ಅನ್ನದಾತರ ಎಲ್ಲ ಷರತ್ತುಗಳಿಗೆ ಕೇಂದ್ರದ ಅಸ್ತು; 15 ತಿಂಗಳ ರೈತರ ಆಂದೋಲನ ಅಂತ್ಯ?

ನವದೆಹಲಿ, ಡಿಸೆಂಬರ್ 7: ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ನವದೆಹಲಿಯ ಮೂರು ಗಡಿಗಳಲ್ಲಿ ಕಳೆದ 15 ತಿಂಗಳಿನಿಂದ ನಡೆಯುತ್ತಿರುವ ರೈತರ ಸುದೀರ್ಘ ಪ್ರತಿಭಟನೆ ಅಂತ್ಯವಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕೃಷಿ ಕಾಯ್ದೆಗಳ ರದ್ಧತಿಯಿಂದ ಹಿಡಿದು ಕನಿಷ್ಠ ಬೆಂಬಲ ಬೆಲೆ ನಿಗದಿವರೆಗೂ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಸಂಬಂಧಿಸಿದ ಲಿಖಿತ ಭರವಸೆಗೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಕಾನೂನು, ವಿದ್ಯುತ್‌ ಬಿಲ್‌ ಮತ್ತು ಪಾರಾಲಿ ಬಿಲ್‌ ಜಂಕ್‌, ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವುದು, ಆಂದೋಲನದ ವೇಳೆ ಮೃತಪಟ್ಟ 700 ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು. ಇದಲ್ಲದೇ ನವದೆಹಲಿಯ ಕೆಂಪು ಕೋಟೆ ಹಿಂಸಾಚಾರದ ಸಂದರ್ಭದಲ್ಲಿ ದಾಖಲಿಸಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು. ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಕೊಲೆ ಆರೋಪದಡಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ರೈತರು ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ರೈತರ ಬೇಡಿಕೆಗೆ ಒಪ್ಪಿಗೆ ಸೂಚಿಸಿದ ಕೇಂದ್ರ ಸರ್ಕಾರ?

ರೈತರ ಬೇಡಿಕೆಗೆ ಒಪ್ಪಿಗೆ ಸೂಚಿಸಿದ ಕೇಂದ್ರ ಸರ್ಕಾರ?

* ದೆಹಲಿಯ ಸಿಂಘು ಗಡಿಯಲ್ಲಿ ಮಂಗಳವಾರ ಸಂಜೆ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ರೈತ ಮುಖಂಡರು ಸುದೀರ್ಘ ಚರ್ಚೆ ನಡೆಸಿದರು. ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಹೇಗೆ ಪರಿಗಣಿಸಬೇಕು ಎಂಬುದರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳದೇ ಇಂದಿನ ಸಭೆ ಅಂತ್ಯವಾಗಿದ್ದು, ಬುಧವಾರ ಮಧ್ಯಾಹ್ನ 2 ಗಂಟೆಗೆ ಮತ್ತೆ ರೈತ ನಾಯಕರ ಸಭೆ ಪುನಾರಂಭಗೊಳ್ಳಲಿದೆ.

* ರೈತರಿಗೆ ತಮ್ಮ ಬೇಡಿಕೆಗಳ ಮೇಲೆ ಲಿಖಿತ ಭರವಸೆಗಳನ್ನು ನೀಡಲು ಕೇಂದ್ರ ಸರ್ಕಾರವು ಮುಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ ಮತ್ತು ಪೈರಿನ ನಂತರ ಕಸವನ್ನು ಸುಡುವಿಕೆ ಸೇರಿದಂತೆ ಅವರ ವಿರುದ್ಧದ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಕೈಬಿಡುವುದು ಸೇರಿದೆ.

* ಒಂದು ವೇಳೆ ರೈತರು ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಿಕೊಂಡರೆ, ಸಂಸತ್ತಿನಲ್ಲಿ ಗದ್ದಲ, ಕೆಂಪು ಕೋಟೆ ಮೇಲೆ ಧಾರ್ಮಿಕ ಬಾವುಟ ಹಾರಿಸಿದ ಘಟನೆ, ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆ ಹಾಗೂ ಸುದೀರ್ಘ ಹೋರಾಟದ ಕುರಿತು ಭಾರತವಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲಿ ರೈತರ ಬೃಹತ್ ಆಂದೋಲನ ಸುದ್ದಿಯಾಗಿತ್ತು. ಅಂಥ ರೈತರ ಪ್ರತಿಭಟನೆ ಕೊನೆಯಾಗಲಿದೆ ಎಂದು ಅರ್ಥೈಸಲಾಗುತ್ತಿದೆ.

* ಕೇಂದ್ರ ಸರ್ಕಾರವು ನೀಡಿರುವ ಪ್ರಸ್ತಾಪದಲ್ಲಿ, ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಗೊಳಿಸುವ ಕಾನೂನಿಗಾಗಿ ಒಂದು ಸಮಿತಿಯನ್ನು ರಚಿಸುವುದೂ ಸೇರಿದೆ. ಈ ಸಮಿತಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು, ಕೃಷಿ ತಜ್ಞರು ಹಾಗೂ ರೈತರ ಪ್ರತಿಭಟನೆ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾದ ಐವರು ರೈತರ ಮುಖಂಡರು ಸೇರಿರುತ್ತಾರೆ.

* ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ರೈತರ ಮೇಲಿನ ಎಲ್ಲ ಪ್ರಕರಣಗಳನ್ನು ಕೈಬಿಡುವುದಕ್ಕೆ ಒಪ್ಪಿಕೊಂಡಿದೆ. ಅದರಲ್ಲಿ ಪೈರಿನ ನಂತರ ಕಸ ಸುಟ್ಟಿರುವುದಕ್ಕೆ ಸಂಬಂಧಿಸಿದ ಪ್ರಕರಣ ಹಾಗೂ ಕಳೆದ ಕೆಲ ತಿಂಗಳ ಹಿಂದೆ ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ನಡೆದಿರುವ ಹಿಂಸಾಚಾರ ಘಟನೆಗಳಲ್ಲಿ ರೈತರ ವಿರುದ್ಧ ದಾಖಲಿಸಿದ ಪ್ರಕರಣಗಳು ಸೇರಿವೆ.

* ಕೇಂದ್ರ ಸರ್ಕಾರದ ಪ್ರಸ್ತಾಪದಿಂದ ರೈತರು ಸಂತಸದಲ್ಲಿ ಇರುವಾಗಲೇ ಒಂದು ಷರತ್ತು ವಿಧಿಸಲಾಗಿದೆ. ರೈತರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವುದಕ್ಕೂ ಮೊದಲು ರೈತರು ತಮ್ಮ ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಕೇಂದ್ರ ಸರ್ಕಾರ ಬಯಸಿದೆ.

* ಕೇಂದ್ರ ಸರ್ಕಾರವು ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದಾಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಎತ್ತಿದ ಪರಿಹಾರದ ಪ್ರಶ್ನೆಯ ಬಗ್ಗೆಯೂ ಚರ್ಚಿಸಲಾಯಿತು. ಪಂಜಾಬ್ ನೀಡುವ 5 ಲಕ್ಷ ರೂಪಾಯಿ ಪರಿಹಾರವನ್ನು ರೈತರು ಉಲ್ಲೇಖಿಸಿದರು, ಉತ್ತರ ಪ್ರದೇಶ ಮತ್ತು ಹರಿಯಾಣಗಳು ತಾತ್ವಿಕವಾಗಿ ಇದೇ ರೀತಿಯ ಕ್ರಮಗಳಿಗೆ ಒಪ್ಪಿಕೊಂಡಿವೆ ಎಂದು ಕೇಂದ್ರ ಸರ್ಕಾರ ಹೇಳಿತು.

* ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ನಂತರದಲ್ಲಿ ಕಳೆದ ವಾರ ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ತಮ್ಮೊಂದಿಗೆ ಮಾತನಾಡಿದ್ದು, ಬಾಕಿ ಇರುವ ಸಮಸ್ಯೆಗಳ ಕುರಿತು ಚರ್ಚಿಸಿರುವುದಾಗಿ ರೈತರು ಹೇಳಿಕೊಂಡಿದ್ದಾರೆ.

ಐವರು ಸದಸ್ಯರ ತಂಡವನ್ನು ರಚಿಸಿದ ಎಸ್‌ಕೆಎಂ

ಐವರು ಸದಸ್ಯರ ತಂಡವನ್ನು ರಚಿಸಿದ ಎಸ್‌ಕೆಎಂ

ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಐವರು ಸದಸ್ಯರ ಸಮಿತಿಯನ್ನು ಈಗಾಗಲೇ ರಚಿಸಿದೆ. ಉತ್ತರ ಪ್ರದೇಶದ ಯುಧವೀರ್ ಸಿಂಗ್, ಸಂಸದ ಶಿವಕುಮಾರ್ ಕಾಕ್ಕಾ, ಪಂಜಾಬಿನ ಬಲ್ಬೀರ್ ರಾಜೇವಾಲ್ , ಮಹಾರಾಷ್ಟ್ರದ ಅಶೋಕ್ ಧಾವಲೆ, ಹರಿಯಾಣದ ಗುರ್ನಾಮ್ ಸಿಂಗ್ ಚಧುನಿ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ರೈತ ಸಂಘದ ಪರವಾಗಿ ಸರ್ಕಾರದೊಂದಿಗೆ ಈ ಸಮಿತಿಯು ಮಾತುಕತೆ ನಡೆಸಲಿದೆ.

ಸಂಯುಕ್ತ ಕಿಸಾನ್ ಮೋರ್ಚಾದ ಹೊಸ ಸಮಿತಿ ಕೆಲಸ ಏನು?:

* ಕೆಲವು ರೈತರ ಮನವಿಗೆ ವೈಯಕ್ತಿಕವಾಗಿ ಸ್ಪಂದಿಸುವುದರ ಕೇಂದ್ರ ಸರ್ಕಾರವು ರೈತರಲ್ಲಿ ಒಡಕು ಮೂಡಿಸುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ

* ಸಂಯುಕ್ತ ಕಿಸಾನ್ ಮೋರ್ಚಾ ಈಗ ಐವರು ಸದಸ್ಯರ ಸಮಿತಿಯನ್ನು ರಚಿಸಿದೆ. ಕೇಂದ್ರ ಸರ್ಕಾರವು ಔಪಚಾರಿಕ ಮಾತುಕತೆಗೆ ಈ ಪೈಕಿ ಯಾರನ್ನಾದರೂ ಸಂಪರ್ಸಿಸಬಹುದು.

