ರಾಹುಲ್ ಅವರ ಭಾಷಣ ಬರೆದವನು ನಿಜಕ್ಕೂ ಮಹಾನ್!
ಬೆಂಗಳೂರು, ಅಕ್ಟೋಬರ್ 12 : "2025ರೊಳಗೆ ನರೇಂದ್ರ ಮೋದಿಯವರು ಗುಜರಾತಿನ ಪ್ರತಿಯೊಬ್ಬನೂ ಚಂದ್ರನ ಮೇಲೆ ಹೋಗಲು ರಾಕೆಟ್ ನೀಡುತ್ತಾರೆ, 2028ರೊಳಗೆ ಗುಜರಾತಿನ ಎಲ್ಲ ನಾಗರಿಕರಿಗೆ ಚಂದ್ರನ ಮೇಲೆ ಒಂದು ಮನೆಯನ್ನು ನಿರ್ಮಿಸಿಕೊಡುತ್ತಾರೆ ಮತ್ತು 2030ರೊಳಗೆ ಚಂದ್ರನನ್ನೇ ಭೂಮಿಯ ಮೇಲೆ ತರುತ್ತಾರೆ!"
ಹಿಂದಿ ಸಿನೆಮಾ ಸಂಭಾಷಣೆಕಾರರು ನಾಚುವಂತೆ ಇಂಥ ಪವರ್ ಫುಲ್ ಡೈಲಾಗುಗಳನ್ನು ಒಂದರ ಹಿಂದೊಂದರಂತೆ ಬಾರಿಸಿ ಕಿವಿಗಡಚಿಕ್ಕುವ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು. ಆದರೆ, ಅವರು ಈ ಮಾತುಗಳೇ ವಿಭಿನ್ನ ರೀತಿಯಲ್ಲಿ ವಿಶ್ಲೇಷಣೆಗೆ ಗುರಿಯಾಗಿ ಅವರಿಗೇ ಮುಳುವಾಗುತ್ತಿವೆ.
ಇದರರ್ಥ ಕಾಂಗ್ರೆಸ್ಸಿಗೆ ಕೂಡ 2025ರೊಳಗೆ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ ಎಂಬುದನ್ನು ರಾಹುಲ್ ಅವರೇ ಒಪ್ಪಿಕೊಂಡಂತೆ ಆಯಿತಲ್ಲ ಎಂದು ಟ್ವಿಟ್ಟಿಗರೊಬ್ಬರು ರಾಹುಲ್ ಗಾಂಧಿ ಅವರ ಕಾಲೆಳೆದಿದ್ದಾರೆ. ರಾಹುಲ್ ಗಾಂಧಿ ಅವರು ಸಾರ್ವಜನಿಕವಾಗಿ ಆಡುತ್ತಿರುವ ಪ್ರತಿಯೊಂದು ಮಾತೂ ತಮಾಷೆಗೆ ಗ್ರಾಸವಾಗುತ್ತಿರುವುದು ಮಾತ್ರ ನಿಜಕ್ಕೂ ಶೋಚನೀಯ ಸಂಗತಿ.

ರಾಹುಲ್ ಸೋಲು ಒಪ್ಪಿಕೊಂಡಂತಾಯಿತಲ್ಲ!
ರಾಹುಲ್ ಗಾಂಧಿಯವರೆ, ನಿಮ್ಮ ಮಾತನ್ನೇ ನಂಬುವುದಾದರೆ, 2030 ಬರುವವರೆಗೆ ನಿಮಗೆ ಕೇಂದ್ರದಲ್ಲಿ ಮುಂದೆ ಸರಕಾರ ರಚಿಸಲು ಅವಕಾಶವೇ ಸಿಗುವುದಿಲ್ಲ ಎಂಬುದನ್ನು ಒಪ್ಪಿಕೊಂಡಂತಾಯಿತಲ್ಲ, ಇದಕ್ಕೆ ಏನಂತೀರಿ? ಎಂದು ಮೋದಿಯವರ ಅಭಿಮಾನಿಯೊಬ್ಬರು ಕಿಚಾಯಿಸಿದ್ದಾರೆ.

ವದ್ರಾ ಕೃಷಿ ಮಾಡ್ತಾರೆ, ರಾಹುಲ್ ಆಲೂ ಫ್ಯಾಕ್ಟರಿ ಹಾಕ್ತಾರೆ
ಮೋದಿಯವರು ಚಂದ್ರನನ್ನು ಭೂಮಿಗೆ ತರುತ್ತಿದ್ದಂತೆ ಅದನ್ನೂ ವದ್ರಾ ಸಾಹೇಬರು ಮಾರಾಟ ಮಾಡಿಬಿಡುತ್ತಾರೆ ಅಥವಾ ವದ್ರಾ ಅವರು ಅಲ್ಲಿ ಕೃಷಿ ಮಾಡಲು ಆರಂಭಿಸುತ್ತಾರೆ ಮತ್ತು ರಾಹುಲ್ ಅವರು ಆ ಜಮೀನಿನಲ್ಲಿ ಆಲೂಗಡ್ಡೆಯ ಫ್ಯಾಕ್ಟರಿ ಸ್ಥಾಪಿಸುತ್ತಾರೆ ಎಂದು ಮತ್ತೊಬ್ಬರು ರಿವರ್ಸ್ ಸ್ವಿಂಗ್ ಎಸೆದಿದ್ದಾರೆ.

