಗಳು 'ಎನ್‌ಡಿಟಿವಿ'ಗೆ ತಿಳಿಸಿವೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಟಿಕೆಟ್ ನೀಡಲಾಗುವುದಿಲ್ಲವೆಂಬುದು ಸುಳ್ಳು. ಆದರೆ, ಮಧ್ಯಪ್ರದೇಶದಲ್ಲಿ ಪಕ್ಷವು ಮತ್ತೊಮ್ಮೆ ಆಡಳಿತಕ್ಕೆ ಬಂದರೆ, ಅವರನ್ನು ಮುಖ್ಯಮಂತ್ರಿ ಮಾಡದೇ ಇರಬಹುದು ಎಂದು ಮೂಲಗಳು ಹೇಳಿವೆ.
ಮಧ್ಯಪ್ರದೇಶದ ಚುನಾವಣೆ ಬಳಿಕ ಪಕ್ಷದ ಯಾವುದೇ ದೊಡ್ಡ ನಾಯಕರು ಮುಖ್ಯಮಂತ್ರಿಯಾಗಬಹುದು ಎಂಬ ಊಹಾಪೋಹಗಳಿಗೆ ಅಂತ್ಯ ಹಾಡಲು ಸಾಧ್ಯವಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ.

ಬಿಜೆಪಿ ಇದುವರೆಗೆ ಎರಡು ಪಟ್ಟಿಗಳನ್ನು ಪ್ರಕಟಿಸಿದೆ. ಇದರಲ್ಲಿ ಮೂವರು ಕೇಂದ್ರ ಸಚಿವರಾದ ನರೇಂದ್ರ ತೋಮರ್, ಪ್ರಹ್ಲಾದ್ ಪಟೇಲ್ ಮತ್ತು ಫಗ್ಗನ್ ಸಿಂಗ್ ಕುಲಸ್ತೆ ಇದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಇದ್ದಾರೆ. ಇದಲ್ಲದೇ ನಾಲ್ವರು ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಮಧ್ಯಪ್ರದೇಶದ ಯಾವುದೇ ಹಾಲಿ ಸಚಿವರ ಹೆಸರನ್ನು ಇದುವರೆಗೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸಿಲ್ಲ ಹೆಸರಿಸಿಲ್ಲ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಶಿವರಾಜ್ ಸಿಂಗ್ ಚೌಹಾಣ್‌ರನ್ನು ಬಿಎಸ್ ಯಡಿಯೂರಪ್ಪ ಅವರಂತೆಯೇ ಸೈಡ್‌ಲೈನ್ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆ ಎದ್ದಿರುವುದಂತೂ ಸತ್ಯ.

ಕಾಂಗ್ರೆಸ್ ವ್ಯಂಗ್ಯ
ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಟಿಕೆಟ್ ನೀಡದೇ ಇರುವುದಕ್ಕೆ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಕಮಲ್ ನಾಥ್ ವ್ಯಂಗ್ಯವಾಡಿದ್ದಾರೆ. ಮಧ್ಯಪ್ರದೇಶವನ್ನು ದೀರ್ಘ ಕಾಲ ಆಳಿದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಅವರು ಮಧ್ಯಪ್ರದೇಶದ ಜನರಿಗೆ ಬೇಡವಾಗಿದ್ದಾರೆ ಎಂಬುದು ಬಿಜೆಪಿ ನಾಯಕರಿಗೆ ಮನವರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ ಏಳು ಸಂಸದರಿಗೆ, ಮೂವರು ಕೇಂದ್ರ ಸಚಿವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಬಿಜೆಪಿ ತನ್ನ ಸೋಲನ್ನು ಒಪ್ಪಿಕೊಂಡಂತಾಗಿದೆ ಎಂದು ಟೀಕಿಸಿದ್ದಾರೆ.












Click it and Unblock the Notifications