ಕೇಂದ್ರಾಡಳಿತ ಪ್ರದೇಶದಲ್ಲೂ 10ನೇ ತರಗತಿ ಪರೀಕ್ಷೆ ರದ್ದು
ಪುದುಚೇರಿ, ಜೂನ್ 09 : ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ 10ನೇ ತರಗತಿ ಪರೀಕ್ಷೆಯನ್ನು ರುದ್ದು ಮಾಡಿರುವುದಾಗಿ ಘೋಷಣೆ ಮಾಡಿದೆ. ಈಗಾಗಲೇ ತೆಲಂಗಾಣ, ತಮಿಳುನಾಡು ಸರ್ಕಾರಗಳು ಪರೀಕ್ಷೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿವೆ.
ಮಂಗಳವಾರ ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಈ ಕುರಿತು ಘೋಷಣೆ ಮಾಡಿದರು. "10ನೇ ತರಗತಿ ಪರೀಕ್ಷೆಯನ್ನುನಡೆಸಲಾಗುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಮುಂದಿನ ತರಗತಿಗೆ ಬಡ್ತಿ ನೀಡಲಾಗುತ್ತದೆ" ಎಂದು ಹೇಳಿದರು.

ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಸ್ತುತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 128. ಇವುಗಳಲ್ಲಿ ಸಕ್ರಿಯ ಪ್ರಕರಣಗಳು 75, 53 ಜನರು ಇದುವರೆಗೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ಯಾರೂ ಸಹ ಮೃತಪಟ್ಟಿಲ್ಲ.
ಸೋಮವಾರ ತೆಲಂಗಾಣ ಸರ್ಕಾರ, ಮಂಗಳವಾರ ತಮಿಳುನಾಡು ಸರ್ಕಾರ 10ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದವು. ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಪರೀಕ್ಷೆ ನಡೆಸುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳಿಗೆ ಬಡ್ತಿ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರಗಳು ಘೋಷಣೆ ಮಾಡಿದ್ದವು.
ಕರ್ನಾಟಕದಲ್ಲಿ ಜೂನ್ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. "ರಾಜ್ಯದಲ್ಲಿ ನಿಗದಿಯಾದ ದಿನದಿಂದ ಪರೀಕ್ಷೆಗಳು ನಡೆಯಲಿವೆ" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
"ಕರ್ನಾಟಕ ಹೈಕೋರ್ಟ್ ಸಹ ಎಸ್‌ಎಸ್ಎಲ್‌ಸಿ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿದೆ. ಕೆಲವು ಸೂಚನೆಗಳನ್ನು ಕೊಟ್ಟಿದೆ. ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಪರೀಕ್ಷೆ ನಡೆಸಲಾಗುತ್ತದೆ" ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.












Click it and Unblock the Notifications