Highway Roads: ಮಳೆ-ಪ್ರವಾಹ, ಹೆದ್ದಾರಿ ರಸ್ತೆಗಳ ಹಾನಿ ದುರಸ್ತಿಗೆ ಕೇಂದ್ರ DMP ಪ್ರಕಟ, ಏನಿದು?
ನವದೆಹಲಿ, ಆಗಸ್ಟ್ 26: ರಾಷ್ಟ್ರೀಯ ಹೆದ್ದಾರಿಗಳು ಕೇವಲ ಸಾರಿಗೆ ಉಪಯೋಗಕ್ಕೆ ಮಾತ್ರವಲ್ಲದೇ ಆರ್ಥಿಕತೆ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭಾರತಾದ್ಯಂತ ಒಂದು ಕಡೆ ಹೆದ್ದಾರಿ ಅಗಲೀಕರಣ, ಹೊಸ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇತ್ತ ಮೇಘಸ್ಪೋಟ್, ಪ್ರವಾಹದಿಂದ ಹೆದ್ದಾರಿ ರಸ್ತೆಗಳು ಹಾಳಾಗುತ್ತಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಇದರ ಪರಿಹಾರಕ್ಕೆ ಹಾಗೂ ಹಾನಿಯ ಮತ್ತಿತರ ಸಮಸ್ಯೆಗಳ ನಿವಾರಣೆಗೆ ಕೇಂದ್ರ ಸರ್ಕಾರ ಹೊಸ ಪ್ಲಾನ್ ಮಾಡಿದೆ.
ಮೇಘಸ್ಫೋಟ ಮತ್ತು ಪ್ರವಾಹದಂತಹ ನೈಸರ್ಗಿಕ ವಿಕೋಪಗಳು ಹೆದ್ದಾರಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಸಂಚಾರಕ್ಕೆ ತೊಂದರೆ ನೀಡಿ ವೇಗ ಕಡಿಮೆ ಮಾಡುತ್ತಿವೆ. ಹೀಗಾಗಿ ಕೆಂದ್ರ ಸರ್ಕಾರವು ಇತ್ತೀಚೆಗೆ ರಸ್ತೆ ಮತ್ತು ಹೆದ್ದಾರಿ ವಲಯಕ್ಕಾಗಿ ವಿವರವಾದ 'ವಿಪತ್ತು ನಿರ್ವಹಣಾ ಯೋಜನೆ' (DMP) ಅನ್ನು ಪ್ರಕಟಿಸಿದೆ. ಇದರಿಂದ ಹೆದ್ದಾರಿಗಳ ಮೇಲೆ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ.

ಏನಿದು ಡಿಎಂಪಿ?
'ವಿಪತ್ತು ನಿರ್ವಹಣಾ ಯೋಜನೆ' ಪ್ರಕಾರ, ಹೆಚ್ಚಿನ ಮಳೆ, ಪ್ರವಾಹದಿಂದ ಸಮಸ್ಯೆ ಆದಾಗ ಈ ಮಾರ್ಗಸೂಚಿ ಕ್ಷೇತ್ರದ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ಪ್ರಧಾನ ಕಚೇರಿಯಲ್ಲಿ ತ್ವರಿತ ಪರಿಶೀಲನೆ ಕೈಗೊಳ್ಳಲು, ಪುನರ್ವಸತಿ ಕಲ್ಪಿಸುತ್ತದೆ. ಅಧಿಕಾರಿಗಳಿಗೆ ತ್ವರಿತ ಸ್ಪಂದನೆಗೆ ಹಣಕಾಸಿನ ಅಧಿಕಾರ ನೀಡಿದೆ. ಅಲ್ಲದೇ ಅಧಿಕಾರಿಗಳು ವಿಪತ್ತು ಉಂಟಾದ ಆರು ಗಂಟೆಗಳ ಒಳಗೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಜಿಲ್ಲಾಡಳಿತ ಜತೆ ಸಂಪರ್ಕದಲ್ಲಿರಬೇಕು. ಸಮನ್ವಯದಿಂದ ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ವಿಚಾರಣೆ ಮಾಡಿ, ಹಾನಿಯ ತೀವ್ರತೆ ಕಂಡುಕೊಳ್ಳಬೇಕು. ರಸ್ತೆ ದುರಸ್ತಿಗೆ ತಾಂತ್ರಿಕ ಯೋಜನೆ ಸಿದ್ಧಪಡಿಸಬೇಕು.
