Diwali Bonus: ದೀಪಾವಳಿ ಹಬ್ಬಕ್ಕೆ ಉದ್ಯೋಗಿಗಳಿಗೆ ಕಾರು, ಬೈಕ್ ಗಿಫ್ಟ್ ಕೊಟ್ಟ ಕಂಪನಿ
ಹಬ್ಬದ ಸಮಯದಲ್ಲಿ ಉದ್ಯೋಗಿಗಳಿಗೆ ಕಂಪನಿಗಳು ಬೋನಸ್ ನೀಡುವುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಉಡುಗೊರೆಯಾಗಿ ಉದ್ಯೋಗಿಗಳಿಗೆ ಹಣ ಹಾಗೂ ಇನ್ನಿತರ ವಸ್ತುಗಳನ್ನು ನೀಡುವುದು ಸರ್ವೇ ಸಾಮಾನ್ಯ. ಇನ್ನೂ ಕಂಪನಿಗಳಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದರೆ ಅಂತವರನ್ನು ಗುರುತಿಸಿ ಗೌರವಿಸಲಾಗುತ್ತದೆ. ಗಿಫ್ಟ್ ಓಚರ್, ಉಚಿತ ಶಾಪಿಂಗ್, ಬಟ್ಟೆ ಹೀಗೆ ಒಂದೊಂದು ಕಂಪನಿಗಳು ಒಂದೊಂದು ರೀತಿ ತಮ್ಮ ಉದ್ಯೋಗಿಗಳಿಗೆ ಬೋನಸ್ ನೀಡಿ ಪ್ರೋತ್ಸಾಹಿಸುತ್ತವೆ. ಆದರೆ ಇಲ್ಲೊಂದು ಕಂಪನಿ ಕಾರುಗಳನ್ನೇ ಉದ್ಯೋಗಿಗಳಿಗೆ ಉಡುಗೊರೆಯಾಗಿ ನೀಡಿದೆ.
ಹೌದು.. ದೀಪಾವಳಿ ಹಬ್ಬಕ್ಕೆ ಬೋನಸ್ ಆಗಿ ಕಂಪನಿಯೊಂದು ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ನಿಮಗಿದು ಅಚ್ಚರಿ ಎನಿಸಿದರೂ ನಿಜ. ದೀಪಾವಳಿ ಕಚೇರಿಗಳಲ್ಲೂ ಆಚರಿಸುವ ಹಬ್ಬ. ಕಚೇರಿಗಳಲ್ಲಿ ವಿಶೇಷ ಪೂಜೆ ಮಾಡಿಸಿ, ಪಟಾಕಿ ಹೊಡೆಯಲಾಗುತ್ತದೆ. ಉದ್ಯೋಗಿಗಳಿಗೆ ಸಿಹಿ ಹಂಚಿ ಹಬ್ಬದೂಟ ಮಾಡಿಸಲಾಗುತ್ತದೆ. ಅಲ್ಲದೆ ಹಲವೆಡೆ ಕಂಪನಿಗಳಲ್ಲಿ ಬೋನಸ್ ಆಗಿ ಹಣ ಹಾಗೂ ಇತರ ವಸ್ತುಗಳನ್ನು ನೀಡಲಾಗುತ್ತದೆ. ಇದು ಹಬ್ಬದಂದು ಉದ್ಯೋಗಿಗಳಿಗೆ ಕಂಪನಿಗಳು ಪ್ರೋತ್ಸಾಹಿಸುವ ಬಗೆಯಾಗಿದೆ.

ಆದರೆ ಇಲ್ಲಿ ನ್ನೈ ಮೂಲದ ಒಂದು ಸಂಸ್ಥೆಯು ತನ್ನ ಉದ್ಯೋಗಿಗಳ ಕೆಲಸದ ಮೇಲಿನ ಉತ್ಸಾಹ ಹಾಗೂ ಸ್ಥೈರ್ಯವನ್ನು ಹೆಚ್ಚಿಸಲು ದೀಪಾವಳಿ ಉಡುಗೊರೆಯಾಗಿ ಕಾರು ಹಾಗೂ ಬೈಕ್‌ಗಳನ್ನು ನೀಡಿದೆ. ಚೆನ್ನೈ ಮೂಲದ ಸ್ಟ್ರಕ್ಚರಲ್ ಸ್ಟೀಲ್ ಡಿಸೈನ್ ಮತ್ತು ಡಿಟೇಲಿಂಗ್ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ 28 ಕಾರುಗಳು ಮತ್ತು 29 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದೆ.
