ಜೈಲಿನಲ್ಲಿ ಊಟ, ನೀರು ಬಿಟ್ಟ ಚಂದ್ರಬಾಬು ನಾಯ್ಡು: 'ಸೈಕೋ ಹೋಗಿ, ಸೈಕಲ್ ಬರಲಿ' ಎಂದು ಕೂಗಾಡಿದ ಅಭಿಮಾನಿಗಳು
ವಿಜಯವಾಡ, ಅಕ್ಟೋಬರ್ 02: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಅಹೋರಾತ್ರಿ ಉಪವಾಸ ಆರಂಭಿಸಿದ್ದಾರೆ. ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣದಲ್ಲಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಇದೇ ವೇಳೆ, ಟಿಡಿಪಿ ಪ್ರಧಾನ ಕಾರ್ಯದರ್ಶಿ ಮತ್ತು ಅವರ ಪುತ್ರ ಲೋಕೇಶ್ ಅವರು ದೆಹಲಿಯ ಲೋಧಿ ಎಸ್ಟೇಟ್‌ನಲ್ಲಿ ಪ್ರತಿಭಟನೆಗೆ ಕುಳಿತಿದ್ದಾರೆ. ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಪಕ್ಷದ ಮಹಿಳಾ ಕಾರ್ಯಕರ್ತರೊಂದಿಗೆ ರಾಜಮಂಡ್ರಿಯ ಕ್ವಾರಿ ಕೇಂದ್ರದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಅವರ ಜೊತೆಗಿದ್ದ ಮಹಿಳಾ ಕಾರ್ಯಕರ್ತರು ಸತ್ಯಮೇವ ಜಯತೆ ಎಂಬ ಘೋಷಣೆ ಮೊಳಗಿಸಿದ್ದಾರೆ.

ಭುವನೇಶ್ವರಿ ಅವರು ಗಾಂಧಿ ಜಯಂತಿಯಂದು ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅವರ ತಂದೆ ಎನ್‌ಟಿ ರಾಮರಾವ್ ಅವರಿಗೂ ಗೌರವ ಸಲ್ಲಿಸಿದರು.
'ದಾರಿ ಕಠಿಣವಾಗಿದ್ದರೂ ಯಾವಾಗಲೂ ಸತ್ಯಕ್ಕೆ ಅಂಟಿಕೊಳ್ಳುವಂತೆ ಚಂದ್ರಬಾಬು ನಾಯ್ಡು ಅವರು ನಮಗೆ ಕಲಿಸಿದರು. ನ್ಯಾಯದ ಪರ ಅವರ ಬಲವಾದ ಬೆಂಬಲ ಮತ್ತು ತೆಲುಗು ಜನರಿಗೆ ಸೇವೆ ಸಲ್ಲಿಸುವ ಅವರ ಸಮರ್ಪಣೆ ನಮ್ಮೆಲ್ಲರಿಗೂ, ಸ್ಫೂರ್ತಿ ನೀಡುತ್ತಿದೆ' ಎಂದು ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ತೆಲಂಗಾಣದ ಟಿಡಿಪಿ ರಾಜ್ಯಾಧ್ಯಕ್ಷ ಕಸನಿ ಜ್ಞಾನೇಶ್ವರ್ ಸೇರಿದಂತೆ ಇತರ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಗೆ ಕುಳಿತಿದ್ದಾರೆ.
ಟಿಡಿಪಿ ಶಾಸಕ ನಂದುಮುರಿ ಬಾಲಕೃಷ್ಣ, ಅವರ ಸಹೋದರಿ ಗರಪತಿ ಲೋಕೇಶ್ವರಿ, ಅವರ ಪತ್ನಿ ವಸುಂಧರಾ, ಗರಪತಿ ಶ್ರೀನಿವಾಸ್, ಚಲಸಾನಿ ಚಾಮುಂಡೇಶ್ವರಿ, ನಾರಾ ರೋಹಿತ್ ಅವರ ತಾಯಿ ಇಂದಿರಾ, ತಾರಕರತ್ನ ಅವರ ಪತ್ನಿ ಅಲೇಖ್ಯಾ ರೆಡ್ಡಿ, ನಂದಮೂರಿ ಜಯಶ್ರೀ, ಸುಧಾ, ಶಿಲ್ಪಾ, ದೀಕ್ಷಿತಾ, ರಾಹುಲ್, ತಾರಕರತ್ನ ಅವರ ಪುತ್ರಿ ನಿಷ್ಕಾ ಕುಟುಂಬಸ್ಥರು ಭಾಗವಹಿಸಿದ್ದರು. ಈ ಧರಣಿಯನ್ನು ಹೈದರಾಬಾದ್‌ನಲ್ಲಿ ನಡೆಸಲಾಗುತ್ತಿದೆ.
ಚಂದ್ರಬಾಬು ವಿರುದ್ಧದ ಅಕ್ರಮ ಪ್ರಕರಣಗಳನ್ನು ಕೈಬಿಡಬೇಕು ಎಂದು ಪಕ್ಷದ ಮುಖಂಡರು ಆಗ್ರಹಿಸಿದರು. 'ಸೈಕೋ ಹೋಗಬೇಕು.. ಸೈಕಲ್ ಬರಬೇಕು' ಎಂದು ಘೋಷಣೆ ಕೂಗಿದರು. ಸೈಕೋ ಎಂದರೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಎಂದು ಕಾರ್ಯಕರ್ತರು ಹೇಳಿದ್ದಾರೆ.
ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ನಾಯ್ಡು ಅವರನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಬಂಧಿಸಲಾಗಿದೆ. ಇದು ರಾಜಕೀಯ ಪ್ರೇರಿತ ಬಂಧನವೆಂದು ಟಿಡಿಪಿ ಆರೋಪಿಸಿದೆ. ನ್ಯಾಯದ ಮುಂದೆ ಎಲ್ಲಾ ಒಂದೇ ಎಂದು ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಹೇಳಿದ್ದಾರೆ.












Click it and Unblock the Notifications