Budget 2024: ರೈತರ ಬಹು ದಿನದ ಕನಸಾದ ಕನಿಷ್ಠ ಬೆಂಬಲ ಬೆಲೆ ಕಾನೂನಿಗೆ ಒತ್ತಾಯಿಸುತ್ತಿದೆ ಕಾಂಗ್ರೆಸ್
ನವದೆಹಲಿ, ಜುಲೈ. 22: ಕೇಂದ್ರ ಬಜೆಟ್ ಮಂಡನೆಗೆ ಒಂದು ದಿನ ಮೊದಲು, ಕೇಂದ್ರವು ಎಂಎಸ್‌ಪಿಯನ್ನು ಕಾನೂನುಬದ್ಧಗೊಳಿಸುವ ಮೂರು ಪ್ರಮುಖ ಘೋಷಣೆಗಳನ್ನು ಮಾಡಬೇಕು. ಸ್ವಾಮಿನಾಥನ್ ಸೂತ್ರದ ಆಧಾರದ ಮೇಲೆ ಎಂಎಸ್‌ಪಿಯನ್ನು ನಿಗದಿಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ರೈತರ ಸಾಲ ಮನ್ನಾ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಶಾಶ್ವತ ಆಯೋಗವನ್ನು ಸ್ಥಾಪಿಸಬೇಕು ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಸ್ತುವಾರಿ ಜೈರಾಮ್ ರಮೇಶ್ ಮಾತನಾಡಿ, ಕೇಂದ್ರ ಸರ್ಕಾರದ ಎಲ್ಲ ವೈಫಲ್ಯಗಳಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಸಮರ್ಥತೆ ಅತ್ಯಂತ ಹಾನಿಕಾರಕವಾಗಿದೆ ಎಂದಿದ್ದಾರೆ.

"ಯುಪಿಎ ಸರ್ಕಾರ ಗೋಧಿಯ ಎಂಎಸ್‌ಪಿ ಅನ್ನು 119% ಮತ್ತು ಅಕ್ಕಿಯ ಎಂಎಸ್‌ಪಿ ಅನ್ನು 134% ರಷ್ಟು ಹೆಚ್ಚಿಸಿದ್ದರೆ, ಮೋದಿ ಸರ್ಕಾರವು ಕ್ರಮವಾಗಿ ಗೋಧಿಯ ಎಂಎಸ್‌ಪಿ 47% ಮತ್ತು ಅಕ್ಕಿಯ ಎಂಎಸ್‌ಪಿ 50% ರಷ್ಟು ಹೆಚ್ಚಿಸಿದೆ. ಇದು ಹಣದುಬ್ಬರ ಮತ್ತು ಏರುತ್ತಿರುವ ಬೆಲೆಗಳ ನಡುವೆ ಕೃಷಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಕಾಗುವುದಿಲ್ಲ. ರೈತರ ಸಾಲ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ " ಎಂದು ಜೈ ರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎನ್‌ಎಸ್‌ಎಸ್‌ಒ) ಪ್ರಕಾರ, 2013 ರಿಂದ ಬಾಕಿ ಇರುವ ಸಾಲಗಳು ಶೇಕಡಾ 58 ರಷ್ಟು ಹೆಚ್ಚಾಗಿದೆ. ಅರ್ಧಕ್ಕೂ ಹೆಚ್ಚು ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದು, 2014ರಿಂದ 1 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿರುವುದನ್ನು ನೋಡಿದ್ದೇವೆ ಎಂದು ಜೈ ರಾಮ್ ರಮೇಶ್ ಉಲ್ಲೇಖಿಸಿದ್ದಾರೆ.
"ಮುಂಬರುವ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕೃಷಿ ಕಲ್ಯಾಣಕ್ಕಾಗಿ ಮೂರು ಪ್ರಮುಖ ಘೋಷಣೆಗಳನ್ನು ಮಾಡಬೇಕಾಗಿದೆ. ಸ್ವಾಮಿನಾಥನ್ ಆಯೋಗವು ಶಿಫಾರಸು ಮಾಡಿದಂತೆ C2 + 50% ಸೂತ್ರಕ್ಕೆ ಅನುಗುಣವಾಗಿ ಎಂಎಸ್‌ಪಿ ಅಡಿಯಲ್ಲಿ ಬರುವ 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಅನ್ನು ಹೆಚ್ಚಿಸಬೇಕು" ಎಂದು ಅವರು ತಿಳಿಸಿದ್ದಾರೆ.
ಸರ್ಕಾರವು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಸ್ಥಾನಮಾನವನ್ನು ನೀಡಬೇಕು ಮತ್ತು ಆಯಕಟ್ಟಿನ ಸಂಗ್ರಹಣೆ, ಉತ್ತಮ ನಿಯಂತ್ರಣ ಮತ್ತು ಬೆಲೆ ವ್ಯತ್ಯಾಸ ಪರಿಹಾರ ಸೇರಿದಂತೆ ಅದನ್ನು ದೃಢವಾಗಿ ಜಾರಿಗೆ ತರಲು ವ್ಯವಸ್ಥೆಯನ್ನು ಸ್ಥಾಪಿಸಬೇಕು. ಅದಕ್ಕೆ ಬೇಕಾಗಿರುವುದು ದೃಢಸಂಕಲ್ಪ ಮತ್ತು ಧೈರ್ಯ ಮಾತ್ರ ಎಂದು ಕೇಂದ್ರ ಸರ್ಕಾರಕ್ಕೆ ತಿವಿದಿದ್ದಾರೆ.

ಕೃಷಿ ಸಾಲ ಮನ್ನಾ ಅಗತ್ಯವನ್ನು ನಿರ್ಣಯಿಸಲು ಮತ್ತು ಅನುಷ್ಠಾನದ ಮೇಲ್ವಿಚಾರಣೆಗಾಗಿ ಶಾಶ್ವತ ಆಯೋಗವನ್ನು ಸ್ಥಾಪಿಸಬೇಕು. ತೀರಾ ಅಗತ್ಯವಾದ ಈ ಕ್ರಮವು ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಪರಿಹಾರವನ್ನು ನೀಡುತ್ತದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಈ ಮೂರೂ ಕ್ರಮಗಳನ್ನು ಕೈಗೊಳ್ಳುವ ಎಲ್ಲ ಅಧಿಕಾರ ಕೇಂದ್ರ ಸರಕಾರಕ್ಕಿದೆ ಎಂಬುದು ನೆನಪಿರಲಿ. ಪ್ರಧಾನಿ ಕೊಂಚ ಧೈರ್ಯ ಪ್ರದರ್ಶಿಸಿ ಮೊಂಡುತನ ಬಿಟ್ಟು ರೈತರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾಯುತ್ತಿದೆ" ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
"ನವೆಂಬರ್ 2021 ರಲ್ಲಿ, ಮೂರು ಕರಾಳ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡ ನಂತರ, ಸ್ವಯಂ ಘೋಷಿತ ನಾನ್ ಬೈಯಾಲಾಜಿಕಲ್ ಪ್ರಧಾನ ಮಂತ್ರಿ ಎಂಎಸ್‌ಪಿಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲು ಸಮಿತಿಯ ರಚನೆಯನ್ನು ಘೋಷಿಸಿದರು. ಸಮಿತಿಯನ್ನು ರಚಿಸಲು ಸರ್ಕಾರವು ಎಂಟು ತಿಂಗಳುಗಳನ್ನು ತೆಗೆದುಕೊಂಡಿತು. ಎರಡು ವರ್ಷಗಳೇ ಕಳೆದರೂ ಇನ್ನೂ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಬಜೆಟ್ ಮಂಡಿಸಲಿದ್ದಾರೆ.












Click it and Unblock the Notifications