ಹರಿಯಾಣ: ಬೈದರೆಂದು ಪ್ರಿನ್ಸಿಪಾಲ್‌ರನ್ನೇ ಗುಂಡಿಟ್ಟು ಕೊಂದ ವಿದ್ಯಾರ್ಥಿ
ಚಂಡೀಘಡ, ಜನವರಿ 20: ಎಲ್ಲರ ಮುಂದೆ ಬೈದು ಅವಮಾನಿಸಿದರೆಂದು ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿಯೊಬ್ಬ ಕಾಲೇಜು ಪ್ರಾಂಶುಪಾಲರಿಗೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ.
ಹರಿಯಾಣದ ಯಮುನಾನಗರದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಮುನಾಗರದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದ ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬ ಸರಿಯಾಗಿ ತರಗತಿಗೆ ಹಾಜರಾಗದೆ, ಬಾಕಿ ವಿದ್ಯಾರ್ಥಿಗಳೊಂದಿಗೆ ಜಗಳ ಮಾಡುತ್ತಾ, ಅಶಿಸ್ತಿನಿಂದ ವರ್ತಿಸುತ್ತಿದ್ದ ಎಂಬ ಕಾರಣ ಕಾಲೇಜಿನ ಪ್ರಾಂಶುಪಾಲೆ ರೀತು ಛಬ್ರಾ ವಿದ್ಯಾರ್ಥಿಯನ್ನು ಬೈದು, ಕಾಲೇಜಿನಿಂದ ಕೆಲ ದಿನಗಳ ಕಾಲ ಹೊರ ಹಾಕಿದ್ದರು.

ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿ ತನ್ನ ತಂದೆಯ ಪರವಾನಗಿ ಇರುವ ಬಂದೂಕು ತಂದು ಪ್ರಾಂಶುಪಾಲೆ ಕೊಠೆಡಿಗೆ ನುಗ್ಗಿ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಗುಂಡು ತಗುಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಪ್ರಾಂಶುಪಾಲೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದು, ಆತನ ಮೇಲೆ ಹಾಗೂ ಆತನ ತಂದೆಯ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.











Click it and Unblock the Notifications