ಕಣಿವೆಗೆ ಬಿದ್ದ ಬಸ್, 12 ಜನರ ದಾರುಣ ಸಾವು
ಮುಂಬೈ: ಮಹಾರಾಷ್ಟ್ರದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದು, ಬಸ್ (Bus Accident) ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 12 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ ಬಸ್‌ನಲ್ಲಿದ್ದ 28ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದೆ. ಇಂದು ಬೆಳಗಿನ ಜಾವ ಮಹಾರಾಷ್ಟ್ರದ (Maharashtra) ರಾಯಗಡ ಜಿಲ್ಲೆಯಲ್ಲಿ ಈ ದುರಂತ ನಡೆದಿದ್ದು, ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಅಪಘಾತಕ್ಕೀಡಾದ ಬಸ್ ಮುಂಬೈನಿಂದ ಪುಣೆಗೆ ತೆರಳುತ್ತಿತ್ತು. ಬೆಳಗಿನ ಜಾವ ಎಲ್ಲರೂ ನಿದ್ದೆಯಲ್ಲಿದ್ದರು. ಈ ವೇಳೆ ದಿಢೀರ್ ಬಸ್ ಕಣಿವೆಗೆ ಉರುಳಿಬಿದ್ದಿದೆ. ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ಅರಿಯುವ ಮೊದಲೇ ಬಸ್‌ನಲ್ಲಿ ಇದ್ದ 12ಕ್ಕೂ ಹೆಚ್ಚು ಜನ ಕೊನೆಯುಸಿರು ಎಳೆದಿದ್ದಾರೆ. ಇನ್ನು ಮಿಕ್ಕಂತೆ 28ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಹಾಗೂ ಅದೇ ದಾರಿಯಲ್ಲಿ ಹೋಗುತ್ತಿದ್ದವರು ಸಹಾಯಕ್ಕೆ ಬಂದಿದ್ದಾರೆ. ಸುದ್ದಿ ತಿಳಿದ ರಕ್ಷಣಾ ಪಡೆ ಅಧಿಕಾರಿಗಳು ಪರಿಹಾರ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬಸ್ ಸಂಪೂರ್ಣ ಛಿದ್ರ ಛಿದ್ರ
ಅಂದಹಾಗೆ ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ ಬಸ್ ಕಣಿವೆಗೆ ಉರುಳಿಬಿದ್ದ ನಂತರ ಬಸ್ ಟಾಪ್ ಸಂಪೂರ್ಣ ಛೀದ್ರ ಛಿದ್ರವಾಗಿ ಹೋಗಿದೆ. ಅಲ್ಲದೆ ಬಸ್‌ನಲ್ಲಿದ್ದ ಬಹುತೇಕ ಸೀಟ್‌ಗಳು ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೆಳಗೆ ಬಿದ್ದು ಬಂಡೆಗೆ ಢಿಕ್ಕಿಯಾದ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಮೃತರಲ್ಲಿ ಮಕ್ಕಳು ಕೂಡ ಇದ್ದರು ಎನ್ನಲಾಗಿದ್ದು, ಇನ್ನೂ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.
₹5 ಲಕ್ಷ ಪರಿಹಾರ ಘೋಷಣೆ
ಮಹಾರಾಷ್ಟ್ರ ಸರ್ಕಾರದಿಂದ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ. ಖಾಸಗಿ ಬಸ್ ಅಪಘಾತಕ್ಕೆ ಈಡಾಗಿದ್ದು, ಪರಿಶೀಲನೆ ನಡೆಯುತ್ತಿದೆ. ಗಾಯಗೊಂಡವರ ಚಿಕಿತ್ಸೆ ವೆಚ್ಚ ಸರ್ಕಾರವೇ ಭರಿಸಲಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಅಲ್ಲದೆ ಘಟನೆ ಬಗ್ಗೆ ಸೂಕ್ತ ತನಿಖೆಗೂ ಮಹಾರಾಷ್ಟ್ರ ಸರ್ಕಾರ ಆದೇಶ ನೀಡಿದೆ. ಈ ದುರಂತ ಬಸ್ ಪ್ರಯಾಣಿಕರಲ್ಲಿ ಆತಂಕ ತರುವ ಜೊತೆಗೆ, ಮಹಾರಾಷ್ಟ್ರದಲ್ಲಿ ಬಸ್‌ಗಳ ಸೇಫ್ಟಿ ಬಗ್ಗೆ ದೊಡ್ಡ ಪ್ರಶ್ನೆ ಏಳುವಂತೆ ಮಾಡಿದೆ.

