ಸಿಬಿಐಗೆ ಬರಲಿದ್ದಾರೆಯೇ ನೂತನ ಮಹಿಳಾ ನಿರ್ದೇಶಕಿ?
ಬಹು ದಿನಗಳ ಬೇಡಿಕೆಯನ್ವಯ ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಮಹಿಳಾ ನಿರ್ದೇಶಕಿಯೊಬ್ಬರು ಆಯ್ಕೆಯಾಗುವ ಸಂದರ್ಭ ಒದಗಿಬಂದಿದ್ದು, ಹಿರಿಯ ಐಪಿಎಸ್ ಅಧಿಕಾರಿಯಾದ ಕುಮಾರಿ. ಅರ್ಚನಾ ರಾಮಸುಂದರಂ ಅವರು ಈ ಸ್ಥಾನಕ್ಕೆ ನೇಮಕವಾಗುವ ಸಾಧ್ಯತೆಗಳಿವೆ.
ನವದೆಹಲಿ, ಜನವರಿ 16: ಹಿರಿಯ ಐಪಿಎಸ್ ಮಹಿಳಾ ಅಧಿಕಾರಿಯಾದ ಕು. ಅರ್ಚನಾ ರಾಮಸುಂದರಂ ಅವರು, ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ನಿರ್ದೇಶಕರಾಗಿ ನೇಮಕಗೊಳ್ಳುವುದು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ನಿಯಮಗಳನುಸಾರ, ಸಿಬಿಐ ನಿರ್ದೇಶಕರನ್ನು ನೇಮಿಸುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ನ್ಯಾ. ಖೇಹರ್ ಸಿಂಗ್ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಇಂದು ಸಂಜೆ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ. ಈ ಬಗ್ಗೆ ಶೀಘ್ರ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.

ಕೆಲ ದಿನಗಳ ಹಿಂದೆ, ಈ ಪ್ರತಿಷ್ಠಿತ ಹುದ್ದೆಗೆ ಗುಜರಾತ್ ನ ಪೊಲೀಸ್ ಅಧಿಕಾರಿಯಾದ ಆರ್.ಕೆ. ಆಸ್ತಾನಾ ಅವರನ್ನು ನೇಮಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಹಾಗಾಗಿ, ಈ ನಿರ್ಧಾರದಿಂದ ಹಿಂದೆ ಸರಿದಿರುವ ಕೇಂದ್ರ ಸರ್ಕಾರ, ಇದೀಗ ಮತ್ತೊಮ್ಮೆ ಆ ನಿಟ್ಟಿನಲ್ಲಿ ಕಸರತ್ತು ನಡೆಸಿದೆ.
ಮಂಗಳವಾರ ಸಂಜೆ ವೇಳೆಗೆ, ಸ್ಪಷ್ಟ ಮಾಹಿತಿ ಲಭ್ಯವಾಗಬಹುದೆಂದು ನಿರೀಕ್ಷಿಸಲಾಗಿದೆ.
ಒನ್ ಇಂಡಿಯಾ ಕನ್ನಡಕ್ಕೆ ಅಭಿಪ್ರಾಯ ತಿಳಿಸಿ: ಸಿಬಿಐಗೆ ಮಹಿಳಾ ನಿರ್ದೇಶಕರೊಬ್ಬರ ನೇಮಕವಾಗಬೇಕು ಎಂದು ಹಲವಾರು ವರ್ಷಗಳ ಬೇಡಿಕೆಯಾಗಿತ್ತು. ಅದು ಈಗ ಕಾರ್ಯಗತವಾಗುವ ಹಂತಕ್ಕೆ ಬಂದಿದೆ. ಹೀಗೆ, ಹಲವಾರು ವರ್ಷಗಳಿಂದ ಮಹಿಳೆಯರ ನೇತೃತ್ವ ಕಾಣದ ಇಲಾಖೆಗಳಾವುದಾದರೂ ಇದ್ದರೆ ನಮಗೆ ಕೆಳಗಿನ ಕಮೆಂಟ್ ಜಾಗದಲ್ಲಿ ಬರೆದು ತಿಳಿಸಿ.












Click it and Unblock the Notifications