8th Pay Commission: 8ನೇ ವೇತನ ಆಯೋಗ ರಚನೆಯೇ ಇಲ್ಲ?, ಬಿಗ್ ಅಪ್‌ಡೇಟ್
ನವದೆಹಲಿ, ಡಿಸೆಂಬರ್ 10: ಕೇಂದ್ರ ಸರ್ಕಾರಿ ನೌಕರರು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವಾಗ 8ನೇ ವೇತನ ಆಯೋಗ ರಚನೆ ಮಾಡಲಿದೆ? ಎಂದು ಕಾದು ಕುಳಿತಿದ್ದಾರೆ. 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ವೇತನ ಆಯೋಗ ರಚನೆ ಕುರಿತು ಘೋಷಣೆ ಮಾಡಬಹುದು ಎಂಬ ನೌಕರರ ಭರವಸೆ ಹುಸಿಯಾಗಿದೆ. ಆದರೆ ಈಗ ಆಯೋಗ ರಚನೆ ಕುರಿತು ಹೊಸ ಅಪ್‌ಡೇಟ್ ಸಿಗುತ್ತಿದೆ.
ಸುಮಾರು 1 ಕೋಟಿ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡಲಿದೆ. ಆಯೋಗದ ಶಿಫಾರಸಿನ ಅನ್ವಯ ವೇತನ, ಭತ್ಯೆ, ಪಿಂಚಣಿ ಏರಿಕೆಯಾಗಲಿದೆ ಎಂದು ಕಾಯುತ್ತಿದ್ದಾರೆ. ಆದರೆ ಸರ್ಕಾರ ಇನ್ನೂ ಸಹ 8ನೇ ವೇತನ ಆಯೋಗ ರಚನೆ ಕುರಿತು ಯಾವುದೇ ಘೋಷಣೆ ಮಾಡಿಲ್ಲ.

ಆಯೋಗ ರಚನೆಯೇ ಇಲ್ಲ: ಕೇಂದ್ರ ಸರ್ಕಾರ ಫೆಬ್ರವರಿ 2014ರಲ್ಲಿ 7ನೇ ವೇತನ ಆಯೋಗವನ್ನು ರಚನೆ ಮಾಡಿತ್ತು. ಜನವರಿ 1, 2016ರಂದು ಆಯೋಗದ ವರದಿ ಜಾರಿಗೆ ಬಂದಿತು. ಸದ್ಯ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಈ ಆಯೋಗದ ಶಿಫಾರಸಿನ ಅನ್ವಯ ವೇತನ, ಭತ್ಯೆ, ಪಿಂಚಣಿಗಳನ್ನು ಪಡೆಯುತ್ತಿದ್ದಾರೆ.
ಸಂಪ್ರದಾಯದಂತೆ 10 ವರ್ಷಕ್ಕೊಮ್ಮೆ ಸರ್ಕಾರ ವೇತನ ಆಯೋಗ ರಚನೆ ಮಾಡಬೇಕಿದೆ. 2025ರಲ್ಲಿ ವೇತನ ಆಯೋಗ ರಚನೆ ಘೋಷಣೆಯಾದರೆ 2026ರಲ್ಲಿ ಅದರ ವರದಿ ಜಾರಿಗೆ ಬರಲಿದೆ ಎಂಬುದು ಸರ್ಕಾರಿ ನೌಕರರ ನಿರೀಕ್ಷೆಯಾಗಿದೆ.
ಆದರೆ ಕೇಂದ್ರ ಸರ್ಕಾರ ವೇತನ ಆಯೋಗ ರಚನೆ ಸಂಪ್ರದಾಯ ಕೈ ಬಿಡಲಿದೆ. 8ನೇ ವೇತನ ಆಯೋಗ ರಚನೆ ಮಾಡುವುದಿಲ್ಲ ಎಂಬ ವರದಿಗಳು ಈಗಾಗಲೇ ಬರುತ್ತಿವೆ. ಇದಕ್ಕೆ ಬದಲಾಗಿ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ ಪರಿಷ್ಕರಣೆ ಮಾಡಲು ಸರ್ಕಾರ ಹೊಸ ಮಾನದಂಡಗಳನ್ನು ಜಾರಿಗೆ ತರಲಿದೆ.