ಗುಜರಾತಿಗೆ ಹಾಲನ್ನು ನೀಡಿದವರು ಮಹಿಳೆಯರು
ರಾಹುಲ್ ಸರ್ ಜೀ, ಮೋದಿಜಿಯವರ ಮಾತನ್ನು ಅತ್ಲಾಗಿಡಿ, ಈ ಮಾತಿನ ಅರ್ಥವೇನೆಂದು ಹೇಳಿರಿ ಎಂದು ಮಗದೊಬ್ಬರು ಪ್ರಶ್ನಿಸಿದ್ದಾರೆ. ರಾಹುಲ್ ಅವರ ಆ ಮಾತು ಯಾವುದು? ಇಲ್ಲಿದೆ ಓದಿ... "ಗುಜರಾತನ್ನು ಯಾರಾದರೂ ನಿಲ್ಲಿಸಿದ್ದರೆ, ಗುಜರಾತಿಗೆ ಯಾರಾದರೂ ಅಮೂಲ್ ನೀಡಿದ್ದರೆ, ಗುಜರಾತಿಗೆ ಯಾರಾದರೂ ಹಾಲು ನೀಡಿದ್ದರೆ ಅವರು ಇಲ್ಲಿದ್ದಾರೆ ನೋಡಿ ಗುಜರಾತಿನ ಮಹಿಳೆಯರು!"

ರಾಹುಲ್ ಭಾಷಣ ಬರೆಯುವವನು ನಿಜಕ್ಕೂ ಮಹಾನ್!
ರಾಹುಲ್ ಗಾಂಧಿಯವರು ಯಾಕೋ ಫುಲ್ ಫಾರ್ಮಿನಲ್ಲಿ ಇದ್ದಂಗೆ ಕಾಣುತ್ತದೆ. ಮೋದಿಯವರು ಏನು ಹೇಳುತ್ತಾರೆ, ಮುಂದೆ ಏನು ಮಾಡುತ್ತಾರೆ, ಚಂದ್ರನನ್ನು ತರುತ್ತಾರೋ ಬಿಡುತ್ತಾರೋ, ಆದರೆ, ಸೋನಿಯಾ ಮತ್ತು ರಾಹುಲ್ ಅವರು 2004ರಿಂದ 2014ರವರೆಗೆ ಕಾಂಗ್ರೆಸ್ಸನ್ನು ಪಾತಾಳಕ್ಕೆ ತೆಗೆದುಕೊಂಡು ಹೋಗಿದ್ದಾರೆ. ರಾಹುಲ್ ಅವರ ಭಾಷಣ ಬರೆಯುವವನು ನಿಜಕ್ಕೂ ಮಹಾನ್! ಎಂದಿದ್ದಾರೆ ಟ್ವಿಟ್ಟಿಗರೊಬ್ಬರು.

ಚಂದುಮಾಮಾನಾದರೂ ಖುಷಿಪಡಲಿ
ರಾಹುಲ್ ಬಾಬಾ ಅವರು ಮೋದಿಯವರು ಚಂದ್ರನನ್ನು ಭೂಮಿಗೆ ತರುತ್ತಾರಂತೇನೋ ಹೇಳಿಬಿಟ್ಟಿದ್ದಾರೆ. ಆದರೆ, ಅವರಿಗೆ ಈ ಮಾತಿನ ಅರ್ಥವಾದರೂ ಗೊತ್ತಿದೆಯಾ? ಏನೇ ಆಗಲಿ, ಚಂದ್ರನಲ್ಲಿಗೆ ಪ್ರತಿ ಗುಜರಾತಿಯನ್ನು ರಾಕೆಟ್ ಮೂಲಕ ಚಂದ್ರನಲ್ಲಿಗೆ ಕಳಿಸುವುದೇ ಆದರೆ, ನಾನು ರಾಹುಲ್ ಅವರನ್ನು ಚಂದ್ರನಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ನಿಮ್ಮನ್ನು ನೋಡಿ, ಚಂದುಮಾಮಾನಾದರೂ ಖುಷಿಪಡಲಿ ಎಂದಿದ್ದಾರೆ ಹರಿ ಎಂಬುವವರು.












Click it and Unblock the Notifications