ದೇವರಿಗೆ ಚಂದ್ರಬಾಬು ಕೇಳಿದ್ದು ಒಂದು, ನೀಡಿದ್ದು ಎರಡು: ಜೈಲು ಟು ಸೆಂಟ್ರಲ್ ಕಹಾನಿ
ತಲೆಯಲ್ಲಿ ಬುದಿ ಬಣ್ಣದ ಕೂದಲು, ಕುರಚಲ ಗಡ್ಡ, ನೇರ ದೃಷ್ಟಿ, ಖಡಕ್ ಮಾತು, ಯಾವಾಗಲೂ ಹೊಳೆಯುತ್ತಿರುವ ಶರ್ಟ್.. ಇವರು ಒಮ್ಮೆ ಮುಂದೆ ಬಂದರೆ ಇವರನ್ನು ಬೈದಾಡಿಕೊಳ್ಳುತ್ತಿದ್ದ ಜನ, ಇಂದು ತಲೆ ತಗ್ಗಿಸಿ ಸಲಾಂ ಹೇಳುವಂತೆ ಮಾಡಿದ್ದಾರೆ. ಅವರೇ ಟಿಡಿಪಿ ಪಕ್ಷದ ಸಂಸ್ಥಾಪಕ ಚಂದ್ರ ಬಾಬು ನಾಯ್ಡು.
ಕಾಲ ಎಲ್ಲವೂ ಒಂದೇ ಸರಿಯಾಗಿ ಇರುವುದಿಲ್ಲ ಎನ್ನುವುದಕ್ಕೆ ಚಂದ್ರಬಾಬು ನಾಯ್ಡು ಬೆಸ್ಟ್. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನಗಿಂತ ಅನಾನುಭವಿ ರಾಜಕಾರಣಿ ಜಗನ್‌ಮೋಹನ್ ರೆಡ್ಡಿಯ ವಿರುದ್ಧ ಸೋತು ಮುಖಭಂಗ ಅನುಭವಿಸಿ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ನಾಯ್ಡು ಸಿಕ್ಕಿ ಹಾಕಿಕೊಂಡಿದ್ದರು. ಅಲ್ಲದೆ ಅವರನ್ನು ಬಂಧಿಸಲಾಗಿತ್ತು. ಆದರೆ ಈಗ ಟೈಮ್ ಚಂದ್ರ ಹೇಳಿದಂತೆ ಕೇಳುವಂತಾಗಿದೆ. 175 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿಡಿಪಿ ಎರಡು ಸ್ಥಾನಗಳನ್ನು ಗೆದ್ದು 130 ಸ್ಥಾನಗಳಲ್ಲಿ ಮುಂದಿದೆ, ಅದರ ಮಿತ್ರಪಕ್ಷ ಬಿಜೆಪಿ ಏಳು ಸ್ಥಾನಗಳಲ್ಲಿ ಮತ್ತು ಜನಸೇನಾ ಪಕ್ಷ 20 ಸ್ಥಾನಗಳಲ್ಲಿ ಮುಂದಿದೆ. ಲೋಕಸಭೆ ಚುನಾವಣೆಯ ಯಲ್ಲಿ ಚಂದ್ರ ಬಾಬು ನಾಯ್ಡು ಪಕ್ಷ 25 ರಲ್ಲಿ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗಾಗಿ ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು.