ಕಂಪನಿ ತನ್ನ ಉದ್ಯೋಗಿಗಳ ಶ್ರಮವನ್ನು ಶ್ಲಾಘಿಸಲು ಈ ದುಬಾರಿ ಉಡುಗೊರೆಗಳನ್ನು ನೀಡಿದೆ. ಹ್ಯುಂಡೈ, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಮರ್ಸಿಡಿಸ್-ಬೆನ್ಜ್‌ನಂತಹ ( Hyundai, Maruti Suzuki, Tata Motors, and Mercedes-Benz) ಬ್ರಾಂಡ್ ಕಾರುಗಳನ್ನು ಉದ್ಯೋಗಿಗಳಿಗೆ ನೀಡಿದೆ.
2005 ರಲ್ಲಿ ಸ್ಥಾಪಿತವಾದ ಈ ಕಂಪನಿಯು ಸಾಧಾರಣ ಹಿನ್ನೆಲೆಯಿಂದ ಪ್ರಸ್ತುತ ಸುಮಾರು 180ಕ್ಕೂ ಹೆಚ್ಚು ನುರಿತ ಉದ್ಯೋಗಿಗಳನ್ನು ಹೊಂದಿದೆ. ಹೀಗಾಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಕಣ್ಣನ್ ಉದ್ಯೋಗಿಗಳನ್ನು ಆಸ್ತಿ ಎಂದು ಕರೆದಿದ್ದಾರೆ. ಕಂಪನಿಯ ಯಶಸ್ಸಿನಲ್ಲಿ ಅವರ (ಉದ್ಯೋಗಿಗಳ) ದಣಿವರಿಯದ ಪ್ರಯತ್ನಗಳಿದೆ. ಅವರಿಗೆ ನಾವು ನಮ್ಮ ಮೆಚ್ಚುಗೆಯನ್ನು ತೋರಿಸಲು ಬಯಸುತ್ತೇವೆ. ನಮ್ಮ ಉದ್ಯೋಗಿಗಳು ನಮ್ಮ ದೊಡ್ಡ ಆಸ್ತಿ ಎಂದು ನಾವು ನಂಬುತ್ತೇವೆ. ನಮ್ಮ ಉದ್ಯೋಗಿಗಳು ಅಸಾಧಾರಣ ಬದ್ಧತೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದಾರೆ. ಅವರ ಶ್ರಮವೇ ನಮ್ಮ ಬೆಳವಣಿಗೆಯಾಗಿದೆ. ಒಂದು ಕಂಪನಿಯ ಅಭಿವೃದ್ಧಿ ಪ್ರತಿಯೊಬ್ಬ ಉದ್ಯೋಗಿಗಳ ಸಾಧನೆಯಾಗಿದೆ ಎಂದು ಹೇಳಲು ನಾವು ಹೆಮ್ಮೆಪಡುತ್ತೇವೆ ಎಂದು ಕಣ್ಣನ್ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಈ ಕಂಪನಿ ತನ್ನ ಉದ್ಯೋಗಿಗಳಿಗೆ ಇಷ್ಟೊಂದು ದುಬಾರಿ ಗಿಫ್ಟ್ ನೀಡುತ್ತಿರುವುದು ಇದೇ ಮೊದಲಲ್ಲ. 2022 ರಲ್ಲಿ ಇದು ಇಬ್ಬರು ಹಿರಿಯ ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿ ಗೌರವಿಸಿತ್ತು. ನಾವು ಹೆಚ್ಚು ಪ್ರೇರಣೆ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಅವರಿಗೆ ಕಾರು ಅಥವಾ ಬೈಕ್ ಖರೀದಿಸುವುದು ಕನಸಿದ್ದರೆ ನಾವು ಉದ್ಯೋಗಿಗಳಿಗೆ ಬೈಕುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ ಎಂದು ಕಣ್ಣನ್ ಹೇಳಿದರು. ಅಲ್ಲದೆ ಕಂಪನಿಯಲ್ಲಿ ಉದ್ಯೋಗಿಗಳಿಗೆ ಮದುವೆಗೆ ಆರ್ಥಿಕ ಸಹಾಯ ಕೂಡ ಮಾಡಲಾಗುತ್ತದೆ ಎಂದು ಕಣ್ಣನ್ ಹೇಳಿದರು.












Click it and Unblock the Notifications