ಎನ್ಡಿಟಿವಿ ಸಂಸ್ಥಾಪಕ ಪ್ರಣಯ್ ರಾಯ್ ಮನೆ ಮೇಲೆ ಸಿಬಿಐ ದಾಳಿ
ನವದೆಹಲಿ, ಜೂನ್ 5: ಎನ್ಡಿಟಿವಿ ಸಂಸ್ಥಾಪಕ ಹಾಗೂ ಕಾರ್ಯಾಕಾರಿ ಅಧ್ಯಕ್ಷ ಪ್ರಣಯ್ ರಾಯ್ ಮನೆ ಮೇಲೆ ಕೇಂದ್ರ ತನಿಖಾ ದಾಳಿ ಮಾಡಿದೆ.
ಬ್ಯಾಂಕ್ ಒಂದಕ್ಕೆ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ವಂಚನೆ ಎಸಗಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈ ದಾಳಿ ನಡೆಸಿದೆ. ಐಸಿಐಸಿಐ ಬ್ಯಾಂಕಿಗೆ ಇವರಿಬ್ಬರು ಸೇರಿ 48 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎನ್ನಲಾಗಿದೆ. ದೆಹಲಿ ಮತ್ತು ಡೆಗ್ರಾಡೂನ್ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಇನ್ನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಣಯ್ ರಾಯ್, ರಾಧಿಕಾ ರಾಯ್, ಒಂದು ಖಾಸಗೀ ಕಂಪೆನಿ ಹಾಗೂ ಹಲವರ ವಿರುದ್ಧ ಎಫ್ಐಆರ್ ದಾಖಲಿಸಿದೆ.

2015ರ ನವೆಂಬರಿನಲ್ಲಿ ಜಾರಿ ನಿರ್ದೇಶನಾಲಯ ಎನ್ಡಿಟಿವಿಗೆ 2,030 ಕೋಟಿ ರೂಪಾಯಿಗಳ ನೊಟೀಸ್ ನೀಡಿತ್ತು. ಚಾನೆಲಿನ ವಿದೇಶಿ ಘಟಕಗಳ ಹೂಡಿಕೆಯಲ್ಲಿ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಎಫ್ಇಎಮ್ಎ) ಉಲ್ಲಂಘಿಸಿಲಾಗಿದೆ ಎಂಬ ಪ್ರಕರಣದಲ್ಲಿ ಈ ನೊಟೀಸ್ ನೀಡಿತ್ತು.
ಇನ್ನು ಕೆಲವು ತಿಂಗಳ ಹಿಂದೆ ಜಾರಿ ನಿರ್ದೇಶನಾಲಯ ತನಗೆ ನೀಡಿದ ನೊಟೀಸನ್ನು ರದ್ದು ಮಾಡಬೇಕೆಂದು ಎನ್ಡಿಟಿವಿ ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಕೇಳಿಕೊಂಡಿತ್ತು. ಆದರೆ ಈ ಮನವಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ತಿರಸ್ಕರಿಸಿತ್ತು.
ದೇಶಕ್ಕಾಗಿ ಹೋರಾಡುತ್ತೇವೆ - ಎನ್ಡಿಟಿವಿ
ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ಡಿಟಿವಿ, "ಅದೇ ಹಳೆಯ ಸುಳ್ಳು ಆರೋಪಗಳನ್ನು ಇಟ್ಟುಕೊಂಡು ಎನ್ಡಿಟಿವಿ ಮತ್ತು ಚಾನಲಿನ ಪ್ರಾಯೋಜಕರ ಮೇಲೆ ಸಿಬಿಐ ಇಂದು ಮುಂಜಾನೆ ತನ್ನ ದೌರ್ಜನ್ಯ ಮುಂದುವರಿಸಿದೆ. ಹಲವು ತನಿಖಾ ಸಂಸ್ಥೆಗಳ ಈ ವಾಮಮಾರ್ಗದ ವಿರುದ್ಧ ಎನ್ಡಿಟಿವಿ ಮತ್ತು ಇದರ ಪ್ರಾಯೋಜಕರು ಹೋರಾಟ ನಡೆಸಲಿದ್ದಾರೆ. ಈ ರೀತಿಯ ದಾಳಿಗಳ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಕುಸಿಯಲು ಮತ್ತು ಮುಕ್ತ ವಾಕ್ ಸ್ವಾತಂತ್ರ್ಯ ಕಸಿಯಲು ಬಿಡುವುದಿಲ್ಲ," ಎಂದು ಹೇಳಿದೆ.
"ನಾವು ಈ ಸಂದರ್ಭದಲ್ಲಿ ಭಾರತದಲ್ಲಿರುವ ಸಂಸ್ಥೆಗಳನ್ನು ನಾಶ ಮಾಡಲು ಇಚ್ಚಿಸುತ್ತಿರುವವರಿಗೆ ಒಂದು ಸಂದೇಶ ನೀಡಲು ಇಷ್ಟ ಪಡುತ್ತೇವೆ. ಅದೇನೆಂದರೆ, ನಾವು ನಮ್ಮ ದೇಶಕ್ಕಾಗಿ ಹೋರಾಡುತ್ತೇವೆ ಮತ್ತು ಈ ರೀತಿಯ ಶಕ್ತಿಗಳನ್ನು ಹಿಮ್ಮೆಟ್ಟಿಸುತ್ತೇವೆ," ಎಂದು ಎನ್ಡಿಟಿವಿ ಸಿಬಿಐ ದಾಳಿಗೆ ಪ್ರತಿಕ್ರಿಯೆ ನೀಡಿದೆ.












Click it and Unblock the Notifications