ಪೊಲೀಸ್ ನಿರ್ದೇಶಕರ ಕಚೇರಿಯ ಎದುರೇ ಹಾರಿತು ಪಾಕ್ ಧ್ವಜ!
ಶ್ರೀನಗರ, ಏ 16 (ಪಿಟಿಐ): ಕೇಂದ್ರದಲ್ಲಿ ಮತ್ತು ಜಮ್ಮು ಕಾಶ್ಮೀರದಲ್ಲಿ ಸರಕಾರ ಬದಲಾದರೂ ಪ್ರತ್ಯೇಕತಾವಾದಿಗಳ ದರ್ಪ, ಉದ್ದಟತನ ಕಮ್ಮಿಯಾಗಲಿಲ್ಲ. ಭಾರತದ ನೆಲದಲ್ಲಿ ದೇಶದ್ರೋಹಿಗಳ ಪಾಕ್ ಪ್ರೇಮ ಮುಂದುವರಿಯುತ್ತಲೇ ಇದೆ.
ಶ್ರೀನಗರದಲ್ಲಿ ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂ ಬೆಂಬಲಿಗರು ಗುರುವಾರ ನಡೆದ ಸಭೆಯಲ್ಲಿ (ಏ 16) ಮತ್ತೆ ಪಾಕ್ ಪರ ಘೋಷಣೆ ಕೂಗಿ ಪೊಲೀಸ್ ಮತ್ತು ಸರಕಾರೀ ವ್ಯವಸ್ಥೆಗೆ ಸವಾಲೆಸೆದಿದ್ದಾರೆ.
ಕೆಲವು ತಿಂಗಳ ಬಳಿಕೆ ಕಾಶ್ಮೀರ ಕಣಿವೆಗೆ ಆಗಮಿಸುತ್ತಿರುವ ಹುರಿಯತ್ ಕಾನ್ಫರೆನ್ಸ್ ಮುಖಂಡ ಸಯ್ಯದ್ ಆಲಿ ಶಾ ಗಿಲಾನಿಯನ್ನು ಸ್ವಾಗತಿಸುವ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಮೆರವಣಿಗೆಯ ಮೂಲಕ ಸಭೆಗೆ ಆಗಮಿಸಿದ ಮಸರತ್ ಆಲಂ ಬೆಂಬಲಿಗರು ಶ್ರೀನಗರ ಪೊಲೀಸ್ ನಿರ್ದೇಶಕರ ಕಚೇರಿಯ ಎದುರೇ ಪಾಕ್ ಧ್ವಜ ಹಾರಿಸಿ, ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದು ಈಗ ಚರ್ಚೆಗೆ ಗುರಿಯಾಗಿದೆ.
ಘಟನೆಯ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ನಂತರ ಪೊಲೀಸರು ಗಿಲಾನಿ, ಮಸರತ್ ಆಲಂ ಮತ್ತು ಸಭೆಯಲ್ಲಿ ಭಾಗವಹಿಸಿದ್ದ ಇತರ ಪ್ರತ್ಯೇಕತಾವಾದಿ ಮುಖಂಡರ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ.
44 ವರ್ಷದ ಮಸರತ್ ಆಲಂ ಕಾಶ್ಮೀರ ಕಣಿವೆಯಲ್ಲಿ (2010ರಲ್ಲಿ) ಪೊಲೀಸ್ ಮತ್ತು ಮಿಲಿಟರಿ ವಿರುದ್ದ ನಡೆದ ಹೋರಾಟದ ನೇತೃತ್ವದ ವಹಿಸಿಕೊಂಡಿದ್ದ. ಈ ಹೋರಾಟದಲ್ಲಿ ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ಇದಾದ ನಂತರ ಮಸರತ್ ಆಲಂನನ್ನು ಪೊಲೀಸರು ಬಂಧಿಸಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ನಂತರ ಬಾರಾಮುಲ್ಲಾ ಪೊಲೀಸ್ ಠಾಣೆಯಿಂದ ಈತನನ್ನು ಬಿಡುಗಡೆ ಮಾಡಲಾಗಿತ್ತು.
ಇನ್ನೊಬ್ಬ ನಾಯಕಿಯ ಹೇಳಿಕೆ : ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಲ್ಲ. ಅವಕಾಶ ಸಿಕ್ಕರೆ ಶ್ರೀನಗರದಲ್ಲಿ ಮತ್ತೆ ಮತ್ತೆ ಪಾಕ್ ಧ್ವಜ ಹಾರಿಸಿಸುತ್ತೇನೆಂದು ಪ್ರತ್ಯೇಕತಾವಾದಿ ನಾಯಕಿ ಮತ್ತು ದುಕ್ತರನ್ - ಎ - ಮಿಲ್ಲತ್ ಸಂಘಟನೆಯ ಆಸಿಯ ಅಂದ್ರಾಬಿ ವಿವಾದಕಾರಿ ಹೇಳಿಕೆ ನೀಡಿದ್ದಾರೆ.
ರಾಜನಾಥ್ ಸಿಂಗ್ ಹೇಳಿಕೆ: ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯ ಜೊತೆ ಮಾತುಕತೆ ನಡೆಸಿದ್ಡೇನೆ. ಸಾಧ್ಯವಾದ ಎಲ್ಲಾ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ದೇಶದ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.












Click it and Unblock the Notifications