ಕರೆಂಟ್ ಬೇಡ, ಬ್ಯಾಟರಿಯೂ ಬೇಡ: ಒಮ್ಮೆ ಎಣ್ಣೆ ಹಾಕಿದ್ರೆ 24 ಗಂಟೆ ಉರಿಯುವ ಕುಂಬಾರನ ಈ ಮಣ್ಣಿನ ಮ್ಯಾಜಿಕ್ ದೀಪ!
ದೀಪ ಎಂದರೆ ಬೆಳಕು, ಭರವಸೆ ಹಾಗೂ ಶುಭದ ಸಂಕೇತ. ಆದರೆ ದೀಪ ಹಚ್ಚಿದಾಗ ಅದು ನಂದಿ ಹೋಗಬಾರದು ಎಂದು ಆಗಾಗ ಎಣ್ಣೆ ಅಥವಾ ತುಪ್ಪ ಹಾಕುತ್ತಲೇ ಇರುತ್ತೇವೆ. ಆದರೆ, ಒಮ್ಮೆ ಎಣ್ಣೆ ಹಾಕಿದರೆ ಸಾಕು, ಬರೋಬ್ಬರಿ 24 ರಿಂದ 40 ಗಂಟೆಗಳ ಕಾಲ ನಿರಂತರವಾಗಿ ಉರಿಯುವ ದೀಪವೊಂದಿದ್ದರೆ ಹೇಗಿರುತ್ತದೆ?.
ಹೌದು, ಯಾವುದೇ ವಿದ್ಯುತ್ ಇಲ್ಲ, ಬ್ಯಾಟರಿ ಇಲ್ಲ, ಕೇವಲ ಮಣ್ಣಿನಿಂದ ತಯಾರಾದ ಈ ಮ್ಯಾಜಿಕ್ ದೀಪ ಈಗ ದೇಶಾದ್ಯಂತ ಎಲ್ಲರ ಗಮನ ಸೆಳೆಯುತ್ತಿದೆ.

ಛತ್ತೀಸ್‌ಗಢದ ಕೊಂಡಗಾಂವ್ ಮೂಲದ ಸಾಂಪ್ರದಾಯಿಕ ಕುಂಬಾರ ಅಶೋಕ್ ಚಕ್ರಧಾರಿ ಅವರು ಈ ಅದ್ಭುತ ಮಣ್ಣಿನ ದೀಪವನ್ನ ತಯಾರಿಸಿ ಭಾರತೀಯ ಕರಕುಶಲ ಕಲೆಯ ಶಕ್ತಿಯನ್ನ ಜಗತ್ತಿಗೆ ಪರಿಚಯಿಸಿದ್ದಾರೆ.
24 ಗಂಟೆ ಉರಿಯುವ ಮಣ್ಣಿನ ದೀಪದ ವಿಶೇಷತೆ
ಸಾಮಾನ್ಯವಾಗಿ ದೀಪ ಉರಿಯಲು ನಾವು ಆಗಾಗ ಎಣ್ಣೆಯನ್ನ ಹಾಕಬೇಕಾಗುತ್ತದೆ. ಆದರೆ ಅಶೋಕ್ ಚಕ್ರಧಾರಿ ಅವರು ನಿರ್ಮಿಸಿರುವ ಈ ಮ್ಯಾಜಿಕ್ ದೀಪದ ಕಾರ್ಯವಿಧಾನ ಸ್ವಲ್ಪ ವಿಭಿನ್ನವಾಗಿದೆ. ಈ ದೀಪವು ಮೇಲ್ಭಾಗದಲ್ಲಿ ಗೋಳಾಕಾರದ ಎಣ್ಣೆಯನ್ನಾ ಸಂಗ್ರಹಿಸುವ ರಚನೆಯನ್ನ ಹೊಂದಿದ್ದು, ಇದನ್ನು ಒಂದು ಸಣ್ಣ ಮಣ್ಣಿನ ಕೊಳವೆಯ ಮೂಲಕ ದೀಪಕ್ಕೆ ಸಂಪರ್ಕಿಸಲಾಗಿದೆ.
ದೀಪ ಉರಿಯುತ್ತಿದ್ದಂತೆ, ಅದರಲ್ಲಿರುವ ಎಣ್ಣೆ ಖಾಲಿಯಾಗುತ್ತಿದ್ದಂತೆಯೇ, ಮೇಲಿರುವ ಸಂಗ್ರಹಣಾ ಭಾಗದಿಂದ ತಾನಾಗಿಯೇ ಎಣ್ಣೆ ದೀಪಕ್ಕೆ ಹರಿಯುತ್ತದೆ. ಇದು ಸಂಪೂರ್ಣವಾಗಿ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ.
ಈ ತಂತ್ರಜ್ಞಾನದಿಂದಾಗಿ ಈ ದೀಪವು ಸುಮಾರು 24 ರಿಂದ 40 ಗಂಟೆಗಳ ಕಾಲ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಬೆಳಗುತ್ತದೆ.
