BSF: ಗಂಗಾನದಿಯಲ್ಲಿ ಬಿಎಸ್‌ಎಫ್ ಮಹಿಳಾ ತಂಡದ ಶಕ್ತಿ ಪ್ರದರ್ಶನ: ಸ್ವಚ್ಛತೆ, ಸಬಲೀಕರಣಕ್ಕಾಗಿ 2,325 ಕಿಮೀ ರಾಫ್ಟಿಂಗ್!
ಈ ಕಾಲದ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಂಡು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹೋಟೆಲ್, ಅಂಗಡಿ, ಫಾರ್ಮಸಿ, ಆಸ್ಪತ್ರೆ, ಬ್ಯಾಂಕ್, ಸಾರಿಗೆ ಸಂಸ್ಥೆ, ಪೊಲೀಸ್ ಇಲಾಖೆ, ನ್ಯಾಯಾಲಯ, ಸೇನೆ, ಸಮಾಜಸೇವೆ, ರಾಜಕೀಯ, ಕ್ರೀಡೆ, ಸಾಹಿತ್ಯ, ಕಲೆ, ಶಿಕ್ಷಣ ಹೀಗೆ ಹಲವಾರು ಕ್ಷೇತ್ರಗಳಲ್ಲೂ ಮಹಿಳೆಯರ ಉಪಸ್ಥಿತಿ ಎದ್ದು ಕಾಣುತ್ತಿದೆ. ಇದು ಸಮಾಜದಲ್ಲಾದ ಬದಲಾವಣೆಗೆ ಹಿಡಿದ ಕೈಗನ್ನಡಿ. ಇದಲ್ಲದೆ ಬಿಎಸ್‌ಎಫ್ ಮಹಿಳಾ ತಂಡ ಮತ್ತೊಂದು ಇತಿಹಾಸ ಸೃಷ್ಟಿಸಲು ಮುಂದಾಗಿದೆ.
ಅಂದೇನೆಂದರೆ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ( BSF)ನ ಮಹಿಳಾ ತಂಡ ಸಾವಿರಾರು ಕಿಲೋಮೀಟರ್ ಉದ್ದದ ರಾಫ್ಟಿಂಗ್ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಉತ್ತರಾಖಂಡದ ಗಂಗೋತ್ರಿಯಿಂದ ಪಶ್ಚಿಮ ಬಂಗಾಳದ ಗಂಗಾ ಸಾಗರದವರೆಗೆ ಸರಿಸುಮಾರು 2,325 ಕಿಲೋಮೀಟರ್ ರಾಫ್ಟಿಂಗ್ ಮೂಲಕ ಕಠಿಣ ಪ್ರಯಾಣವನ್ನು ಬಿಎಸ್‌ಎಫ್ ಮಹಿಳಾ ತಂಡ ಪ್ರಾರಂಭಿಸುತ್ತಿದೆ.

ಈ ರಾಫ್ಟಿಂಗ್ ನವೆಂಬರ್ 2 ರಂದು ಆರಂಭಗೊಂಡು 53 ದಿನಗಳ ಕಾಲ ನಡೆಯುತ್ತದೆ. ಇದು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳಲ್ಲಿ ಸಂಚರಿಸಲಿದೆ. ಡಿಸೆಂಬರ್ 24 ರಂದು ಗಂಗಾ ಸಾಗರದಲ್ಲಿ ಅಂತ್ಯಗೊಳ್ಳಲಿದೆ. ಈ ಸಾಹಸ ಪ್ರದರ್ಶನದ ಮುಖ್ಯ ಉದ್ದೇಶ ಗಂಗಾ ನದಿಯ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಜೊತೆಗೆ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಬಿಎಸ್‌ಎಫ್ ಮಹಿಳಾ ತಂಡ ಗಂಗೋತ್ರಿಯಲ್ಲಿ ಪ್ರಯಾಣ ಆರಂಭಿಸಿ ಉತ್ತರಾಖಂಡದ ದೇವಪ್ರಯಾಗಕ್ಕೆ ತೆರಳಲಿದೆ. ದೇವಪ್ರಯಾಗ್ ಘಾಟ್‌ನಲ್ಲಿ ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ ರಾಜಾ ಬಾಬು ಸಿಂಗ್ ಅವರು ಬಿಎಸ್‌ಎಫ್ ಮಹಿಳಾ ತಂಡವನ್ನು ಸ್ವಾಗತಿಸಲಿದ್ದಾರೆ. ಮೊದಲ ದಿನ (ನವೆಂಬರ್ 4) ಹರಿದ್ವಾರದಲ್ಲಿ ಈ ತಂಡ ತಂಗಲಿದೆ. ಇಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಮತ್ತು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಂಡವನ್ನು ಸ್ವಾಗತಿಸಲಿದ್ದಾರೆ. ಬಳಿಕ BSF ಬ್ರಾಸ್ ಬ್ಯಾಂಡ್ ಹರಿದ್ವಾರದ ಚಂಡಿ ಘಾಟ್‌ನಲ್ಲಿ ಮಹಿಳಾ ತಂಡವನ್ನು ಬರಮಾಡಿಕೊಳ್ಳಲಿದೆ.
