ಉದ್ವಿಗ್ನ ಪರಿಸ್ಥಿತಿಯ ನಡುವೆ ಟಿಬೆಟ್ ನಲ್ಲಿ ಚೀನಾ ಭಾರೀ ಶಸ್ತ್ರಾಭ್ಯಾಸ!
ನವದೆಹಲಿ, ಜುಲೈ 17: ಭಾರತ ಚೀನಾ ನಡುವೆ ಸಿಕ್ಕಿಂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹೊತ್ತಲೇ ಚೀನಾ ಸ್ವಾಯತ್ತ ಟಿಬೆಟ್ ಪ್ರದೇಶದಲ್ಲಿ ಭಾರೀ ಶಸ್ತ್ರಾಭ್ಯಾಸ ನಡೆಸಿದೆ.
ಟಿಬೆಟ್ ನೆಲದಲ್ಲಿ ಚೀನಾ ನಡೆಸಿರುವ ಬರೋಬ್ಬರಿ 11 ಗಂಟೆಗಳ ಶಸ್ತ್ರಾಭ್ಯಾಸ ವಿಡಿಯೋವನ್ನು ಚೀನಾ ಸೆಂಟ್ರಲ್ ಟೆಲಿವಿಷನ್(ಸಿಸಿಟಿವಿ) ಪ್ರಸಾರ ಮಾಡಿದೆ. ಚೀನಾದ ನೈರುತ್ಯ ಭಾಗದಲ್ಲಿರುವ ಟಿಬೆಟ್ ನ 5,100 ಮೀಟರ್ ಎತ್ತರದ ಪ್ರದೇಶದಲ್ಲಿ ಚೀನಾದ ಸೇನೆ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ) ಈ ಶಸ್ತ್ರಾಭ್ಯಾಸ ನಡೆಸಿದೆ.

ಚೀನಾ, ಭಾರತ ಮತ್ತು ಬಾಂಗ್ಲಾದೇಶದ ಮೂಲಕ ಹಾದು ಹೋಗುವ ಬ್ರಹ್ಮಪುತ್ರಾ ನದಿಯ ಮೇಲ್ಭಾಗದಲ್ಲಿ ಯರ್ಲುಂಗ್ ಝಂಗ್ಬೊ ನದಿ (ಚೀನಾದಲ್ಲಿ ಬ್ರಹ್ಮಪುತ್ರವನ್ನು ಹೀಗೆ ಕರೆಯುತ್ತಾರೆ)ಯ ಸುತ್ತ ಮುತ್ತ ಈ ಶಸ್ತ್ರಾಭ್ಯಾಸ ನಡೆದಿರುವುದಾಗಿ ಚೈನಾ ಪ್ಲಸ್ ಮಾಧ್ಯಮ ವರದಿ ಮಾಡಿದೆ.
ದಾಳಿ ನಡೆಸಲು ಸೇನಾ ತುಕಡಿಗಳು ಮತ್ತು ಸೇನೆಯ ಬೇರೆ ಬೇರೆ ಘಟಕಗಳ ತುರ್ತು ರವಾನೆ, ಟ್ಯಾಂಕರ್ ನಾಶ ಪಡಿಸುವ ಗ್ರೆನೇಡ್‌ಗಳು, ಬಂಕರ್‌ಗಳನ್ನು ಸ್ಫೋಟಿಸಲು ಬಳಸುವ ಕ್ಷಿಪಣಿಗಳು, ಯುದ್ಧ ವಿಮಾನಗಳನ್ನು ಪತ್ತೆ ಹಚ್ಚುವ ರಡಾರ್ ಗಳು, ಯುದ್ಧ ವಿಮಾನಗಳನ್ನು ಗುರಿಯಾಗಿಸಿ ನಾಶಪಡಿಸುವ ಆರ್ಟಿಲರಿಗಳ ಅಭ್ಯಾಸ ನಡೆಸಿದೆ.
ಇನ್ನೊಂದು ಕಡೆ ಟಿಬೆಟ್ ಮೊಬೈಲ್ ಸಂಪರ್ಕ ಸಂಸ್ಥೆಯೂ ಅಭ್ಯಾಸ ನಡೆಸಿದೆ. ಜುಲೈ 10ರಂದು ತುರ್ತು ಸೇವೆಗಾಗಿ ತಾತ್ಕಾಲಿಕ ಮೊಬೈಲ್ ನೆಟ್ವರ್ಕ್ ಸ್ಥಾಪಿಸುವ ಸಾಮರ್ಥ್ಯವನ್ನು ಅಲ್ಲಿನ ಮೊಬೈಲ್ ಸಂಸ್ಥೆ ರಾಜಧಾನಿ ಲಾಸಾದಲ್ಲಿ ಒರಗೆ ಹಚ್ಚಿದೆ.
ಹೀಗೆ ಚೀನಾ ಸಮರ ಸಿದ್ಧತೆ ನಡೆಸುತ್ತಿರುವುದು ಭಾರತಕ್ಕೆ ಆತಂಕ ತಂದೊಡ್ಡಿದೆ.
The #Chinese Army has recently carried out a military exercise on the #Tibet plateau, conducting live firing at a height of 5,100 meters. pic.twitter.com/REv5BXuuO4
— China Plus News (@ChinaPlusNews) July 17, 2017
Recommended Video

ಭಾರತ ಚೀನಾ ಉದ್ವಿಗ್ನ
ಜೂನ್ 16ರಂದು ಚೀನಾದ ಸೈನಿಕರು ಸಿಕ್ಕಿಂ ವಲಯದಲ್ಲಿ ರಸ್ತೆ ನಿರ್ಮಾಣದಲ್ಲಿ ನಿರತರಾಗಿದ್ದರು. ಇದಕ್ಕೆ ಭಾರತೀಯ ಸೈನಿಕರು ತಡೆಯೊಡ್ಡಿದ್ದರು. ಇದಾದ ನಂತರ ಡೋಕಾ ಲಾದಲ್ಲಿ ಎರಡೂ ದೇಶಗಳ ಸೇನೆಗಳ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಆ ಉದ್ವಿಗ್ನ ವಾತಾವರಣ ಇನ್ನೂ ಹಾಗೆಯೇ ಉಳಿದುಕೊಂಡಿದೆ.












Click it and Unblock the Notifications