ಐಎಎಸ್, ಐಪಿಎಸ್, ಐಎಫ್‌ಎಸ್, ಐಆರ್‌ಎಸ್ ಖಾಲಿ ಹುದ್ದೆಗಳ ಕುರಿತು ಮಾಹಿತಿ ನೀಡಿದ ಕೇಂದ್ರ ಸರ್ಕಾರ: ಅಂಕಿಅಂಶ ತಿಳಿಯಿರಿ
ನವದೆಹಲಿ, ಆಗಸ್ಟ್ 03: ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಹಾಗೂ ಭಾರತೀಯ ಕಂದಾಯ ಸೇವೆಗಳಲ್ಲಿ (ಐಆರ್‌ಎಸ್) ಖಾಲಿ ಇರುವ ಹುದ್ದೆಗಳು ಕುರಿತು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ. ಖಾಲಿ ಇರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಐಎಎಸ್, ಐಪಿಎಸ್, ಐಎಫ್‌ಎಸ್ ಮತ್ತು ಐಆರ್‌ಎಸ್ ಸೇರಿದಂತೆ ನಾಗರಿಕ ಸೇವೆಗಳಲ್ಲಿ ನೇರ ನೇಮಕಾತಿ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪ್ರತಿ ವರ್ಷ ನಾಗರಿಕ ಸೇವಾ ಪರೀಕ್ಷೆಗಳನ್ನು (ಸಿಎಸ್‌ಇ) ನಡೆಸುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಆಡಳಿತ ಸೇವೆಯಲ್ಲಿ (ಐಎಎಸ್) 1,365 ಮತ್ತು ಭಾರತೀಯ ಪೊಲೀಸ್ ಸೇವೆಯಲ್ಲಿ (ಐಪಿಎಸ್) 703 ಹುದ್ದೆಗಳು ಖಾಲಿ ಇವೆ ಎಂದು ಗುರುವಾರ ರಾಜ್ಯಸಭೆಗೆ ಸರ್ಕಾರ ತಿಳಿಸಿದೆ.
ಇವುಗಳಲ್ಲದೆ, ಭಾರತೀಯ ಅರಣ್ಯ ಸೇವೆಯಲ್ಲಿ (ಐಎಫ್‌ಎಸ್) 1,042 ಮತ್ತು ಭಾರತೀಯ ಕಂದಾಯ ಸೇವೆಯಲ್ಲಿ (ಐಆರ್‌ಎಸ್) 301 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

'ಐಎಎಸ್ ಮತ್ತು ಐಪಿಎಸ್ ಬಡ್ತಿ ಕೋಟಾದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಲೋಕಸೇವಾ ಆಯೋಗವು ರಾಜ್ಯ ಸರ್ಕಾರಗಳೊಂದಿಗೆ ಆಯ್ಕೆ ಸಮಿತಿ ಸಭೆಗಳನ್ನು ನಡೆಸುತ್ತದೆ' ಎಂದು ಸಚಿವರು ಹೇಳಿದ್ದಾರೆ.
9.64 ಲಕ್ಷ ಖಾಲಿ ಹುದ್ದೆಗಳ ಭರ್ತಿ
ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಸುಮಾರು 10 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ಲೋಕಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದೆ.
ತೃಣಮೂಲ ಕಾಂಗ್ರೆಸ್ ಮತ್ತು ಭಾರತ್ ರಾಷ್ಟ್ರ ಸಮಿತಿಯ ಸಂಸದರಾದ ಮಾಲಾ ರಾಯ್ ಮತ್ತು ನಾಮ ನಾಗೇಶ್ವರ ರಾವ್ ಅವರ ಪ್ರಶ್ನೆಗೆ ಉತ್ತರಿಸಿದ ಜಿತೇಂದ್ರ ಸಿಂಗ್ ಅವರು ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ. ಮಾರ್ಚ್ 1, 2023 ರಂತೆ ಸರ್ಕಾರಿ ಇಲಾಖೆಗಳಲ್ಲಿ 964,359 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಸಚಿವಾಲಯಗಳು, ಇಲಾಖೆಗಳು, ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳಲ್ಲಿ (ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ವಲಯದ ಬ್ಯಾಂಕುಗಳು, ಇತ್ಯಾದಿ) ಹುದ್ದೆಗಳು ಖಾಲಿ ಇವೆ.
ಈ ಖಾಲಿ ಹುದ್ದೆಗಳಿವೆ ನೇರವಾಗಿ ಅಥವಾ ನೇಮಕಾತಿ ಏಜೆನ್ಸಿಗಳ ಮೂಲಕ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.
ರೋಜ್‌ಗಾರ್ ಮೇಳದ ಭಾಗವಾಗಿ, ಖಾಲಿ ಹುದ್ದೆಗಳನ್ನು ಆದಷ್ಟು ಬೇಗನೇ ಭರ್ತಿ ಮಾಡಲಾಗುತ್ತದೆ. ರೋಜ್‌ಗಾರ್ ಮೇಳ ಕಾರ್ಯಕ್ರಮಗಳನ್ನು ದೇಶಾದ್ಯಂತ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹೊಸದಾಗಿ ನೇಮಕಗೊಂಡವರನ್ನು ವಿವಿಧ ಕೇಂದ್ರ ಸಚಿವಾಲಯಗಳು, ಇಲಾಖೆಗಳು, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಇತ್ಯಾದಿಗಳಿಗೆ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications