ಬಜೆಟ್ 2021: ವಿಪಕ್ಷ ನಾಯಕರ ಮನವೊಲಿಕೆಗೆ ಮುಂದಾದ ಕೇಂದ್ರ ಸರ್ಕಾರ
ನವದೆಹಲಿ, ಜನವರಿ 30: ಈ ಬಾರಿಯ ಬಜೆಟ್ ಅಧಿವೇಶನ ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ನಡೆಯುವಂತೆ ಮಾಡಲು ಕೇಂದ್ರ ಸರ್ಕಾರದ ಪ್ರಮುಖರು ವಿಪಕ್ಷಗಳ ನಾಯಕರ ಮನವೊಲಿಕೆ ಆರಂಭಿಸಿದ್ದಾರೆ. ವಿರೋಧಪಕ್ಷಗಳ ಸಂಸದೀಯ ನಾಯಕರನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಭೇಟಿ ಮಾಡುತ್ತಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಅಧಿವೇಶನ ಸುಗಮವಾಗಿ ನಡೆಸಲು ಅನುವು ಮಾಡಿಕೊಡುವಂತೆ ಕೋರುತ್ತಿದ್ದಾರೆ.
ರಾಜ್ಯ ಖಾತೆ ಸಚಿವರಾದ ಅರ್ಜುನ್ ರಾಮ್ ಮೇಘ್ವಾಲ್ ಮತ್ತು ವಿ. ಮುರಳೀಧರನ್ ಕೂಡ ಈ ಸಭೆಯ ಭಾಗವಾಗಿದ್ದಾರೆ. ಬಜೆಟ್ ಅಧಿವೇಶನದ ಮೊದಲ ದಿನವಾದ ಶುಕ್ರವಾರ, ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಸಂಸತ್ತಿನ ಜಂಟಿ ಸದನಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಆದರೆ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಾಗಿ ವಿರೋಧಪಕ್ಷಗಳು ಈ ಭಾಷಣವನ್ನು ಬಹಿಷ್ಕರಿಸಿದ್ದವು. ಈಹಿನ್ನೆಲೆಯಲ್ಲಿ ವಿಪಕ್ಷಗಳ ಮನವೊಲಿಸುವ ಕಾರ್ಯ ಮಾಡಲಾಗುತ್ತಿದೆ.
ಸೋಮವಾರದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಆದರೆ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ, ಗಲಭೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಅವಕಾಶಕ್ಕೆ ಕಾದಿರುವ ವಿಪಕ್ಷಗಳು, ಬಜೆಟ್ ಮಂಡನೆ ಹಾಗೂ ಅದರ ಚರ್ಚೆಗೆ ಅವಕಾಶ ನೀಡುವ ಸಾಧ್ಯತೆ ಕಡಿಮೆ. ಹೀಗಾಗಿ ಸಂಸತ್‌ನಲ್ಲಿನ ಗದ್ದಲವನ್ನು ಆದಷ್ಟು ಕಡಿಮೆ ಮಾಡುವ ಪ್ರಯತ್ನವಾಗಿ ಈ ಸಭೆಗಳನ್ನು ನಡೆಸಲಾಗುತ್ತಿದೆ. ಕಳೆದ ಮುಂಗಾರು ಅಧಿವೇಶನದಲ್ಲಿ ಕೂಡ ಭಾರಿ ಗದ್ದಲ, ಗಲಾಟೆ ನಡೆದಿದ್ದವು. ಅದರ ನಡುವೆಯೇ ಸಂಸತ್ತು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಅಂಗೀಕರಿಸಿತ್ತು.

ಕಳೆದ ವರ್ಷ ಕೃಷಿ ಮಸೂದೆಗಳನ್ನು ಮಂಡಿಸಿದ್ದಾಗ ವಿರೋಧಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಕೃಷಿ ಮಸೂದೆಯ ಪ್ರತಿಗಳನ್ನು ಸಂಸತ್ತಿನ ಒಳಗೆಹರಿದು ಎಸೆದಿದ್ದವು. ಆದರೆ ಸಂಸತ್‌ನಲ್ಲಿ ಬಹುಮತ ಹೊಂದಿದ್ದ ಸರ್ಕಾರ, ಸುಲಭವಾಗಿ ಕಾಯ್ದೆಗಳನ್ನು ಅಂಗೀಕರಿಸಿತ್ತು.












Click it and Unblock the Notifications