CBSE 12ನೇ ತರಗತಿ ಫಲಿತಾಂಶ ಶೀಘ್ರದಲ್ಲೇ ಪ್ರಕಟ; ಡಿಜಿಲಾಕರ್‌ನಲ್ಲಿ ರಿಸಲ್ಟ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ನವದೆಹಲಿ: ಕೇಂದ್ರೀಯ ಫ್ರೌಡ ಶಿಕ್ಷಣ ಮಂಡಳಿಯ (CBSE) 12ನೇ ತರಗತಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಸಿಹಿಸುದ್ದಿ ಸಿಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಸಿಬಿಎಸ್‌ಇ ಮಂಡಳಿಯು ಇದೇ ವಾರಾಂತ್ಯದಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ 12ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಮೌಲ್ಯಮಾಪನ ಪ್ರಕ್ರಿಯೆಗಳು ಬಹುತೇಕ ಮುಕ್ತಾಯ ಹಂತ ತಲುಪಿದ್ದು, ಫಲಿತಾಂಶ ಪ್ರಕಟಣೆಗೆ ಅಂತಿಮ ಸಿದ್ಧತೆಗಳು ನಡೆಯುತ್ತಿದೆ.
ಫಲಿತಾಂಶ ಪ್ರಕಟವಾದ ತಕ್ಷಣ ವಿದ್ಯಾರ್ಥಿಗಳು ಮತ್ತು ಪೋಷಕರು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ಗಳಾದ cbse.gov.in, cbseresults.nic.in ಅಥವಾ results.cbse.nic.in ಗೆ ಭೇಟಿ ನೀಡಿ ತಮ್ಮ ಅಂಕಗಳನ್ನು ಪರಿಶೀಲಿಸಬಹುದು. ಆದರೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಎಲ್ಲರೂ ವೆಬ್‌ಸೈಟ್‌ಗೆ ಭೇಟಿ ನೀಡುವ ಕಾರಣಕ್ಕೆ ಹೆಚ್ಚಿನ ಟ್ರಾಫಿಕ್ ಕಾರಣಕ್ಕಾಗಿ ಸರ್ವರ್ ಡೌನ್ ಆಗುವ ಸಮಸ್ಯೆ ಎದುರಾಗುವುದು ಎಲ್ಲರಿಗೂ ತಿಳಿದಿದೆ. ಇಂತಹ ಸಮಸ್ಯೆಯನ್ನು ತಪ್ಪಿಸಲು ಪರೀಕ್ಷಾ ಮಂಡಳಿಯು ಈ ಬಾರಿ ಪರ್ಯಾಯ ಮಾರ್ಗವಾಗಿ ಟಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ ಡಿಜಿಲಾಕರ್ ಮತ್ತು ಉಮಂಗ್ ಆ್ಯಪ್ ಮೂಲಕ ಅತ್ಯಂತ ಸುಲಭವಾಗಿ ಹಾಗೂ ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ಫಲಿತಾಂಶವನ್ನೂ ನೋಡಬಹುದು.

ಡಿಜಿಲಾಕರ್ (DigiLocker) ಮೂಲಕ ಫಲಿತಾಂಶ ಪರಿಶೀಲಿಸುವ ವಿಧಾನ
1. ಮೊದಲು ಮೊಬೈಲ್‌ನಲ್ಲಿ ಡಿಜಿಲಾಕರ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ digilocker.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
2. ನಂತರ ಆಧಾರ್ ಸಂಖ್ಯೆ ಬಳಸಿ ಲಾಗಿನ್ ಆಗಿ
3. ಮುಖಪುಟದಲ್ಲಿ ಕಾಣುವ ʼEducation' ವಿಭಾಗದಲ್ಲಿ CBSE ಆಯ್ಕೆಮಾಡಿ.
4. ಅಲ್ಲಿ ಕಾಣುವ 'Class 12 Passing Certificate / Marksheet' ಮೇಲೆ ಕ್ಲಿಕ್ ಮಾಡಿ
5. ನಂತರ ನಿಮ್ಮ ರೋಲ್ ನಂಬರ್, ಶಾಲೆಯ ಕೋಡ್ ಮತ್ತು ಅಡ್ಮಿಟ್ ಕಾರ್ಡ್ ಐಡಿ ನಮೂದಿಸಿ 'Get Document' ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಡಿಜಿಟಲ್ ಅಂಕಪಟ್ಟಿ ಸಿಗುತ್ತದೆ.
6. ಕೊನೆಯಲ್ಲಿ ಅಂಕಪಟ್ಟಿ ಸರಿಯಾಗಿ ಪರಿಶೀಲಿಸಿ, ಅದನ್ನು ನೀವು ಪಿಡಿಎಫ್ (PDF) ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳು ಫಲಿತಾಂಶವನ್ನು ತ್ವರಿತವಾಗಿ ಪರಿಶೀಲಿಸಲು ತಮ್ಮ ಪ್ರವೇಶ ಪತ್ರ (Admit Card) ಅಥವಾ ರೋಲ್ ನಂಬರ್ ಅನ್ನು ಈಗಲೇ ಸಿದ್ಧವಾಗಿಟ್ಟುಕೊಳ್ಳುವುದು ಸೂಕ್ತ. ಸಿಬಿಎಸ್‌ಇ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ಉತ್ತೀರ್ಣರಾಗಲು ಪ್ರತಿ ವಿಷಯದಲ್ಲೂ ಮತ್ತು ಒಟ್ಟಾರೆಯಾಗಿ ಕನಿಷ್ಠ ಶೇ. 33 ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಮಂಡಳಿಯು ಫಲಿತಾಂಶ ಪ್ರಕಟಿಸುವ ನಿಖರ ದಿನಾಂಕ ಮತ್ತು ಸಮಯವನ್ನು ಶೀಘ್ರದಲ್ಲೇ ತನ್ನ ಅಧಿಕೃತ ಜಾಲತಾಣಗಳು ಹಾಗೂ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಅಧಿಕೃತವಾಗಿ ಪ್ರಕಟಿಸಲಿದೆ.














Click it and Unblock the Notifications