ರಾಫ್ಟಿಂಗ್ ಉದ್ದೇಶ
ಗಂಗಾ ನದಿಯ ಪರಿಶುದ್ಧತೆಯನ್ನು ಕಾಪಾಡುವುದರ ಜೊತೆಗೆ ಮಹಿಳಾ ಸಬಲೀಕರಣವನ್ನು ಎತ್ತಿ ತೋರಿಸುವುದರ ಬಗ್ಗೆ ಜಾಗೃತಿ ಮೂಡಿಸುವುದು ಈ ರಾಫ್ಟಿಂಗ್‌ನ ಪ್ರಮುಖ ಉದ್ದೇಶವಾಗಿದೆ. 60 ಸದಸ್ಯರ ಬಿಎಸ್‌ಎಫ್ ತಂಡವು 20 ಮಹಿಳಾ ರಾಫ್ಟರ್‌ಗಳನ್ನು ಒಳಗೊಂಡಿದೆ. ಇವರು ತಮ್ಮ ಧೈರ್ಯ ಮತ್ತು ಬದ್ಧತೆಯ ಮೂಲಕ ರಾಷ್ಟ್ರವ್ಯಾಪಿ ಮಹಿಳೆಯರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದ್ದಾರೆ. ಈ ಯಾತ್ರೆಯ ಗಂಗೆಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಒತ್ತಿಹೇಳುತ್ತದೆ ಮತ್ತು ಸಮಾಜದಲ್ಲಿ ಮಹಿಳೆಯರ ಪ್ರಮುಖ ಪಾತ್ರವನ್ನು ತೋರಿಸುತ್ತದೆ.
ಗಂಗಾ ಸ್ವಚ್ಛತೆ ಮತ್ತು ಮಹಿಳಾ ಸಬಲೀಕರಣ
ಈ ಯಾತ್ರೆಯ ಮಾರ್ಗದಲ್ಲಿ ಬಿಎಸ್ಎಫ್ ತಂಡವು ನದಿ ತೀರದ ಸಮುದಾಯಗಳನ್ನು ಭೇಟಿ ಮಾಡಿ ವಿವಿಧ ಸ್ಥಳಗಳಲ್ಲಿ ತಂಗಲಿದೆ. ನವೆಂಬರ್ 9 ರಂದು ಮಹಿಳಾ ತಂಡ ನದಿ ತೀರದ ಸ್ಥಳೀಯರೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಬುಲಂದ್‌ಶಹರ್ ತಲುಪುತ್ತದೆ. ಅಲ್ಲಿನ ಸಮುದಾಯಗಳೊಂದಿಗೆ ಸಂವಾದ ನಡೆಸುವ ಮೂಲಕ ಗಂಗಾನ ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಸಮೃದ್ಧ ಸಮಾಜವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿಯ ಬಗ್ಗೆ ಸಂದೇಶಗಳನ್ನು ಪ್ರಚಾರ ಮಾಡುತ್ತದೆ. ಅಲ್ಲದೇ ದಾರಿಯುದ್ದಕ್ಕೂ ಸ್ಥಳೀಯರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಜೊತೆಗೆ ಗಂಗಾ ಆರತಿ ಕೂಡ ಮಾಡಲಾಗುತ್ತದೆ.
ಡಿಸೆಂಬರ್ 24 ರಂದು ಪಶ್ಚಿಮ ಬಂಗಾಳದ ಗಂಗಾ ಸಾಗರದಲ್ಲಿ ರಾಫ್ಟಿಂಗ್ ಪೂರ್ಣ
ಈ ಯಾತ್ರೆಯು 2024 ರ ಡಿಸೆಂಬರ್ 24 ರಂದು ಗಂಗಾ ಸಾಗರದಲ್ಲಿ ಮುಕ್ತಾಯಗೊಳ್ಳಲಿದೆ. ಈ ಯಾತ್ರೆ ಮೂಲಕ ಬಿಎಸ್‌ಎಫ್ ಬಲಿಷ್ಠ ಭಾರತದ ಜೊತೆಗೆ ಸ್ವಚ್ಛ ಮತ್ತು ಸಮೃದ್ಧ ಗಂಗಾ ಸಂದೇಶವನ್ನು ಹರಡುವ ಗುರಿಯನ್ನು ಹೊಂದಿದೆ. ಈ ಪ್ರಯಾಣ ಗಂಗೆಯ ಪರಿಶುದ್ಧತೆಯನ್ನು ಉತ್ತೇಜಿಸುತ್ತದೆ. ಮಾತ್ರವಲ್ಲದೆ ಸ್ವಚ್ಛ, ಸಶಕ್ತ ರಾಷ್ಟ್ರದಲ್ಲಿ ಮಹಿಳೆಯರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ.












Click it and Unblock the Notifications