* ಕೇಂದ್ರ ಸರ್ಕಾರವು ಸಂಯುಕ್ತ ಕಿಸಾನ್ ಮೋರ್ಚಾವನ್ನು ಚರ್ಚೆಗೆ ಆಹ್ವಾನಿಸಿದರೆ, ಆಗ ಸಮಿತಿಯ ಈ ಐವರು ಸದಸ್ಯರು ರೈತ ಸಂಘವನ್ನು ಪ್ರತಿನಿಧಿಸುತ್ತಾರೆ. ರೈತರ ಪರವಾಗಿ ಕೇಂದ್ರದ ಜೊತೆಗೆ ಚರ್ಚೆ ನಡೆಸುತ್ತಾರೆ.

* ಕೇಂದ್ರ ಸರ್ಕಾರದೊಂದಿಗಿನ ಸಭೆಯ ನಂತರದಲ್ಲಿ ಈ ಐವರು ಸದಸ್ಯರ ಸಮಿತಿಯು ರೈತ ಸಂಘಟನೆಗಳ ಸಭೆಯನ್ನು ನಡೆಸಲಿದ್ದು, ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ.

ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಸರ್ಕಾರ

ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಸರ್ಕಾರ

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ರದ್ಧತಿ ಮಸೂದೆಯನ್ನು ಸಂಸತ್ತಿನ ಅಧಿವೇಶನದ ಮೊದಲ ದಿನವೇ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ. ಹೊಸ ಮಸೂದೆಯ ಮೇಲೆ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದು ಕುಳಿತಿದ್ದವು. ಇದರ ಹೊರತಾಗಿಯೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ನವೆಂಬರ್ 29ರಂದು ಕೃಷಿ ಕಾಯ್ದೆಗಳ ರದ್ದತಿ ಮಸೂದೆ, 2021 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಧ್ವನಿಮತದ ಮೂಲಕ ಕೇಂದ್ರ ಸರ್ಕಾರವು ಮಸೂದೆಯನ್ನು ಅಂಗೀಕರಿಸಿದೆ. ತದನಂತರ ರಾಜ್ಯಸಭೆಯಲ್ಲೂ ಯಾವುದೇ ರೀತಿ ಚರ್ಚೆಯಿಲ್ಲದೇ ಅಂಗೀಕರಿಸಲಾಗಿತ್ತು.

ವಿವಾದಿತ ಕೃಷಿ ಕಾಯ್ದೆಗಳು ಮತ್ತು ರೈತ ಆಂದೋಲನ

ವಿವಾದಿತ ಕೃಷಿ ಕಾಯ್ದೆಗಳು ಮತ್ತು ರೈತ ಆಂದೋಲನ

ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020, (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಅನ್ನು ರದ್ದುಗೊಳಿಸುವುದಕ್ಕಾಗಿ ಕೃಷಿ ಕಾಯ್ದೆ ರದ್ಧತಿ 2021ರ ಮಸೂದೆಯನ್ನು ರಚಿಸಲಾಗಿತ್ತು. ಈ ಹಿಂದೆ ನವೆಂಬರ್ 24ರಂದು ಈ ಸಂಬಂಧ ಕೇಂದ್ರ ಸಂಪುಟದ ಅನುಮೋದನೆಯನ್ನು ಪಡೆದುಕೊಳ್ಳಲಾಗಿತ್ತು.

ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ವಿವಿಧ ರೈತ ಸಂಘಗಳ ಆಶ್ರಯದಲ್ಲಿ ಸಾವಿರಾರು ರೈತರು ಕಳೆದ 2020ರ ನವೆಂಬರ್ 26 ರಿಂದ ದೆಹಲಿಯ ಘಾಜಿಪುರ, ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಮೇಲೆ ಖಾಸಗೀಕರಣವನ್ನು ಹೇರುತ್ತಿರುವುದಕ್ಕೆ ಹಾಗೂ ಕಾರ್ಪೊರೇಟ್‌ಗಳ ಪರ ಒಲವು ಹೊಂದಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದಿರುವ ಹಾಗೂ ಈಗಲೂ ಮುಂದುವರಿದಿರುವ ರೈತರ ಆಂದೋಲಯದಲ್ಲಿ 700ಕ್ಕೂ ಹೆಚ್ಚು ರೈತರು ಪ್ರಾಣಬಿಟ್ಟಿದ್ದರು ಎಂದು ರೈತ ಮುಖಂಡರು ಹೇಳಿದ್ದು, ಎಲ್ಲರ ಕುಟುಂಬಕ್ಕೂ ಪರಿಹಾರ ನೀಡುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+