ಸಂಚಾರಕ್ಕೆ ಸುಗಮವಾಗುವಂತೆ ಹೆದ್ದಾರಿ ಪುನಃಸ್ಥಾಪನೆ ಮಾಡಲು ಪ್ರತಿ ಸ್ಥಳಕ್ಕೆ ಅಂದಾಜು 25 ಲಕ್ಷ ರೂ. ಹಾಗೂ ವಿಪತ್ತಿನಿಂದ ಹೆಚ್ಚಿನ ಹಾನಿ ಸ್ಥಳಗಳಿಗೆ 1 ಕೋಟಿ ರೂ.ಅಗತ್ಯವೆನಿಸಿದರೆ ಅಧಿಕಾರಿಗಳು ವೆಚ್ಚದ ಮೇಲೆ ನೀರ್ಣಯಿಸಲು ಸಹ ಈ DMP ಅಧಿಕಾರ ನೀಡುತ್ತದೆ. ಒಟ್ಟಾರೆ ಹೆದ್ದಾರಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ DMP ಪ್ರಕಟಿಸಲಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.
ಎಲ್ಲ ಹೆದ್ದಾರಿ ಅನುಷ್ಠಾನ ಸಂಸ್ಥೆಗಳಲ್ಲಿ ಉನ್ನತ ಅಧಿಕಾರಿಗಳಿಗೆ ಹಣಕಾಸಿನ ಅಧಿಕಾರ, ಕೆಲಸ ಮಂಜೂರು ಸೇರಿ ಕೆಲವು ಅಧಿಕಾರ ನೀಡಲಾಗಿದೆ. ಸ್ಥಳದಲ್ಲೇ ಅನುಷ್ಠಾನ ನಿರ್ಧಾರ ಹಾಗೂ ಇತರ ಅಧಿಕಾರ ನೀಡಿದೇ ಜವಾಬ್ದಾರಿ ನೀಡಿದ್ದರಲ್ಲಿ ಅರ್ಥವಿಲ್ಲ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಸಂಸ್ಥೆಗಳು ಹೆದ್ದಾರಿ ಹಾನಿಯನ್ನು ತ್ವರಿತವಾಗಿ ನಿರ್ಣಯಿಸಿ, ಪರಿಶೀಲನೆ, ತನಿಖೆ ಪೂರ್ಣಗೊಳಿಸಿ, ತಿಂಗಳೊಳಗೆ ದುರಸ್ತಿ ಕಾರ್ಯ ಮುಗಿಸಲು DMP ಮಾರ್ಗದರ್ಶಿಸುತ್ತದೆ.
ಹೆದ್ದಾರಿಗಳಲ್ಲಿನ ಸಾವನ್ನು ಶೇ.50 ಇಳಿಕೆ..
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವಾಲಯಗಳು ಮತ್ತು ಸಂಬಂಧಿಸಿದ ಇಲಾಖೆಗಳ ಜತೆ ಸಮನ್ವಯ ಮುಖ್ಯವಾಗಿರುತ್ತದೆ. ಕೇವಲ ನೈಸರ್ಗಿಕ ಮಾತ್ರವಲ್ಲದೇ, ಮಾನವ ನಿರ್ಮಿತ ವಿಪತ್ತುಗಳು ಅಂದರೆ, ಸಂಚಾರ ವೇಳೆ ವಾಹನಗಳಿಂದ ಅಪಾಯ, ಅನಿಲ ಟ್ಯಾಂಕರ್ ಅಪಾಯಕಾರಿ ವಸ್ತುಗಳ ಸ್ಪೋಟ್, ಅಪಘಾತಗಳಿಂದಾಗಿ ಸಮಸ್ಯೆಗಳಿಗೆ ಪರಿಹಾರದ ಅಂಶಗಳನ್ನು ಈ ಡಿಎಂಪಿ ಒಳಗೊಂಡಿದೆ. ರಸ್ತೆ ಸುರಕ್ಷತಾ ವಿಭಾಗವು ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ಪರಿಹಾರ ರೂಪಿಸುತ್ತದೆ. ಇದೆಲ್ಲದರ ಮೂಲಕ 2030 ರ ವೇಳೆಗೆ ಹೆದ್ದಾರಿ ಸಾವಿನ ಪ್ರಮಾಣ ಶೇಕಡಾ 50ರಷ್ಟು ಇಳಿಕೆಗೆ ಪ್ರಯತ್ನಿಸಲಾಗುತ್ತಿದೆ.












Click it and Unblock the Notifications