ವದಂತಿಯ ಹರಿವಿಗೆ ಕಡಿವಾಣ: ವಾಟ್ಸಾಪ್‌ಗೆ ಕೇಂದ್ರ ಸರ್ಕಾರ ಸೂಚನೆ
Recommended Video

ನವದೆಹಲಿ, ಜುಲೈ 4: ವಾಟ್ಸಾಪ್‌ನಲ್ಲಿ ಹರಿದಾಡುವ ವದಂತಿಗಳಿಂದ ಹತ್ಯೆಗಳು ಸಂಭವಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಈ ಕುರಿತು ವಾಟ್ಸಾಪ್ ಸಂಸ್ಥೆಗೆ ಎಚ್ಚರಿಕೆ ನೀಡಿದೆ.
'ವಾಟ್ಸಾಪ್‌ನಂತಹ ಮಾಧ್ಯಮವನ್ನು ನಿರಂತರವಾಗಿ ಪ್ರಚೋದನಾಕಾರಿ ವಿಚಾರಗಳನ್ನು ಹರಿಬಿಡಲು ದುರ್ಬಳಕೆ ಮಾಡಲಾಗುತ್ತಿದೆ' ಎಂದು ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ.
ಈ ರೀತಿಯ ವದಂತಿಗಳಿಂದ ಸಂಭವಿಸಿರುವ ಅಪರಾಧ ಮತ್ತು ಗೊಂದಲಗಳ ಕುರಿತು ವಾಟ್ಸಾಪ್‌ನ ಆಡಳಿತ ವಿಭಾಗಕ್ಕೆ ಸಚಿವಾಲಯ ಮಾಹಿತಿ ನೀಡಿದೆ. ಸುಳ್ಳು ಮಾಹಿತಿಗಳ ಪ್ರಸರಣವನ್ನು ತಕ್ಷಣವೇ ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅದು ಸೂಚನೆ ನೀಡಿದೆ.

ವದಂತಿಗಳಿಂದ ಉಂಟಾಗುವ ಅನಾಹುತಗಳ ಹೊಣೆಗಾರಿಕೆಯಿಂದ ಇಂತಹ ಯಾವುದೇ ಮಾಧ್ಯಮವು ನುಣುಚಿಕೊಳ್ಳಲು ಸಾಧ್ಯವಿಲ್ಲ.
ಉತ್ತಮ ತಂತ್ರಜ್ಞಾನ ಆವಿಷ್ಕಾರಗಳನ್ನು ಹಿಂಸಾಚಾರ ಹರಡಲು ಕಾರಣವಾಗುವ ಪ್ರಚೋದನಾಕಾರಿ ಸಂದೇಶಗಳನ್ನು ಹರಿಬಿಡಲು ದುಷ್ಕರ್ಮಿಗಳು ದುರ್ಬಳಕೆ ಮಾಡಿಕೊಳ್ಳುವಾಗ ಅದರ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಸಹ ಸಚಿವಾಲಯ ಹೇಳಿದೆ.
ವಾಟ್ಸಾಪ್‌ನಲ್ಲಿ ಹರಡಿದ ಒಂದು ವದಂತಿ ಮೇ ತಿಂಗಳಿನಿಂದೀಚೆಗೆ 29 ಮಂದಿಯ ಹತ್ಯೆಗೆ ಕಾರಣವಾಗಿದೆ. ತಮಿಳುನಾಡಿನಿಂದ ತ್ರಿಪುರಾದವರೆಗೆ ಮಕ್ಕಳ ಕಳ್ಳರ ಕುರಿತ ಸುಳ್ಳು ಸುದ್ದಿ ಹರಡಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ಸಾರ್ವಜನಿಕರು ಹೊಡೆದು ಸಾಯಿಸಿದ ಅಮಾನವೀಯ ಪ್ರಕರಣಗಳು ವರದಿಯಾಗಿವೆ.
ಕಳೆದ ವಾರ ಬೈಕ್‌ನಲ್ಲಿ ಬಂದ ಕಳ್ಳರು ಮಕ್ಕಳನ್ನು ಹೊತ್ತೊಯ್ಯುವ ವಿಡಿಯೋವನ್ನು ಎಡಿಟ್ ಮಾಡಿ ವಾಟ್ಸಾಪ್‌ನಲ್ಲಿ ಹರಿಬಿಡಲಾಗಿತ್ತು. ಇದನ್ನು ನಂಬಿದ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗ್ರಾಮವೊಂದರ ಜನರು ಐದು ಮಂದಿಯನ್ನು ಥಳಿಸಿ ಹತ್ಯೆ ಮಾಡಿದ್ದರು.
ಇದೇ ರೀತಿ ತ್ರಿಪುರಾದಲ್ಲಿಯೂ ಮಕ್ಕಳ ಕಳ್ಳರೆಂದು ಭಾವಿಸಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಲಾಗಿತ್ತು. ಇಬ್ಬರು ಗಾಯಗೊಂಡಿದ್ದರು.












Click it and Unblock the Notifications