ಎನ್‌ಡಿಟಿವಿ ವರದಿಯ ಪ್ರಕಾರ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚನೆ ಬದಲು ವೇತನ ಸಮಿತಿಯನ್ನು ರಚನೆ ಮಾಡಲಿದೆ. ಇದು ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ ಏರಿಕೆ ಕುರಿತು ಸರ್ಕಾರಕ್ಕೆ ವರದಿ ನೀಡಲಿದೆ. ಈ ವರದಿಯನ್ನು ಆಧರಿಸಿ ಸರ್ಕಾರ ಈ ಕುರಿತು ತೀರ್ಮಾನ ಮಾಡಲಿದೆ.
ಕೆಲವು ದಿನಗಳ ಹಿಂದೆ ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ 8ನೇ ವೇತನ ಆಯೋಗ ರಚನೆ ಮಾಡುವ ಕುರಿತು ಕೇಂದ್ರ ಸರ್ಕಾರ ತಕ್ಷಣ ತೀರ್ಮಾನ ಕೈಗೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪತ್ರವನ್ನು ಬರೆದಿದ್ದರು. ಈಗ ಶಿವ ಗೋಪಾಲ್ ಮಿಶ್ರಾ ಹೇಳಿಕೆಯನ್ನೇ ಉಲ್ಲೇಖಿಸಿ ವೇತನ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಎನ್‌ಡಿಟಿವಿ ವರದಿಯಲ್ಲಿ ಹೇಳಿದೆ.
ಎನ್‌ಡಿಎ 3.0 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಹ 8ನೇ ವೇತನ ಆಯೋಗ ರಚನೆಯ ಕುರಿತು ಯಾವುದೇ ಸುಳಿವು ನೀಡುತ್ತಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಈ ಕುರಿತು ಯಾವುದೇ ಉಲ್ಲೇಖವನ್ನು ಮಾಡಿರಲಿಲ್ಲ.
ಸದ್ಯ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ರಾಜ್ಯಸಭೆ ಕಲಾಪದಲ್ಲಿ ಹಲವು ಸದಸ್ಯರು 8ನೇ ವೇತನ ಆಯೋಗ ರಚನೆ ಕುರಿತು ಸರ್ಕಾರವನ್ನು ಪ್ರಶ್ನಿಸಿದ್ದರು. 2025-26ನೇ ಸಾಲಿನ ಬಜೆಟ್‌ನಲ್ಲಿ ವೇತನ ಆಯೋಗ ರಚನೆಯ ಪ್ರಸ್ತಾಪ ಇರಲಿದೆಯೇ? ಎಂದು ಕೇಳಿದ್ದರು.
ಈ ಕುರಿತು ಉತ್ತರ ನೀಡಿದ್ದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, "8ನೇ ವೇತನ ಆಯೋಗದ ರಚನೆಯ ಕುರಿತು ಪ್ರಸ್ತುತ ಯಾವುದೇ ಪ್ರಸ್ತಾವನೆ ಪರಿಗಣನೆಯಲ್ಲಿ ಇಲ್ಲ" ಎಂದು ಸ್ಪಷ್ಟಪಡಿಸಿದ್ದರು. ಈ ಮೂಲಕ ಆಯೋಗ ರಚನೆ ಇನ್ನಷ್ಟು ವಿಳಂಬವಾಗಲಿದೆ ಎಂಬ ಸುಳಿವು ಕೊಟ್ಟಿದ್ದರು.
ಆದರೆ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು 2025-26ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ 8ನೇ ವೇತನ ಆಯೋಗ ರಚನೆ ಕುರಿತು ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಅಲ್ಲದೇ ಹಲವು ಕಾರ್ಮಿಕ ಸಂಘಟನೆಗಳು ಈ ಕುರಿತು ಹಣಕಾಸು ಸಚಿವಾಲಯಕ್ಕೆ ಮನವಿಗಳನ್ನು ಸಲ್ಲಿಸುತ್ತೇವೆ ಇವೆ.












Click it and Unblock the Notifications