ಬಂಧನದಿಂದ ಆಂಧ್ರದಲ್ಲಿ ಹೊಸ ಅಧ್ಯಾಯ ಆರಂಭಿಸುವ ಪಯಣ
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ನಾಯ್ಡು ಅವರನ್ನು ರಾಜ್ಯ ಸಿಐಡಿ ಬಂಧಿಸಿತ್ತು. ಇದಾದ ಬಳಿಕ ಮತ್ತೆ ರಾಜಕೀಯವಾಗಿ ಪುಟಿದೆದ್ದಿದ್ದಾರೆ. 13 ವರ್ಷಗಳ ಕಾಲ ವಿವಿಧ ಕಾಲಘಟ್ಟದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಹಲವು ದಾಖಲೆಗಳನ್ನು ಸೃಷ್ಟಿಸಿರುವ ನಾಯ್ಡು, ತಮ್ಮ ರಾಜ್ಯವನ್ನು ಐಟಿ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದ ಕೀರ್ತಿಗೆ ಭಾಜನರಾಗಿದ್ದಾರೆ.
ಆಂಧ್ರಪ್ರದೇಶದ ವಿಶೇಷ ಸ್ಥಾನಮಾನದ ಕುರಿತು 2018 ರ ಮಾರ್ಚ್‌ನಲ್ಲಿ ಎನ್‌ಡಿಎ ಜೊತೆಗಿನ ಸಂಬಂಧ ಹಳಿಸಿತ್ತು. 2019 ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿನ ಹೀನಾಯ ಸೋಲು ಅವರನ್ನು ರಾಜಕೀಯ ಹಿನ್ನೆಲೆಗೆ ತಳ್ಳಿತು. ಸರಿಯಾಗಿ ಆರು ವರ್ಷಗಳ ನಂತರ, ಮಾರ್ಚ್ 2024 ರಲ್ಲಿ, ನಾಯ್ಡು ಎನ್‌ಡಿಎಗೆ ಮರಳಿದರು ಮತ್ತು ಬಿಜೆಪಿ ಮತ್ತು ಜನಸೇನಾ ಜೊತೆ ಮೈತ್ರಿ ಮಾಡಿಕೊಂಡು ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅಚ್ಚರಿಯ ಫಲಿತಾಂಶ ನೀಡಿದೆ.
ಮೊದಲಿನಿಂದಲೂ ಮುಸ್ಲಿಮರಿಗೆ ಶೇಕಡಾ ನಾಲ್ಕು ಮೀಸಲಾತಿಯನ್ನು ಬೆಂಬಲಿಸುತ್ತಿದ್ದೇವೆ ಮತ್ತು ಇದು ಮುಂದುವರಿಯುತ್ತದೆ ಎಂದು ಚಂದ್ರ ಬಾಬು ಅವರು ಬಹಿರಂಗವಾಗಿ ಹೇಳಿದರು, ಆದರೆ ಟಿಡಿಪಿ ತನ್ನ ಪ್ರಣಾಳಿಕೆಯಲ್ಲಿ ಈ ವಿಷಯದಿಂದ ದೂರವಿತ್ತು.

ಆಂಧ್ರದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದವರು
ಎನ್‌ಡಿಎಗೆ ಮರಳಿದ ನಂತರ, ನಾಯ್ಡು ಪ್ರತಿ ಅವಕಾಶದಲ್ಲೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ. ಅವರೊಂದಿಗಿನ ಸಂಬಂಧವು ಹಿಂದೆ ಸುಗಮವಾಗಿರಲಿಲ್ಲ. 2002ರ ಗುಜರಾತ್ ಗಲಭೆಯ ನಂತರ ನಾಯ್ಡು ಮೋದಿಯನ್ನು ವಿರೋಧಿಸಿದ್ದರು. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಹಲವು ಅವಧಿಗಳಲ್ಲಿ 13 ವರ್ಷ 247 ದಿನಗಳ ಕಾಲ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದಾರೆ.
ನಾಯ್ಡು ಎನ್‌ಡಿಎ ಸಂಯೋಜಕರೂ ಆಗಿದ್ದರು
ನಾಯ್ಡು ಅವರು ರಾಜ್ಯ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದಲ್ಲೂ ಸಾಕಷ್ಟು ಪ್ರಭಾವ ಬೀರಿದ್ದಾರೆ. ಅವರು 1996 ಮತ್ತು 1998 ರ ಲೋಕಸಭಾ ಚುನಾವಣೆಗಳಲ್ಲಿ ಯುನೈಟೆಡ್ ಫ್ರಂಟ್ ಅನ್ನು ಮುನ್ನಡೆಸಿದರು. 1998 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವನ್ನು ಬೆಂಬಲಿಸುವ ಮೊದಲು, ಅವರು ಯುನೈಟೆಡ್ ಫ್ರಂಟ್‌ನ ಸಂಚಾಲಕರಾಗಿದ್ದರು. ನಾಯ್ಡು ಎನ್‌ಡಿಎ ಸಂಚಾಲಕರೂ ಆಗಿದ್ದರು.
ನಾಯ್ಡು ಕಿಂಗ್ ಮೇಕರ್
ಇದೀಗ ಮತ್ತೆ ಆಂಧ್ರಪ್ರದೇಶದಲ್ಲಿ ಟಿಡಿಪಿ ಡಬಲ್ ಪರ್ಫಾರ್ಮೆನ್ಸ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟಿಡಿಪಿ ಪುನರಾಗಮನ ಮಾಡಿದ್ದಾರೆ.












Click it and Unblock the Notifications