ಚಾಲಕನ ನಿಯಂತ್ರಣ ತಪ್ಪಿ ದುರಂತ
ಅಂದಹಾಗೆ ಈ ದುರಂತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಲೋನಾವಾಲಾ ಬಳಿಯ ಖಂಡಾಲ ಘಾಟ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಣಿವೆಗೆ ಉರುಳಿದೆ ಎನ್ನಲಾಗುತ್ತಿದೆ. ಬೆಳಗಿನ ಜಾವ 4.30ರ ಆಸುಪಾಸಿನಲ್ಲಿ ಖಂಡಾಲ ಘಾಟ್‌ನ ಶಿಂಡ್ರೋಬಾ ದೇವಾಲಯದ ಬಳಿ ಡ್ರೈವರ್ ನಿಯಂತ್ರಣ ಕಳೆದುಕೊಂಡಿದೆ ಬಸ್. ಇದಾದ ಬಳಿಕ ನಡೆದಿದ್ದು ಮಾತ್ರ ಘೋರ ದುರಂತ. ಅಷ್ಟಕ್ಕೂ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯಲ್ಲಿದ್ದ ತಡೆಗೋಡೆಗೆ ಗುದ್ದಿ 500 ಅಡಿ ಆಳದ ಕಣಿವೆಗೆ ಉರುಳಿ ಬಿದ್ದಿದೆ. ಇನ್ನೂ ಕತ್ತಲೆ ಆವರಿಸಿದ್ದ ಕಾರಣ ಕೆಲಕಾಲ ಈ ಸುದ್ದಿ ಯಾರಿಗೂ ತಿಳಿದಿರಲಿಲ್ಲ ಎನ್ನಲಾಗಿದೆ.
ಮಹಾರಾಷ್ಟ್ರ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು ಗಾಯಗೊಂಡಿರುವ ಪ್ರಯಾಣಿಕರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಆವರಿಸಿದೆ. ಸುದ್ದಿ ತಿಳಿದು ಅಪಘಾತದ ಸ್ಥಳಕ್ಕೆ ಬಂದ ಮೃತರ ಸಂಬಂಧಿಕರು, ಗದ್ಗದಿತರಾಗಿದ್ದರು. ಕೆಲ ಗಂಟೆಗಳ ಹಿಂದೆ ಮನೆಯಿಂದ ಹೊರಟವರು ಉಸಿರು ಚೆಲ್ಲಿರುವುದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದರು.

ಒಟ್ನಲ್ಲಿ ಮಹಾರಾಷ್ಟ್ರದಲ್ಲಿ ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಬಸ್ ಕಣಿವೆ ಉರುಳಿರುವ ಕಾರಣ ಮುಂಬೈನಿಂದ ಪುಣೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಬಸ್ ಮೇಲಕ್ಕೆತ್ತಲು ರಕ್ಷಣಾ ಸಿಬ್ಬಂದಿ ಸಾಕಷ್ಟು ಹರಸಾಹಸ ಮಾಡುತ್ತಿದ್ದಾರೆ. 500 ಅಡಿ ಆಳದ ಕಣಿವೆಗೆ ಬಿದ್ದಿರುವ ಕಾರಣ ಬಸ್ ಮೇಲೆತ್ತಲು ತೀರಾ ಕಷ್ಟವಾಗುತ್ತಿದ್ದು, ಸ್ಥಳೀಯರು ಕೂಡ ರಕ್ಷಣಾ ಸಿಬ್ಬಂದಿಗೆ ಸಾಥ್ ನೀಡಿದ್ದಾರೆ. ಬಸ್ ಮೇಲೆ ಎತ್ತಿದ ಬಳಿಕ ಸಾವಿನ ಸಂಖ್ಯೆ ಹಾಗೂ ಗಾಯಗೊಂಡವರ ಸಂಖ್ಯೆ ಬಗ್ಗೆ ನಿಖರತೆ ಸಿಗಲಿದೆ.












Click it and Unblock the Notifications