Rajya Sabha: ಸಭಾಪತಿ ಧಂಖರ್ ವಿರುದ್ಧ ಅವಿಶ್ವಾಸ ನಿರ್ಣಯ ನಡುವೆ ಸಂವಿಧಾನ ಚರ್ಚೆ!
ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ವಿರುದ್ಧ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಅವಿಶ್ವಾಸದ ನಿರ್ಣಯ ನೋಟಿಸ್ ಅನ್ನು ಮಂಡಿಸಿವೆ. ಸೋಮವಾರ ಧನಕರ್ ಅವರು ವಿರುದ್ಧ ಅವಿಶ್ವಾಸ ಗೊತ್ತುವಳಿಯ ನಡುವೆಯೇ ಸಂವಿಧಾನ ಚರ್ಚೆಗೆ ಸಿದ್ಧತೆ ಶುರುವಾಗಿದೆ. ವಿರೋಧ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಇತ್ತೀಚಿನ ದಿನಗಳಲ್ಲಿ ಸಂವಿಧಾನದ ವಿಚಾರವಾಗಿ ಸಂಸತ್ತಿನ ಒಳಗೆ ಹಾಗೂ ಹೊರಗಡೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದೆ. ಇದರ ನಡುವೆ ಅವಿಶ್ವಾಸ ನಿರ್ಣಯ ಮಂಡನೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುವಾಗಲೇ ಸಂವಿಧಾನ ಚರ್ಚೆಯ ವಿಷಯವು ಮುನ್ನೆಲೆಗೆ ಬಂದಿದೆ.
ರಾಜ್ಯಸಭೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಸಂವಿಧಾನದ ಬಗ್ಗೆ ಚರ್ಚೆ ಮಾಡುವುದಕ್ಕೆ ಸಿದ್ಧತೆ ಶುರುವಾಗಿದೆ. ಇನ್ನು ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್‌ಶಾ ಅವರು ಉತ್ತರ ನೀಡುವ ಸಾಧ್ಯತೆ ಇದೆ. ಅಮಿತ್ ಶಾ ಅವರು ಮಂಗಳವಾರ ಈ ಚರ್ಚೆಗೆ ಉತ್ತರ ನೀಡುವ ನಿರೀಕ್ಷೆ ಇದೆ. ಶನಿವಾರ ಲೋಕಸಭೆಯಲ್ಲಿ ನಡೆದ ಚರ್ಚೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಿದ್ದರು.

ಇನ್ನು ಜಗದೀಪ್ ಧನಕರ್ ಅವರು ಪಕ್ಷಪಾತಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಮಂಡಿಸಿವೆ. ಇನ್ನು ಸೋಮವಾರ ಅಮಿತ್ ಶಾ ಅವರೇ ಚರ್ಚೆಯನ್ನು ಆರಂಭಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಛತ್ತೀಸ್‌ಗಢ್‌ದ ಜಗದಲ್‌ಪುರ ಎನ್ನುವಲ್ಲಿ ಇಂದು ಭದ್ರತಾ ಪರಿಶೀಲನಾ ಸಭೆ ನಡೆಯಲಿರುವುದರಿಂದ ಅಮಿತ್ ಶಾ ಅವರು ಅಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ, ನಾಳೆ (ಡಿಸೆಂಬರ್ 17) ಉತ್ತರಿಸಲಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಹಿರಿಯ ಸಚಿವರಾದ ಜೆಪಿ ನಡ್ಡಾ , ನಿರ್ಮಲಾ ಸೀತಾರಾಮನ್, ಭೂಪೇಂದ್ರ ಯಾದವ್ ಮತ್ತು ಹರ್ದೀಪ್ ಪುರಿ ಹಾಗೂ ನಾಲ್ವರು ಸಚಿವರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿ ಪಕ್ಷಗಳ ಪರವಾಗಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.

ವಿರೋಧ ಪಕ್ಷದಿಂದ ಡಿಎಂಕೆಯ ತಿರುಚಿ ಶಿವ, ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್, ಆರ್‌ಜೆಡಿಯ ಮನೋಜ್ ಕೆ ಝಾ ಮತ್ತು ಸಂಸದ ಕಪಿಲ್ ಸಿಬಲ್ ಸಹ ಸಂವಿಧಾನದ ವಿಚಾರವಾಗಿ ಮಾತನಾಡಲಿದ್ದಾರೆ. ಜೆಡಿಯುಯಿಂದ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಝಾ ಅವರನ್ನು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ಸಂಸದರು ಚರ್ಚೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಲೋಕಸಭೆಯಲ್ಲಿ ಯಾವುದೇ ಅಡಚಣೆ ಇಲ್ಲದೆ ಸಂವಿಧಾನದ ಚರ್ಚೆ ಮುಕ್ತಾಯವಾಗಿತ್ತು. ಆದರೆ, ಇದೀದ ಮೇಲ್ಮನೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಹಾಗೂ ಸಂವಿಧಾನ ಚರ್ಚೆ ಎರಡೂ ವಿಷಯಗಳು ಏಕಕಾಲಕ್ಕೆ ಬಂದಿದ್ದು, ಇದನ್ನು ವಿರೋಧ ಪಕ್ಷಗಳು ಹೇಗೆ ನಿಭಾಯಿಸಲಿವೆ ಎನ್ನುವ ಚರ್ಚೆ ಶುರುವಾಗಿದೆ. ಇದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳಿಗೆ ಚೆಕ್‌ಮೆಟ್‌ನಂತೆ ಆಗಿದೆ. ಸಂವಿಧಾನ ಚರ್ಚೆಗೆ ವಿರೋಧ ಪಕ್ಷಗಳು ಅವಕಾಶ ನೀಡದೆ ಇದ್ದರೆ, ವಿರೋಧ ಪಕ್ಷಗಳು ಸಂವಿಧಾನದ ವಿಚಾರದಲ್ಲಿ ಇಬ್ಭಗೆಯ ನೀತಿಯನ್ನು ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸುವುದಕ್ಕೆ ಬಿಜೆಪಿಗೆ ಸಹಕಾರಿಯಾಗಲಿದೆ. ಇನ್ನು ಸಂವಿಧಾನ ಚರ್ಚೆ ಮಾತ್ರ ನಡೆದರೆ, ಸಭಾಪತಿ ಧಂಖರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.












Click it and Unblock the Notifications