ಬಿಎಸ್ ಎನ್ ಎಲ್ ನಲ್ಲಿ ವಿಆರ್ ಎಸ್ ಯೋಜನೆ? 54 ಸಾವಿರ ಸಿಬ್ಬಂದಿ ಕಡಿತ!
ನವದೆಹಲಿ, ಏಪ್ರಿಲ್ 3: ಸರಕಾರಿ ಒಡೆತನದ ಭಾರತ್ ಸಂಚಾರ್ ನಿಗಮ್ ನ 54 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಕಂಪನಿಯ ಆಡಳಿತ ಮಂಡಳಿಯ ಎದುರು 54 ಸಾವಿರ ಮಂದಿಯನ್ನು ಕೆಲಸದಿಂದ ತೆಗೆಯುವ ಪ್ರಸ್ತಾವ ಮುಂದಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಲೋಕಸಭೆ ಚುನಾವಣೆ ಮುಗಿಯಲಿ ಎಂದು ಕಾಯಲಾಗುತ್ತಿದೆ. ವರದಿಗಳ ಪ್ರಕಾರ, ಬಿಎಸ್ ಎನ್ ಎಲ್ ಆಡಳಿತ ಮಂಡಳಿಯು ಹತ್ತು ಸಲಹೆ ಪೈಕಿ ಮೂರನ್ನು ಒಪ್ಪಿಕೊಂಡಿದೆ. ಈ ತಜ್ಞರ ಸಮಿತಿಯನ್ನು ಸರಕಾರವೇ ರಚಿಸಿದ್ದು, ಮಾರ್ಚ್ ನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸ್ವಯಂ ನಿವೃತ್ತಿ (ವಿಆರ್ ಎಸ್) ಪ್ಯಾಕೇಜ್ ಅಥವಾ ಉದ್ಯೋಗ ಕಡಿತ ಘೋಷಣೆ ಮತ್ತು ಟೆಲಿಕಾಂ ಸಂಸ್ಥೆಯನ್ನೇ ಮುಚ್ಚುವುದರಿಂದ ಉದ್ಯೋಗಿಗಳ ಹಾಗೂ ಸದ್ಯದ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ. ಮುಂದೆ ಏನು ಮಾಡಬೇಕು ಎಂದು ಕಾದು ನೋಡಬೇಕು ಎಂದು ಮೂಲಗಳು ತಿಳಿಸಿವೆ.

ಇದೀಗ ನಿವೃತ್ತ ವಯಸ್ಸನ್ನು 60ರಿಂದ 58ಕ್ಕೆ ಇಳಿಸಲು ಮಾಡಿರುವ ಶಿಫಾರಸನ್ನು ಬಿಎಸ್ ಎನ್ ಎಲ್ ಆಡಳಿತ ಮಂಡಳಿ ಒಪ್ಪಿಕೊಂಡಿದೆ. ವಿಆರ್ ಎಸ್ ಅನ್ನು ಐವತ್ತು ವರ್ಷಕ್ಕೆ ಮೇಲ್ಪಟ್ಟವರಿಗೆ ಅನ್ವಯಿಸುತ್ತದೆ ಮತ್ತು ಬಿಎಸ್ ಎನ್ ಎಲ್ ಗೆ 4G ತರಂಗಾಂತರ ಹಂಚಿಕೆ ಬಗ್ಗೆ ನಿರ್ಧರಿಸಿದೆ.
ಈಗ ವಿಆರ್ ಎಸ್ ಯೋಜನೆ ಜಾರಿಗೆ ತಂದರೆ 54,451 ಸಿಬ್ಬಂದಿಗೆ ಇದು ಅನ್ವಯ ಆಗುತ್ತದೆ. ಅಂದರೆ ಆ ಪ್ರಮಾಣ 31%ನ ಒಟ್ಟು ಸಂಖ್ಯೆ 1,74,312ನದಾಗಿರುತ್ತದೆ. ನಿವೃತ್ತಿ ವಯಸ್ಸನ್ನು ಇಳಿಕೆ ಮಾಡಿರುವುದರಿಂದ 33,568 ಸಿಬ್ಬಂದಿಯನ್ನು ಕಡಿಮೆ ಮಾಡುತ್ತದೆ. ಮುಂದಿನ ಆರು ವರ್ಷಗಳಲ್ಲಿ ಬಿಎಸ್ ಎನ್ ಎಲ್ ಗೆ ವೇತನದಲ್ಲಿ 13,895 ಕೋಟಿ ಉಳಿತಾಯ ಆಗುತ್ತದೆ.
ಬಿಎಸ್ ಎನ್ ಎಲ್ ನ ಸದ್ಯಕ್ಕೆ ಇರುವ ಸಿಬ್ಬಂದಿಯ ಅಂದಾಜು ಸರಾಸರಿ ವಯಸ್ಸು 55 ವರ್ಷಕ್ಕಿಂತ ಹೆಚ್ಚಿದೆ. ಬಿಎಸ್ ಎನ್ ಎಲ್ ಹಾಗೂ ಎಂಟಿಎನ್ ಎಲ್ ಫೆಬ್ರವರಿ ತಿಂಗಳಲ್ಲಿ ಸಂಬಳ ಪಾವತಿಸಲು ಆಗಿರಲಿಲ್ಲ. ಈಗ ಎರಡೂ ಕಂಪನಿಯು ಸರಕಾರದ ಬಳಿ ನೆರವು ಕೋರಿದೆ. ಆದರೆ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ.












Click it and Unblock the Notifications