ಯೂಟ್ಯೂಬ್ ವಿಡಿಯೋದಿಂದ ಪ್ರೇರಣೆ ಪಡೆದ ಅಶೋಕ್ ಚಕ್ರಧಾರಿ
ಈ ಮ್ಯಾಜಿಕ್ ದೀಪದ ಹಿಂದೆ ಒಂದು ರೋಚಕ ಕಥೆಯಿದೆ. 2019ರಲ್ಲಿ ಅಶೋಕ್ ಅವರು ತಮ್ಮ ಕುಂಬಾರಿಕೆ ವೃತ್ತಿಯಲ್ಲಿ ಹೊಸ ವಿನ್ಯಾಸಗಳನ್ನ ಹುಡುಕುವಾಗ, ಯೂಟ್ಯೂಬ್‌ನಲ್ಲಿ ಸಾಂಪ್ರದಾಯಿಕ ಎಣ್ಣೆ ರಿಫೀಲಿಂಗ್ ವ್ಯವಸ್ಥೆಯ ವಿಡಿಯೋವೊಂದನ್ನ ನೋಡಿದರು.
ಆ ವಿಡಿಯೋ ನೋಡಿದ ತಕ್ಷಣ, ಆ ತಂತ್ರವನ್ನ ಕೇವಲ ಮಣ್ಣನ್ನು ಬಳಸಿ ಏಕೆ ಮಾಡಬಾರದು ಎಂಬ ಆಲೋಚನೆ ಅವರಿಗೆ ಹೊಳೆಯಿತು. ಸತತ ಪ್ರಯೋಗಗಳ ನಂತರ, ಮಣ್ಣಿನ ಮೂಲಕವೇ ಸ್ವಯಂಚಾಲಿತವಾಗಿ ಎಣ್ಣೆ ಪೂರೈಕೆಯಾಗುವ ಈ ದೀಪವನ್ನು ಅವರು ಯಶಸ್ವಿಯಾಗಿ ರೂಪಿಸಿದರು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮ್ಯಾಜಿಕ್ ದೀಪ
2020ರಲ್ಲಿ ಅಶೋಕ್ ಚಕ್ರಧಾರಿ ಅವರು ತಾವು ತಯಾರಿಸಿದ ಈ ವಿಶೇಷ ದೀಪದ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನೋಡನೋಡುತ್ತಿದ್ದಂತೆ ಈ ವಿಡಿಯೋ ಭಾರಿ ವೈರಲ್ ಆಯಿತು. ಕೇವಲ ಮಣ್ಣಿನಿಂದ ಇಂತಹದ್ದೊಂದು ಮ್ಯಾಜಿಕ್ ಮಾಡಬಹುದು ಎಂಬುದನ್ನ ನೋಡಿ ನೆಟ್ಟಿಗರು ಆಶ್ಚರ್ಯ ಪಟ್ಟಿದ್ದರು.
ಭಾರತದ ಮೂಲೆ ಮೂಲೆಗಳಿಂದ ಜನರು ಈ ದೀಪವನ್ನು ಖರೀದಿಸಲು ಆಸಕ್ತಿ ತೋರಿದರು. ವರದಿಗಳ ಪ್ರಕಾರ, ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಅವರಿಗೆ 200 ಕ್ಕೂ ಹೆಚ್ಚು ಆರ್ಡರ್‌ಗಳು ಹಾಗೂ ವಿಚಾರಣೆಗಳು ಬಂದಿದ್ದವು. ಭಾರತೀಯ ಕರಕುಶಲ ಕಲೆಗೆ ಬುದ್ಧಿವಂತಿಕೆಯ ಸ್ಪರ್ಶ ನೀಡಿದ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು.
100 ಗಂಟೆಗಳ ಕಾಲ ಉರಿಯುವ ಹೊಸ ಆವಿಷ್ಕಾರ
ಜನರ ಬೇಡಿಕೆ ಮತ್ತು ಪ್ರೋತ್ಸಾಹದಿಂದ ಸ್ಫೂರ್ತಿ ಪಡೆದ ಅಶೋಕ್ ಅವರು ತಮ್ಮ ಪ್ರಯೋಗವನ್ನ ಅಲ್ಲಿಗೇ ನಿಲ್ಲಿಸಲಿಲ್ಲ. ಮ್ಯಾಜಿಕ್ ದೀಪದ ಮುಂದುವರಿದ ಆವೃತ್ತಿಯಾಗಿ, ಬರೋಬ್ಬರಿ 100 ಗಂಟೆಗಳಿಗೂ ಹೆಚ್ಚು ಕಾಲ ಉರಿಯಬಲ್ಲ ದೀಪವನ್ನ ಸಹ ಅವರು ಇತ್ತೀಚೆಗೆ ಅಭಿವೃದ್ಧಿಪಡಿಸಿದ್ದಾರೆ. ಕೇವಲ ಮಣ್ಣು ಹಾಗೂ ತಮ್ಮ ಅದ್ಭುತ ಕೌಶಲ್ಯವನ್ನು ಬಳಸಿ, ಪುರಾತನ ಕುಂಬಾರಿಕೆ ಕಲೆಗೆ ಅವರು ಒಂದು ಹೊಸ ಆಯಾಮವನ್ನ ನೀಡಿದ್ದಾರೆ.


Click it and Unblock the Notifications
