ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: 7 ರಾಜ್ಯಗಳ 50 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳಿಂದ ಶೋಧ
ಸಿಬಿಐ ಅಧಿಕಾರಿಗಳು ಮಂಗಳವಾರ ಹಿಮಾಚಲ ಪ್ರದೇಶದ ಕಾಂಗ್ರಾ, ಉನಾ, ಮಂಡಿ, ಹಮೀರ್‌ಪುರ, ಕುಲು, ಶಿಮ್ಲಾ ಹಾಗೂ ಸಿರ್ಮೂರ್ ಜಿಲ್ಲೆಗಳಲ್ಲಿ ಶೋಧ ನಡೆಸಿದ್ದಾರೆ.
ಶಿಮ್ಲಾ/ದಿಲ್ಲಿ, ಜನವರಿ31: ಹಿಮಾಚಲ ಪ್ರದೇಶದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಂಗಳವಾರ ಏಳು ರಾಜ್ಯಗಳ 50 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಕಳೆದ ವರ್ಷದ ಮಾರ್ಚ್‌ನಲ್ಲಿ ನಡೆದ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಎರಡು ಪ್ರಕರಣಗಳು ದಾಖಲಾಗಿವೆ. ಅವುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ದೇಶಾದ್ಯಂತ ಶೋಧ ನಡೆಸಿದ್ದಾರೆ.
ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆಯನ್ನು ನಡೆಸುವಂತೆ ಸಿಬಿಐಗೆ ಹಿಮಾಚಲ ಪ್ರದೇಶದ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಅದರಂತೆ ಸಿಬಿಐ ನವೆಂಬರ್ 30, 2022ರಂದು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿ, ತನಿಖೆ ಕೈಗೆತ್ತಿಕೊಂಡಿತ್ತು. ಅದರ ಭಾಗವಾಗಿಯೇ ಸಿಬಿಐ ಅಧಿಕಾರಿಗಳು ಹಿಮಾಚಲ ಪ್ರದೇಶ, ಬಿಹಾರ್, ಉತ್ತರಾಖಂಡ, ಪಂಜಾಬ್, ಉತ್ತರ ಪ್ರದೇಶ ಹಾಗೂ ಹರಿಯಾಣದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಮಾರ್ಚ್ 27, 2022ರಂದು ಹಿಮಾಚಲ ಪ್ರದೇಶ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆದಿತ್ತು. ಈ ವೇಳೆ ಹಲವು ಮಧ್ಯವರ್ತಿಗಳ ಕಾರಣದಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಖಚಿತವಾಗುತ್ತಿದ್ದಂತೆ ಮೇ 5, 2022ರಂದು ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ಪ್ರಕರಣದ ತನಿಖೆಗಾಗಿ ಮೇ 7ರಂದು ಹಿಮಾಚಲ ಪ್ರದೇಶ ಪೊಲೀಸ್ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಅದಾದ ಬಳಿಕ ರಾಜ್ಯ ಸರ್ಕಾರ ಸಿಬಿಐಗೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವಹಿಸಿತ್ತು.

ಯಾವ್ಯಾವ ಸ್ಥಳಗಳಲ್ಲಿ ಶೋಧ?
ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು ಮಂಗಳವಾರ ಹಿಮಾಚಲ ಪ್ರದೇಶದ ಕಾಂಗ್ರಾ, ಉನಾ, ಮಂಡಿ, ಹಮೀರ್‌ಪುರ, ಕುಲು, ಶಿಮ್ಲಾ ಹಾಗೂ ಸಿರ್ಮೂರ್ ಜಿಲ್ಲೆಗಳಲ್ಲಿ ಶೋಧ ನಡೆಸಿದ್ದಾರೆ. ಜೊತೆಗೆ ಬಿಹಾರದ ನಳಂದಾ, ಸಮಸ್ತಿಪುರ್, ಮುಂಗೇರ್, ಲಖಿಸರಾಯ್, ಪಾಟ್ನಾ ಮತ್ತು ನವಾಡಾಗಳಲ್ಲಿಯೂ ಸರ್ಚ್ ಆಪರೇಷನ್ ಕೈಗೊಂಡಿದ್ದು, ಉತ್ತರಾಖಂಡ್‌ನ ಹರಿದ್ವಾರ ಮತ್ತು ಡೆಹ್ರಾಡೂನ್, ಪಂಜಾಬ್‌ನ ಪಠಾಣ್‌ಕೋಟ್ ಹಾಗೂ ಜಾನ್‌ಪುರದಲ್ಲಿ ಶೋಧ ನಡೆಸಿದ್ದಾರೆ. ಉತ್ತರ ಪ್ರದೇಶದ ವಾರಣಾಸಿ, ಗಾಜಿಪುರ ಮತ್ತು ಲಖನೌ ಹಾಗೂ ಹರಿಯಾಣದ ರೇವರಿ ಮತ್ತು ದೆಹಲಿಯಲ್ಲಿ ಕೂಡ ದಾಳಿ ನಡೆದಿದೆ ಎಂದು ಸಿಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬಿಹಾರ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ದೆಹಲಿ, ಹರಿಯಾಣ ಮತ್ತು ಪಂಜಾಬ್ ಮೂಲದ ಮಧ್ಯವರ್ತಿಗಳು ಮಾಪಿಯಾ ರೀತಿ ಕಾರ್ಯನಿರ್ವಹಿಸುತ್ತಿದ್ದು, ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಲು ಸಂಘಟಿತ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಕಾಂಗ್ರಾ ಜಿಲ್ಲೆಯ ಗಗ್ಗಲ್, ಸೋಲನ್ ಜಿಲ್ಲೆಯ ಅರ್ಕಿ ಮತ್ತು ಶಿಮ್ಲಾ ಜಿಲ್ಲೆಯ ಭರಾರಿಯ ಸಿಐಡಿ ಪೊಲೀಸ್ ಠಾಣೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ.
2022 ಮಾರ್ಚ್ 27ರಂದು ನಡೆದಿದ್ದ ಪರೀಕ್ಷೆ!
ಹಿಮಾಚಲ ಪ್ರದೇಶ ಪೊಲೀಸ್‌ನ 1,334 ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. 1,87,476 ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದರು. ಅದರಲ್ಲಿ ದೈಹಿಕ ಸಹಿಷ್ಣುತೆ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ 75,803 ಜನ ಲಿಖಿತ ಪರೀಕ್ಷೆಗೆ ಅರ್ಹರಾಗಿದ್ದರು. ಮಾರ್ಚ್ 27ರಂದು 11 ಜಿಲ್ಲೆಗಳ 81 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಇದರಲ್ಲಿ 26,346 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದರು. ಆದರೆ, ಬಳಿಕ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು ಎಂಬುದು ಗೊತ್ತಾದ ಬಳಿಕ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ, ಪ್ರಿಂಟಿಂಗ್ ಪ್ರೆಸ್ ಮಾಲೀಕರು ಮತ್ತು ಸಿಬ್ಬಂದಿ, ಕೋಚಿಂಗ್ ಸೆಂಟರ್ ಮಾಲೀಕರು, ಕಿಂಗ್‌ಪಿನ್‌ಗಳು, ಏಜೆಂಟ್‌ಗಳು, ಅಭ್ಯರ್ಥಿಗಳ ಕುಟುಂಬ ಸದಸ್ಯರು ಮತ್ತು ಅಭ್ಯರ್ಥಿಗಳು ಸೇರಿ ಸುಮಾರು 253 ಜನರನ್ನು ಬಂಧಿಸಿತ್ತು. 150ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಎಸ್‌ಐಟಿ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು.
ಸರ್ಕಾರಿ ಅಧಿಕಾರಿಗಳೇ ಶಾಮೀಲು!
ಹಿಮಾಚಲ ಪ್ರದೇಶ ಪೊಲೀಸ್ ತನಿಖೆಯ ಪ್ರಕಾರ, ಪ್ರಶ್ನೆ ಪತ್ರಿಕೆಯ ಸೋರಿಕೆಯಲ್ಲಿ ಅನೇಕ ಗ್ಯಾಂಗ್‌ಗಳು ಭಾಗಿಯಾಗಿದ್ದಾರೆ. ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ ಕಿಂಗ್‌ಪಿನ್‌ಗಳು ಮತ್ತು ಏಜೆಂಟ್‌ಗಳಲ್ಲಿ ಹಲವರು ಸಾಮಾನ್ಯ ಅಪರಾಧಿಗಳಾಗಿದ್ದರೆ, ಉಳಿದವರು ರೈಲ್ವೆ ಮತ್ತು ಆದಾಯ ತೆರಿಗೆಯಂತಹ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಇಂಜಿನಿಯರ್‌ಗಳು ಸಿಬ್ಬಂದಿಗಳಾಗಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications